ಬೆಂಗ್ಳೂರಲ್ಲಿ ಗ್ರಾಹಕರ ಮನೆಗೆ ಗಾಂಜಾ ಡೆಲಿವರಿ: ಸಿಹಿ ತಿನಿಸು ಮಾರಾಟಗಾರರ ಬಂಧನ

By Kannadaprabha NewsFirst Published Dec 1, 2023, 4:32 AM IST
Highlights

ಮಾರತ್ತಹಳ್ಳಿ ನಿವಾಸಿಗಳಾದ ಲಕ್ಷ್ಮೀಧರ್‌ ಹಾಗೂ ಆತನ ಸಹಚರ ರಾಕೇಶ್ ಬಂಧಿತರಾಗಿದ್ದು, ಆರೋಪಿಗಳಿಂದ ₹15 ಲಕ್ಷ ಮೌಲ್ಯದ 15 ಕೇಜಿ ಗಾಂಜಾ ಜಪ್ತಿ ಮಾಡಲಾಗಿದೆ. 

ಬೆಂಗಳೂರು(ಡಿ.01): ಗ್ರಾಹಕರ ಮನೆ ಬಾಗಿಲಿಗೆ ಗಾಂಜಾ ಪೂರೈಸುತ್ತಿದ್ದ ರಸ್ತೆ ಬದಿ ಸಿಹಿ ತಿಂಡಿ ಮಾರಾಟಗಾರರು ಸೇರಿದಂತೆ ಪ್ರತ್ಯೇಕ ಮೂವರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಾರತ್ತಹಳ್ಳಿ ನಿವಾಸಿಗಳಾದ ಲಕ್ಷ್ಮೀಧರ್‌ ಹಾಗೂ ಆತನ ಸಹಚರ ರಾಕೇಶ್ ಬಂಧಿತರಾಗಿದ್ದು, ಆರೋಪಿಗಳಿಂದ ₹15 ಲಕ್ಷ ಮೌಲ್ಯದ 15 ಕೇಜಿ ಗಾಂಜಾ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಒಡಿಶಾ ರಾಜ್ಯದಿಂದ ಗಾಂಜಾ ತಂದು ನಗರದಲ್ಲಿ ಇಬ್ಬರು ವ್ಯಕ್ತಿಗಳು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಇನ್‌ಸ್ಪೆಕ್ಟರ್‌ ದೀಪಕ್‌ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆಯಾ ಗಾಂಜಾ ದಂಧೆ?: ಸಿನಿಮೀಯ ರೀತಿಯಲ್ಲಿ ಪೊಲೀಸರ ದಾಳಿ

ಲಕ್ಷ್ಮೀಧರ್ ಹಾಗೂ ರಾಕೇಶ್ ಮೂಲತಃ ಒಡಿಶಾ ರಾಜ್ಯದವರಾಗಿದ್ದು, ಮೂರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ಬಳಿಕ ಮಾರತ್ತಹಳ್ಳಿ ಸಮೀಪ ರಸ್ತೆ ಬದಿ ತಳ್ಳುವ ಗಾಡಿಯಲ್ಲಿ ಸಿಹಿ ತಿಂಡಿ ಮಾರಾಟ ಮಾಡುತ್ತಿದ್ದ ಅವರು, ಅಲ್ಲೇ ಸಮೀಪದಲ್ಲೇ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಸುಲಭವಾಗಿ ಹಣ ಸಂಪಾದಿಸಲು ಆರೋಪಿಗಳು, ತಮ್ಮೂರಿನಲ್ಲಿ ಕಡಿಮೆ ಬೆಲೆಗೆ ಸಿಗುವ ಗಾಂಜಾವನ್ನು ತಂದು ನಗರಕ್ಕೆ ಮಾರಾಟಕ್ಕಿಳಿದಿದ್ದರು. ರೈಲಿನಲ್ಲಿ ಗಾಂಜಾ ತರುತ್ತಿದ್ದ ರಾಕೇಶ್ ಹಾಗೂ ಲಕ್ಷ್ಮೀಧರ್‌, ಬಳಿಕ ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಗ್ರಾಹಕರ ಮನೆಗೆ ಬಾಗಿಲಿಗೆ ಪೂರೈಸುತ್ತಿದ್ದರು. ಇತ್ತೀಚೆಗೆ ಈ ದಂಧೆ ಬಗ್ಗೆ ಬಾತ್ಮೀದಾರರಿಂದ ಲಭ್ಯವಾದ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ನೈಜೀರಿಯಾ ಪ್ರಜೆ ಸೆರೆ: ₹35 ಲಕ್ಷದ ಡ್ರಗ್ಸ್‌ ಜಪ್ತಿ

ಹೆಣ್ಣೂರು ಸಮೀಪ ಡ್ರಗ್ಸ್ ದಂಧೆಯಲ್ಲಿ ನಿರತನಾಗಿದ್ದ ನೈಜೀರಿಯಾ ಪ್ರಜೆಯೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ನೈಜೀರಿ ಮೂಲದ ಉಗಾಂಬ ನಾಜಿಯೋ ಬಂಧಿತನಾಗಿದ್ದು, ಆರೋಪಿಯಿಂದ ₹35 ಲಕ್ಷ ಮೌಲ್ಯದ 180 ಗ್ರಾಂ ಎಂಡಿಎಂಎ ಕ್ರಿಸ್ಟೆಲ್ ಹಾಗೂ 58 ಗ್ರಾಂ ಎಕ್ಸೈಟೆಸಿ ಮಾತ್ರೆಗಳು ಜಪ್ತಿ ಮಾಡಲಾಗಿದೆ. ಹೆಣ್ಣೂರು-ಬಾಣಸವಾಡಿ ಪ್ರದೇಶದಲ್ಲಿ ಡ್ರಗ್ಸ್ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದು ವಿದೇಶಿ ಪ್ರಜೆಯನ್ನು ಇನ್‌ಸ್ಪೆಕ್ಟರ್‌ ಮುಕ್ರಂ ನೇತೃತ್ವದ ತಂಡ ಬಂಧಿಸಿದೆ.
2005ರಲ್ಲಿ ಬ್ಯುಸಿನೆಸ್‌ ವೀಸಾದಡಿ ಭಾರತಕ್ಕೆ ಆಗಮಿಸಿದ್ದ ಆತ, ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದ. ತನ್ನ ಪಾಸ್‌ಪೋರ್ಟ್ ಹಾಗೂ ವೀಸಾ ಅವಧಿ ಮುಕ್ತಾಯವಾಗಿದ್ದರೂ ಕೂಡ ನವೀಕರಣ ಮಾಡಿಸಿಕೊಳ್ಳದೆ ನಗರದಲ್ಲಿ ಆತ ಅನಧಿಕೃತವಾಗಿ ನೆಲೆಸಿ ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದ. ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ಜಾಲದಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ನಗರದಲ್ಲಿ ಆತ ಮಾರುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!