ಕೊಪ್ಪಳ ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ನಡೆದಿದ್ದ ಘಟನೆ|ವರ್ಷದೊಳಗೆ ಪ್ರಕರಣ ಬೇಧಿಸಿದ ಪೊಲೀಸರು| ಮೂವರ ಬಂಧನ| ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳು|
ಕೊಪ್ಪಳ(ಅ.28): ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ಮಲಗಿದ್ದಾಗ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆಯನ್ನು ಕೊಪ್ಪಳ ಪೊಲೀಸರು ಬೇಧಿಸಿದ್ದು, ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್ಪಿ ಟಿ. ಶ್ರೀಧರ ಮಂಗಳವಾರ ಈ ಕುರಿತು ಮಾಹಿತಿ ನೀಡಿದರು. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವರ್ಷ ಏ. 15ರಂದು ಚಳ್ಳಾರಿಯ 18 ವರ್ಷದ ರಮೇಶ ಪೊಲೀಸ್ ಪಾಟೀಲ್ ಎನ್ನುವ ಯುವಕ ಕೊಲೆಯಾಗಿದ್ದ. ಅದೇ ಗ್ರಾಮದ ಯಲ್ಲಾಲಿಂಗಪ್ಪ, ಹನುಮೇಶ ಹಾಗೂ ಭೀಮಣ್ಣ ಎನ್ನುವವರು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದರು. ಈ ಆರೋಪಿಗಳನ್ನು ಬಂಧಿಸಲಾಗಿದೆ.
ಕೊಪ್ಪಳ: ಬಾಲಕನ ಕೈ ಕಾಲು ಕಟ್ಟಿ ಕಾಲುವೆಗೆ ಎಸೆದು ಕೊಲೆಗೈದ ದುಷ್ಕರ್ಮಿಗಳು
ಮೃತ ರಮೇಶ ತನ್ನ ಸ್ನೇಹಿತನನ್ನು ಪ್ರೀತಿಸುವಂತೆ ಆರೋಪಿಗಳ ಸಹೋದರಿಗೆ ಪೀಡಿಸುತ್ತಿದ್ದನು. ಈ ವಿಷಯ ತಿಳಿದು ಮಹಿಳೆ ಸಂಬಂಧಿಗಳು, ರಮೇಶ ರಾತ್ರಿ ಮಲಗಿದ್ದಾಗ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದರು. ಬಳಿಕ ಬೆಂಗಳೂರಿಗೆ ಪರಾರಿಯಾಗಿದ್ದರು.
ತನಿಖಾ ತಂಡದ ಅಧಿಕಾರಿಗಳು ಸ್ಥಳೀಯ ಸಾಕ್ಷ್ಯಾಧಾರ ಕಲೆಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳ ಪೈಕಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.