* ಜೈಲಿನಲ್ಲಿ ಮೂವರು ಕಳ್ಳರಿಗೆ ಗೆಳೆತನ
* ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಗ್ಯಾಂಗ್
* ಎಚ್‌ಐವಿ ಇದೆ ಎಂದು ಗೊತ್ತಿದ್ದರೂ ವೇಶ್ಯೆಯರ ಸಹವಾಸ
ಬೆಂಗಳೂರು(ಜೂ.10): ರಾಜಧಾನಿಯಲ್ಲಿ ಮಹಿಳೆಯರಿಂದ ಸರ ದೋಚುತ್ತಿದ್ದ ಮೂವರು ಕುಖ್ಯಾತ ಎಚ್‌ಐವಿ ಸೋಂಕಿತ ಸರಗಳ್ಳರನ್ನು ಎರಡು ಸಾವಿರ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಣಪಟ್ಟಣ ತಾಲೂಕು ಭುವನಹಳ್ಳಿ ಗ್ರಾಮದ ರಮೇಶ ಅಲಿಯಾಸ್ ಜಾಕಿ, ಮಾಗಡಿ ರಸ್ತೆಯ ಮಾಚೋಹಳ್ಳಿ ಲೋಕೇಶ ಅಲಿಯಾಸ್ ಕಮಾಯಿ ಹಾಗೂ ಅಂಚೆಪಾಳ್ಯ ಮೊಹಮ್ಮದ್ ಮುದಾಸೀರ್ ಅಲಿಯಾಸ್ ಕೋಳಿ ಬಂಧಿತರಾಗಿದ್ದು, ಆರೋಪಿಗಳಿಂದ 140 ಗ್ರಾಂ ತೂಕದ 6 ಚಿನ್ನದ ಸರಗಳು ಹಾಗೂ 2 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಜಯನಗರ ವ್ಯಾಪ್ತಿಯಲ್ಲಿ ಮೇ 26ರಂದು ನಿತ್ಯಾ ಎಂಬುವರಿಂದ ದುಷ್ಕರ್ಮಿಗಳು ಸರ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಯು.ಆರ್.ಮಂಜುನಾಥ್ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಮಾಗಡಿ ಸಮೀಪ ಆರೋಪಿಗಳನ್ನು ಬಂಧಿಸಿದ್ದಾರೆ.
90 ವೇಶ್ಯೆಯರ ಸಹವಾಸ
ಈ ಮೂವರು ಆರೋಪಿಗಳು ವೃತ್ತಿಪರ ಸರಗಳ್ಳರಾಗಿದ್ದು, ಐದಾರು ವರ್ಷಗಳಿಂದ ಅಪರಾಧ ಕೃತ್ಯದಲ್ಲಿ ಅವರು ಸಕ್ರಿಯವಾಗಿದ್ದರು. ರಸ್ತೆಯಲ್ಲಿ ಏಕಾಂಗಿಯಾಗಿ ಸಂಚರಿಸುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ಆರೋಪಿಗಳು ದುಷ್ಕೃತ್ಯ ಎಸಗುತ್ತಿದ್ದರು. ಸರಗಳ್ಳತನ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಗ ಈ ಮೂವರಿಗೆ ಸ್ನೇಹವಾಗಿದ್ದು, ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದು ಅದೇ ಗೆಳೆತನದಲ್ಲಿ ಜಂಟಿಯಾಗಿ ಸರಗಳ್ಳತನ ಕೃತ್ಯಕ್ಕಿಳಿದಿದ್ದರು. ಹೀಗೆ ಕಳವು ಮಾಡಿ ಆಭರಣಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ನಡೆಸುತ್ತಿದ್ದರು. ವೇಶ್ಯೆಯರ ಸಂಗಕ್ಕಾಗಿ ಆರೋಪಿಗಳು ಹಣ ವಿನಿಯೋಗಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ
ಈ ಮೂವರಿಗೆ ಎಚ್‌ಐವಿ ಸೋಂಕು ಪತ್ತೆಯಾಗಿದೆ. ತಾವು ಎಚ್‌ಐವಿ ಭಾದಿತರಾಗಿದ್ದರೂ ಕೂಡ ಲೆಕ್ಕಿಸದೆ 80ರಿಂದ 90 ವೇಶ್ಯೆಯರೊಂದಿಗೆ ಅವರ ಲೈಂಗಿಕ ಕ್ರಿಯೆ ನಡೆಸಿರುವುದು ವಿಚಾರಣೆ ವೇಳೆ ಬಯಲಾಗಿದೆ. ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ವೇಶ್ಯೆಯರ ಪತ್ತೆಗೆ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ಸಾವಿರ ಕರೆ ಶೋಧಿಸಿ ಸೆರೆ
ಜಯ ನಗರದಲ್ಲಿ ಸರಗಳ್ಳತನ ಕೃತ್ಯ ಸಂಬಂಧ ಘಟನಾ ಸ್ಥಳ ವ್ಯಾಪ್ತಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಮೂವರು ಆರೋಪಿಗಳ ಅಸ್ಪಷ್ಟಮುಖ ಚಹರೆ ಪತ್ತೆಯಾಯಿತು. ಆ ಮಾಹಿತಿ ಆಧರಿಸಿ ಮುಂದುವರೆದಾಗ ಮಾಗಡಿವರೆಗೆ ಆರೋಪಿಗಳು ಸಾಗಿರುವುದು ಗೊತ್ತಾಯಿತು. ಆಗ ಎರಡು ಸಾವಿರ ಮೊಬೈಲ್ ಕರೆಗಳ ಶೋಧಿಸಿದಾಗ ಒಂದು ಮೊಬೈಲ್ ಕರೆ ಮೇಲೆ ಶಂಕೆ ಮೂಡಿತು. ಈ ಸುಳಿವು ಬೆನ್ನುಹತ್ತಿದ್ದಾಗ ಕೊನೆಗೆ ಮಾಗಡಿಯಲ್ಲಿ ಸರಗಳ್ಳರು ಸಿಕ್ಕಿಬಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.