3 ವರ್ಷದಿಂದ ನಡೆಯುತ್ತಿದ್ದ ಕೃತ್ಯ| ಬಿಬಿಎಂ ವಿದ್ಯಾರ್ಥಿಗಳು ಸೇರಿ ಮೂವರು ಅಂತಾರಾಜ್ಯ ಡ್ರಗ್ಸ್ ದಂಧೆಕೋರರ ಸೆರೆ| ಸೋಪ್ ಬಾಕ್ಸ್‌ಗಳಲ್ಲಿ ಸಂಗ್ರಹಿಸಿ ಸಾಗಾಣೆ| ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ|
ಬೆಂಗಳೂರು(ಏ.13): ಮ್ಯಾನ್ಮಾರ್‌ನಿಂದ ಬರುತ್ತಿದ್ದ ಮಾದಕ ವಸ್ತುಗಳನ್ನು ಗೃಹೋಪಯೋಗಿ ವಸ್ತುಗಳಲ್ಲಿ ಅಡಗಿಸಿಟ್ಟು ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ ಬಿಬಿಎ ವಿದ್ಯಾರ್ಥಿ ಸೇರಿ ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ಗಳು ಕೆ.ಜಿ.ಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಣಿಪುರದ ಮೊಹಮ್ಮದ್ ಸಾಜಿದ್ಖಾನ್ (27), ಮೊಹಮ್ಮದ್ ಅಜಾಜ್ (27) ಮತ್ತು ಸಪಮ್ ಸೀತಲ್ ಕುಮಾರ್ ಸಿಂಗ್ (25) ಬಂಧಿತರು. ಅವರಿಂದ 60 ಲಕ್ಷ ಮೌಲ್ಯದ 130 ಗ್ರಾಂ ಹೆರಾಯಿನ್, 2480 ಎಕ್ಸಟಸಿ ಮಾತ್ರೆಗಳು, 9,500 ನಗದು, ಪ್ಲಾಸ್ಟಿಕ್ ಕವರ್ಗಳು, ಸೋಪು ಬಾಕ್ಸ್ಗಳು, ನಾಲ್ಕು ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಹೇಳಿದ್ದಾರೆ.
ಆರೋಪಿಗಳು ಮೂರು ವರ್ಷಗಳಿಂದ ಬಾಣಸವಾಡಿ, ಕಮ್ಮನಹಳ್ಳಿ, ಹೆಣ್ಣೂರು ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಈ ಪೈಕಿ ಮೊಹಮ್ಮದ್ ಸಾಜಿದ್ಖಾನ್ ಮತ್ತು ಮೊಹಮ್ಮದ್ ಅಜಾದ್ ಶಿವಾಜಿನಗರದ ಚಿಕನ್ ಅಂಗಡಿಯಲ್ಲಿ ದಿನಗೂಲಿ ನೌಕರರಾಗಿದ್ದರು. ಸಪಮ್ ಸೀತಲ್ ಕುಮಾರ್ ಸಿಂಗ್ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ಬಿಬಿಎ ವಿದ್ಯಾರ್ಥಿಯಾಗಿದ್ದ.
ಆಂಧ್ರದಿಂದ ಬೆಂಗಳೂರಿಗೆ ಗಾಂಜಾ ತಂದು ಮಾರುತ್ತಿದ್ದ ಮೂವರು ಬಲೆಗೆ
ಇತ್ತೀಚೆಗೆ ಆರೋಪಿಗಳು ಕೆ.ಜಿ.ಹಳ್ಳಿ ಠಾಣೆಯ ಕಬ್ಬನ್ ರಸ್ತೆ, ಎಚ್ಬಿಆರ್ ಲೇಔಟ್, ಬಿಡಿಎ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆಯಲ್ಲಿ ಬೈಕ್ವೊಂದರಲ್ಲಿ ಮಾದಕ ವಸ್ತು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೆ.ಜಿ.ಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಎಲ್.ಸಂತೋಷ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಸೋಪ್ ಬಾಕ್ಸ್‌ಗಳಲ್ಲಿ ಸಂಗ್ರಹಿಸಿ ಸಾಗಾಣೆ
ಮ್ಯಾನ್ಮಾರ್ ದೇಶದ ಗಡಿಭಾಗ ಮಣಿಪುರಕ್ಕೆ ಬರುತ್ತಿದ್ದ ಡ್ರಗ್ಸ್ಗಳನ್ನು ಮಧ್ಯವರ್ತಿಗಳ ಮೂಲಕ ಆರೋಪಿಗಳು ಖರೀದಿಸುತ್ತಿದ್ದರು. ಬಳಿಕ ಮಿಕ್ಸರ್ ಗ್ರೈಂಡರ್, ಕುಕ್ಕರ್ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳ ಬಾಕ್ಸ್ಗಳ ಕೆಳಭಾಗದಲ್ಲಿ ಸಣ್ಣ-ಸಣ್ಣ ಸೋಪು ಬಾಕ್ಸ್ಗಳು ಹಾಗೂ ಪ್ಲಾಸ್ಟಿಕ್ ಕವರ್ಗಳಲ್ಲಿ ತುಂಬಿದ ಡ್ರಗ್ಸ್ ಪಾಕೆಟ್ಗಳನ್ನು ಇಡುತ್ತಿದ್ದರು. ಅಂತಹ ನಿರ್ದಿಷ್ಟಬಾಕ್ಸ್ಗಳ ಮೇಲೆ ಮಣಿಪುರಿ ಭಾಷೆಯಲ್ಲಿ ಕೋಡ್ ವರ್ಡ್ಗಳನ್ನು ಬರೆಯುತ್ತಿದ್ದರು. ಅವುಗಳು ಬೆಂಗಳೂರಿಗೆ ಬಂದ ಕೂಡಲೇ ಬಾಕ್ಸ್ಗಳನ್ನು ತೆರೆದು ಮಾದಕ ದ್ರವ್ಯ ಪಡೆದುಕೊಂಡು, ಬಳಿಕ ಬಾಕ್ಸ್ಗಳನ್ನು ಪ್ಯಾಕ್ ಮಾಡಿ ಕಳುಹಿಸಲಾಗಿತ್ತು. ಈ ರೀತಿ ಸುಮಾರು ಮೂರು ವರ್ಷಗಳಿಂದ ಆರೋಪಿಗಳು ದಂಧೆಯಲ್ಲಿ ತೊಡಗಿದ್ದಾರೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.