
ಬೆಂಗಳೂರು(ಮಾ.19): ವಿಜಯನಗರದ ಬಿಜಿಎಸ್ ಆಟದ ಮೈದಾನದಲ್ಲಿ ಫ್ಲೆಕ್ಸ್ ಅಳವಡಿಸುವ ವಿಚಾರ ಸಂಬಂಧ ಮಾಜಿ ಶಾಸಕ ಪ್ರಿಯಾಕೃಷ್ಣ ಬೆಂಬಲಿತ ಕಾಂಗ್ರೆಸ್ ಮತ್ತು ಸಚಿವ ವಿ.ಸೋಮಣ್ಣ ಬೆಂಬಲಿತ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿ ಘಟನೆ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತೆ ಪ್ರೇಮಲತಾ(42) ಎಂಬುವವರು ನೀಡಿದ ದೂರಿನ ಮೇರೆಗೆ ಬಿಜೆಪಿಯ ರೂಪಾ, ರತ್ನಮ್ಮ, ಪೂರ್ಣಿಮಾ, ಮಂಗಳಾ, ಪರಿಮಳಾ, ಆಶಾ, ವಿಜಿ, ಪ್ರಕಾಶ್, ದೀಪು ಗೌಡ ಹಾಗೂ ಮಂಗಳಾ ಸೇರಿ ಒಟ್ಟು 10 ವಿರುದ್ಧ ಹಲ್ಲೆ, ಕೊಲೆ ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ.
ಬಿಜೆಪಿ ಕಾರ್ಯಕರ್ತೆ ಎಚ್.ಎಂ.ರಮ್ಯಾ(38)ಎಂಬುವವರು ನೀಡಿದ ದೂರಿನ ಮೇರೆಗೆ ಕಾಂಗ್ರೆಸ್‌ನ ಪರಿಮಳಾ, ಜಲಜಾ, ರೇವತಿ, ಪ್ರೇಮಾ, ಪ್ರಶಾಂತ, ಪಿಳ್ಳರಾಜು, ಕುಮಾರ ಹಾಗೂ ನರಸಿಂಹ ಸೇರಿ ಒಟ್ಟು 8 ಮಂದಿ ವಿರುದ್ಧ ಹಲ್ಲೆ, ಕೊಲೆ, ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು: ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ
ಮಾರಾಮಾರಿ ವೇಳೆ ಕರ್ತವ್ಯಕ್ಕೆ ಅಡ್ಡಪಡಿಸಿ, ಹಲ್ಲೆ ಮಾಡಿದ ಆರೋಪದಡಿ ಗೋವಿಂದರಾಜನಗರ ಪೊಲೀಸ್ ಠಾಣೆ ಹೆಡ್‌ಕಾನ್ಸ್‌ಟೇಬಲ್ ವರದರಾಜು ಅವರು ನೀಡಿದ ದೂರಿನ ಮೇರೆಗೆ ಅಮರ್‌ಗೌಡ, ಹೇಮಂತ್, ವೇಣು, ವಿಕಾಸ್, ಭೂಷಣ, ಮಧು, ದೀಪಾಗೌಡ, ಅರುಣಾ, ಆಶಾ, ಮಂಗಳಮ್ಮ, ರಮ್ಯಾ, ಮಧು, ಮೆಟ್ರೋ ಲೇಔಟ್ ಮಂಜು, ಅಭಿ ಸೇರಿದಂತೆ ಒಟ್ಟು 36 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೂರು ಪ್ರತ್ಯೇಕ ಪ್ರಕರಣಗಳ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ಲೆಕ್ಸ್ ಅಳವಡಿಕೆಗೆ ಮಾರಾಮಾರಿ
ವಿಜಯನಗರದ ಎಂ.ಸಿ.ಲೇಔಟ್‌ನ ಬಿಜಿಎಸ್ ಮೈದಾನದಲ್ಲಿ ಮಾ.19ರಂದು ಸ್ತ್ರೀ ಶಕ್ತಿ ಮಹಿಳಾ ಸಮಾವೇಶ ಹಾಗೂ ಯುಗಾದಿ ಸಂಭ್ರಮ ಕಾರ್ಯಕ್ರಮ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಬಿಬಿಎಂಪಿಯಿಂದ ಅನುಮತಿ ಪಡೆದಿದ್ದರು. ಅದರಂತೆ ಶುಕ್ರವಾರ 40-50 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಮೈದಾನದಲ್ಲಿ ಫ್ಲೆಕ್ಸ್ ಅಳವಡಿಕೆ ಸೇರಿದಂತೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಬಿಜೆಪಿ 30-40 ಮಂದಿ ಕಾರ್ಯಕರ್ತರು ಮೈದಾನಕ್ಕೆ ತೆರಳಿದ್ದು, ಎರಡೂ ಗುಂಪುಗಳ ನಡುವೆ ವಾಗ್ವಾದ ಆರಂಭವಾಗಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡೂ ಗುಂಪುಗಳು ದೊಣ್ಣೆಗಳಿಂದ ಹೊಡೆದಾಡಿದ್ದು, ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಲಾಠಿ ಚಾಜ್‌ರ್ ನಡೆಸಿ ಗುಂಪುಗಳನ್ನು ಚದುರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ