Drugs Racket in Bengaluru: ಮೂವರು ಪೆಡ್ಲರ್‌ಗಳ ಸೆರೆ: 80 ಕೆಜಿ ಗಾಂಜಾ ಜಪ್ತಿ

By Kannadaprabha News  |  First Published Feb 26, 2022, 5:23 AM IST

*   ಆಂಧ್ರದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ
*  ಮರದ ಬಾಕ್ಸ್‌ನಲ್ಲಿ ಗಾಂಜಾ
*  ಪೊಲೀಸರಿ ನಗದು ಬಹುಮಾನ ಘೋಷಣೆ 


ಬೆಂಗಳೂರು(ಫೆ.26):  ನೆರೆಯ ಆಂಧ್ರಪ್ರದೇಶದಿಂದ(Andhra Pradesh) ನಗರಕ್ಕೆ ಗಾಂಜಾ(Marijuana) ತಂದು ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ಸೇರಿ ಮೂವರು ಡ್ರಗ್ಸ್‌ ಪೆಡ್ಲರ್‌ಗಳನ್ನು ಮಹಾಲಕ್ಷ್ಮೇಲೇಔಟ್‌ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಶ್ರೀರಾಮಪುರದ ಮುತ್ತುರಾಜ್‌(20), ಮುಂಬೈನ ಗೌತಮ್‌ (30), ತಿರುಪತಿಯ ರಫಿ (40) ಬಂಧಿತರು(Arrest). ಆರೋಪಿಗಳಿಂದ(Accused) 80.35 ಕೆ.ಜಿ. ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಸರಕು ಸಾಗಣೆ ವಾಹನ ಜಪ್ತಿ ಮಾಡಲಾಗಿದೆ. ಫೆ.21ರಂದು ಮಹಾಲಕ್ಷ್ಮೇಪುರಂನ ಕಮಲಮ್ಮನಗುಂಡಿ ಆಟದ ಮೈದಾನದ ಬಳಿ ಆರೋಪಿ ಮುತ್ತುರಾಜ್‌ ಗಾಂಜಾ ಮಾರಾಟದಲ್ಲಿ ತೊಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆತನನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ 350 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಬಳಿಕ ಈತ ನೀಡಿದ ಮಾಹಿತಿ ಮೇರೆಗೆ ಉಳಿದಿಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮುತ್ತುರಾಜ್‌ ಆಂಧ್ರಪ್ರದೇಶದ ವ್ಯಕ್ತಿಗಳಿಂದ ಗಾಂಜಾ ಖರೀದಿಸಿ ಬಳಿಕ ನಗರದಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಅಂತೆಯೆ ಆ ಇಬ್ಬರು ಆರೋಪಿಗಳು ಫೆ.24ರಂದು ನಗರಕ್ಕೆ ಬರುತ್ತಿರುವ ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಮಹಾಲಕ್ಷ್ಮೇ ಲೇಔಟ್‌ ಠಾಣೆ ಇನ್ಸ್‌ಪೆಕ್ಟರ್‌ ಎಚ್‌.ಎಂ.ಕಾಂತರಾಜು ನೇತೃತ್ವದ ಪೊಲೀಸರ ತಂಡ ಆರೋಪಿಗಳಿಗೆ ಬಲೆ ಬೀಸಿತ್ತು.

Tap to resize

Latest Videos

Drugs Case: ಬೆಂಗ್ಳೂರಲ್ಲಿ ಗಾಂಜಾ ಮಾರಾಟ: ಮೂವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ

ನಗದು ಬಹುಮಾನ ಘೋಷಣೆ:

ಗಾಂಜಾ ಪ್ರಕರಣ ಭೇದಿಸಿ ಮೂವರು ಡ್ರಗ್ಸ್‌ ಪೆಡ್ಲರ್‌ಗಳ(Drugs Peddlers) ಬಂಧನದ ಜತೆಗೆ ಬರೋಬ್ಬರಿ 80 ಕೆ.ಜಿ. ತೂಕದ ಗಾಂಜಾ ಜಪ್ತಿ ಮಾಡಿದ ಮಹಾಲಕ್ಷ್ಮೇ ಲೇಔಟ್‌ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಎಚ್‌.ಎಂ.ಕಾಂತರಾಜ್‌ ನೇತೃತ್ವದ ತಂಡದ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌(Kamal Pant) ಶ್ಲಾಘಿಸಿದ್ದಾರೆ. ಈ ತಂಡಕ್ಕೆ 25 ಸಾವಿರ ರು. ನಗದು ಬಹುಮಾನ ಘೋಷಿಸಿದ್ದಾರೆ.

Bengaluru Crime: ಆಂಧ್ರದಲ್ಲಿ ಗಾಂಜಾ ಬೆಳೆದು ಬೆಂಗ್ಳೂರಲ್ಲಿ ಮಾರಾಟ ಮಾಡ್ತಿದ್ದ ಪೆಡ್ಲರ್‌ ಪೊಲೀಸ್‌ ಬಲೆಗೆ

ಮರದ ಬಾಕ್ಸ್‌ನಲ್ಲಿ ಗಾಂಜಾ

ಆರೋಪಿಗಳಾದ ಗೌತಮ್‌ ಮತ್ತು ರಫೀ ನಗರದ ಇಸ್ಕಾನ್‌ ದೇವಸ್ಥಾನ ಎದುರಿನ ಮೆಟ್ರೋ ಪಾರ್ಕಿಂಗ್‌ ಸ್ಥಳಗಳಲ್ಲಿ ಸರಕು ಸಾಗಣೆ ವಾಹನ ನಿಲ್ಲಿಸಿಕೊಂಡು ನಿಂತಿದ್ದರು. ಇದನ್ನು ಗಮನಿಸಿದ ಪೊಲೀಸರ ತಂಡ, ತಕ್ಷಣ ದೌಡಾಯಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ವಾಹನ ತಪಾಸಣೆ ಮಾಡಿದಾಗ ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಮರದ ಬಾಕ್ಸ್‌ಗಳಲ್ಲಿ 80 ಕೆ.ಜಿ.ಗಾಂಜಾ ತುಂಬಿಕೊಂಡು ಬಂದಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶಾಖಪಟ್ಟಣಂ-ಬೆಂಗಳೂರು

ಆರೋಪಿಗಳಾದ ಗೌತಮ್‌ ಮತ್ತು ರಫೀ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವ್ಯಕ್ತಿಯೊಬ್ಬನಿಂದ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ, ಬಳಿಕ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರತಿ ಕೆ.ಜಿ.ಗೆ 40 ಸಾವಿರ ರು.ನಿಂದ 50 ಸಾವಿರ ರು.ಗೆ ಮಾರಾಟ ಮಾಡುತ್ತಿದ್ದರು. ಆರೋಪಿ ಗೌತಮ್‌ ಈ ಹಿಂದೆ 2021ನೇ ಸಾಲಿನಲ್ಲಿ ಮಣಿಪಾಲದಲ್ಲಿ ಗಾಂಜಾ ಮಾರಾಟ ಮಾಡುವಾಗ ಮಣಿಪಾಲ ಠಾಣೆ ಪೊಲೀಸರ ಕೈಗೆ ಸಿಕ್ಕಿ ಜೈಲು(Jail)  ಪಾಲಾಗಿದ್ದ. ಬಳಿಕ ಜಾಮೀನು ಪಡೆದು ಹೊರಬಂದು ಗಾಂಜಾ ಪೆಡ್ಲಿಂಗ್‌ ದಂಧೆ ಮುಂದುವರಿಸಿದ್ದ. ಮತ್ತೋರ್ವ ಆರೋಪಿ ರಫೀ ಸರಕು ಸಾಗಣೆ ವಾಹನದ ಚಾಲಕನಾಗಿದ್ದು, ಹೆಚ್ಚಿನ ಬಾಡಿಗೆ ಆಸೆಗೆ ಆರೋಪಿ ಗೌತಮ್‌ ಜತೆ ಕೈಜೋಡಿಸಿ ಗಾಂಜಾ ಸಾಗಣೆ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!