
ಚಿಕ್ಕಬಳ್ಳಾಪುರ(ನ.30): ಕಳೆದ ಸೋಮವಾರ ಬೆಳಗ್ಗೆ ಅಣ್ಣನ ಮಗನಿಂದಲೇ ಚಿಕ್ಕಪ್ಪ ಕೊಚ್ಚಿ ಕೊಲೆ ಮಾಡಿದ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು) ಗ್ರಾಮಾಂತರ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿ ತನ್ನ ಚಿಕ್ಕಪ್ಪ ಮೋಸದಿಂದ ಮದ್ಯ ಕುಡಿಸಿದ್ದಕ್ಕೆ ಕೊಲೆ ಮಾಡಿರುವುದಾಗಿ ಪೋಲಿಸರೆದುರು ಬಾಯ್ಬಿಟ್ಟಿದ್ದಾನೆಂದು ತಿಳಿದು ಬಂದಿದೆ
ಕಳೆದ ಸೋಮವಾರ ಬೆಳಗ್ಗೆ ಗೌರಿಬಿದನೂರು ತಾಲೂಕಿನ ಚೋಳಶೆಟ್ಟಿಹಳ್ಳಿ ಗ್ರಾಮದಲ್ಲಿ ಹಾಲು ತರಲು ಡೈರಿ ಬಳಿ ಬಂದಿದ್ದ ರಾಮಕೃಷ್ಣಪ್ಪನನ್ನು (45) ಆತನ ಅಣ್ಣನ ಮಗ ನಾಗರಾಜು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಬಳಿಕ ಆರೋಪಿಯನ್ನು ಬಂಧಿಸಿದ್ದು, ಇದೀಗ ಪೊಲೀಸರ ಬಳಿ ಆರೋಪಿ ಕೊಲೆಯ ಕಾರಣವನ್ನು ಬಿಚ್ಚಿಟ್ಟಿದ್ದಾನೆ.
ಕುಡಿದ ನಶೆಯಲ್ಲಿ ಕುಡುಕರಿಬ್ಬರ ಗಲಾಟೆ; ಕೊಲೆಯಲ್ಲಿ ಅಂತ್ಯ!
ಕೊಲೆ ಆರೋಪಿ ನಾಗರಾಜು ಎಂಟು ವರ್ಷಗಳ ಹಿಂದೆ ಕುಡಿತದ ಚಟಕ್ಕೆ ಬಿದ್ದು ಮನೆಯಲ್ಲಿ ಪತ್ನಿ ಮತ್ತು ಪೋಷಕರೊಂದಿಗೆ ಯಾವಾಗಲೂ ಜಗಳ ಮಾಡಿಕೊಳ್ಳುತ್ತಿದ್ದ. ಆದುದರಿಂದ ಆತನನ್ನು ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಕುಟುಂಬಸ್ಥರು ಸೇರಿಸಿ ಮದ್ಯಪಾನ ವ್ಯಸನ ಮುಕ್ತನ್ನಾಗಿಸಿದ್ದರು.
ಮದ್ಯವ್ಯಸನ ಮುಕ್ತ ಕೇಂದ್ರದಿಂದ ವಾಪಸ್ಸು ಬಂದು ಕಳೆದ 8 ವರ್ಷಗಳಿಂದ ಸಂತೋಷದ ಜೀವನ ಮಾಡಿಕೊಂಡಿದ್ದ ನಾಗರಾಜುಗೆ ರಾಮಕೃಷ್ಣಪ್ಪ ಕೊಲೆಯಾದ ಹಿಂದಿನ ದಿನ ಜ್ಯೂಸ್ ಬಾಟಲಿಗೆ ಮದ್ಯ ಬೆರೆಸಿ ನೀಡಿದ್ದ. ಬಾಟಲಿಯಲ್ಲಿರುವುದು ಜ್ಯೂಸ್ ಎಂದು ನಂಬಿಸಿ ನಾಗರಾಜುಗೆ ಮೋಸದಿಂದ ಮದ್ಯ ಕುಡಿಸಿದ್ದರಿಂದ ಅಮಲೇರಿದ ಆತ ರಾತ್ರಿ ಮನೆಯಲ್ಲಿ ಹೆಂಡತಿ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ. ಮರುದಿನ ಬೆಳಗ್ಗೆ ನಡೆದ ಘಟನೆಯ ಬಗ್ಗೆ ಸಾಕಷ್ಟು ವಿಚಲಿತನಾದ ನಾಗರಾಜು, ತನಗೆ ಯಾಮಾರಿಸಿ ಮದ್ಯ ಕುಡಿಸಿದ ಚಿಕ್ಕಪ್ಪ ರಾಮಕೃಷ್ಣಪ್ಪ ಹಾಲು ತರಲು ಡೈರಿಯ ಬಳಿಗೆ ಬರುವುದನ್ನೇ ಕಾದು ಕುಳಿತಿದ್ದ. ಬಳಿಕ ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ನಡೆಸಿ ಪರಾರಿಯಾಗಿದ್ದಾನೆ.
ಘಟನೆಯ ನಂತರ ಊರಿನ ಬಳಿಯ ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನಾಗರಾಜುನನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ