ಬಲವಂತವಾಗಿ ಹಿಂದೂ ಯುವಕನ ಮತಾಂತರ, ಬಳಿಕ ಇಸ್ಲಾಂ ಬಗ್ಗೆ ಪಾಠ ಮಾಡಿದ್ದ ಮುಸ್ಲಿಂ ಮುಖಂಡರು, ವರ್ಷಕ್ಕೆ ಮೂವರ ಮತಾಂತರ ಗುರಿ
ಬೆಂಗಳೂರು(ಅ.14): ಹಿಂದೂ ಯುವಕನನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ ಪ್ರಕರಣ ಸಂಬಂಧ ಬನಶಂಕರಿ ಠಾಣೆ ಪೊಲೀಸರು ಮಾಜಿ ಕಾರ್ಪೊರೇಟರ್ ಸೇರಿ ಮೂವರನ್ನು ಬಂಧಿಸಿದ್ದಾರೆ. ಬನಶಂಕರಿ ವಾರ್ಡ್ ಮಾಜಿ ಕಾರ್ಪೊರೇಟರ್ ಅನ್ಸರ್ ಪಾಷಾ, ಬನಶಂಕರಿಯ ಕಬರಸ್ತಾನ ಮಸೀದಿ ಅಧ್ಯಕ್ಷ ನಯಾಜ್ ಪಾಷಾ, ಮಸೀದಿ ಬೋಧಕ ಹಾಜಿ ಸಾಬ್ ಅಲಿ ಅಲಿಯಾಸ್ ಶಮೀನ್ ಷೇಕ್ ಬಂಧಿತರು. ಈ ಪ್ರಕರಣ ಸಂಬಂಧ ಈ ಹಿಂದೆ ಅತ್ತಾವರ ರೆಹಮಾನ್ ಮತ್ತು ಸಬ್ಬೀರ್ ಎಂಬುವವರನ್ನು ಬಂಧಿಸಿದ್ದರು. ಇದೀಗ ಮೂವರ ಬಂಧಿತರೊಂದಿಗೆ ಒಟ್ಟು ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಮಂಡ್ಯ ಜಿಲ್ಲೆ ಮದ್ದೂರಿನ ಯಡವನಹಳ್ಳಿಯ ಶ್ರೀಧರ(26) ಎಂಬಾತನನ್ನು ಒಂದು ವರ್ಷದ ಹಿಂದೆ ಬಲವಂತದಿಂದ ಮತಾಂತರ ಮಾಡಿದ್ದರು. ಸೆ.21ರಂದು ಸ್ನೇಹಿತೆಯ ಭೇಟಿಗಾಗಿ ಹುಬ್ಬಳ್ಳಿಗೆ ಬಂದಿದ್ದ ಶ್ರೀಧರ್ ಮೇಲೆ ಕೆಲವರು ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದರು. ವಿಚಾರಣೆ ವೇಳೆ ತನ್ನನ್ನು ಬಲವಂತವಾಗಿ ಮುಸ್ಲಿಂ ಧರ್ಮ ಮತಾಂತರ ಮಾಡಿರುವ ಬಗ್ಗೆ ಶ್ರೀಧರ್ ಹುಬ್ಬಳ್ಳಿ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ಮತಾಂತರ ಕೃತ್ಯ ಬೆಂಗಳೂರಿನಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಬನಶಂಕರಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ತನಿಖೆ ಕೈಗೊಂಡ ಬನಶಂಕರಿ ಠಾಣೆ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Religious Conversion: ಮತಾಂತರದ ಸುಳಿಯಲ್ಲಿ ಸಿಕ್ಕ ಯುವಕನ ಕಣ್ಣೀರ ಕಥೆ!
ಮತಾಂತರ ಮಾಡಿ ಖಾತೆಗೆ ಹಣ ವರ್ಗ
ಮತಾಂತರಕ್ಕೆ ಒಳಗಾದ ಶ್ರೀಧರ್‌ಗೆ ತಂದೆ-ತಾಯಿ ಇಲ್ಲ. ಪಿತ್ರಾರ್ಜಿತ ಆಸ್ತಿಗಾಗಿ ದೊಡ್ಡಪ್ಪನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ. ಹಣಕಾಸಿಗೆ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಸೈಬರ್ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಈ ವೇಳೆ ಮಂಡ್ಯ ಮೂಲದ ಅತ್ತಾವರ ರೆಹಮಾನ್ ಪರಿಚಿತವಾಗಿತ್ತು. ಈತನ ಬಳಿ ಶ್ರೀಧರ್ ತನ್ನ ಕಷ್ಟಹೇಳಿಕೊಂಡಿದ್ದ. ಈ ವೇಳೆ ರೆಹಮಾನ್, ಬನಶಂಕರಿಯ ಖಬರಸ್ತಾನ ಮಸೀಗೆ ಕರೆತಂದಿದ್ದ. ಈ ವೇಳೆ ಆರೋಪಿಗಳಾದ ಅನ್ಸರ್ ಪಾಷಾ, ನಯಾಜ್ ಪಾಷಾ, ಹಾಜಿ ಸಾಬ್ ಸೇರಿದಂತೆ ಹಲವರು ಶ್ರೀಧರನನ್ನು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಮನವೊಲಿಸಿದ್ದರು. ನಮ್ಮ ಧರ್ಮಕ್ಕೆ ಬಂದಲ್ಲಿ ಆರ್ಥಿಕ ಸಂಕಷ್ಟನಿವಾರಣೆಯಾಗಲಿದೆ ಎಂದು ನಂಬಿಸಿದ್ದರು.
ಶ್ರೀಧರನ ಬ್ರೇನ್ ವಾಶ್ ಮಾಡಿದ ಆರೋಪಿಗಳು, ಹಿಂದೂ ದೇವರಗಳ ವಿರುದ್ಧ ಪಾಠ ಬೋಧಿಸಿದ್ದರು. ಇಸ್ಲಾಂ ಧರ್ಮದ ಆಚಾರ-ವಿಚಾರಗಳ ಬಗ್ಗೆ ಪಾಠ ಮಾಡಿದ್ದರು. ಇಸ್ಲಾಂ ನಿಯಮದಂತೆ ಶ್ರೀಧರನಿಗೆ ಖತ್ನಾ ಮಾಡಿ ಹೆಸರನ್ನು ಮಹಮದ್ ಸಲ್ಮಾನ್ ಎಂದು ಬದಲಿಸಿದ್ದರು. ಈ ವೇಳೆ ರಾಜರಾಜೇಶ್ವರಿ ನಗರದಲ್ಲಿ ಮಹಮದ್ ಸಲ್ಮಾನ್ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಸುಮಾರು .30 ಸಾವಿರ ಜಮೆ ಮಾಡಿದ್ದರು.
ಯಾದಗಿರಿ ಮತ್ತು ಮೈಸೂರಿನಲ್ಲಿ ಬೌದ್ಧ ಧರ್ಮದ ಮತಾಂತರಕ್ಕೆ ಮುಂದಾದ ಜನ
ಗೋ ಮಾಂಸ ಸೇವಿಸದ್ದಕ್ಕೆ ಚಾಕುವಿನಿಂದ ಕೈಗೆ ಹಲ್ಲೆ
ಮತಾಂತರ ಪ್ರಕ್ರಿಯೆ ಬಳಿಕ ಬನಶಂಕರಿ ಮಸೀದಿಯಲ್ಲಿ ದನದ ಮಾಂಸ ಸೇವಿಸುವಂತೆ ಶ್ರೀಧರ್‌ಗೆ ಒತ್ತಾಯಿಸಿದ್ದರು. ಇದಕ್ಕೆ ಶ್ರೀಧರ್ ವಿರೋಧ ವ್ಯಕ್ತ ಮಾಡಿದಾಗ ಬಲಗೈಗೆ ಚಾಕುವಿನಿಂದ ಹಲ್ಲೆ ನಡೆಸಿ ಹಿಂಸೆ ನೀಡಿದ್ದರು. ಶ್ರೀಧರ್‌ಗೆ ಕಳೆದ ಒಂದು ವರ್ಷದಿಂದ ಜೆ.ಪಿ.ನಗರ, ಶಿವಾಜಿ ನಗರ, ತಿರುಪತಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ತರಬೇತಿ ನೀಡಿದ್ದರು. ಅಲ್ಲದೆ, ವರ್ಷಕ್ಕೆ ಮೂವರು ಹಿಂದೂಗಳನ್ನು ಇಸ್ಲಾಂಗೆ ಮತಾಂತರ ಮಾಡಲು ಶ್ರೀಧರ್‌ಗೆ ಟಾಸ್‌್ಕ ನೀಡಿದ್ದರು. ಹಿಂದೂ ಯುವತಿಯರನ್ನು ಪ್ರೇಮದ ಬಲೆಗೆ ಬೀಳಿಸಿಕೊಂಡು ಇಸ್ಲಾಂಗೆ ಮತಾಂತರ ಮಾಡಲು ಸೂಚಿಸಿದ್ದರು ಎಂದು ಶ್ರೀಧರ್ ಆರೋಪಿಸಿದ್ದ. ಹೀಗಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವಕನ ಕೈಗೆ ಗನ್ ಕೊಟ್ಟು ಫೋಟೋ!
ಆರೋಪಿಗಳು ಶ್ರೀಧರನಿಗೆ ಗನ್, ಪಿಸ್ತೂಲ್ ನೀಡಿ ಫೋಟೋ ತೆಗೆದುಕೊಂಡಿದ್ದರು. ವರ್ಷಕ್ಕೆ ಮೂವರು ಹಿಂದೂಗಳನ್ನು ಇಸ್ಲಾಂಗೆ ಮತಾಂತರ ಮಾಡಬೇಕು. ಇಲ್ಲವಾದರೆ, ನಿನ್ನನ್ನು ಭಯೋತ್ಪಾದಕ ಎಂದು ಸಾಮಾಜಿಕ ಜಾಲತಾಣ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆವೊಡ್ಡಿದ್ದರು ಎಂಬ ಆರೋಪ ಕೇಳಿ ಬಂದಿದೆ.