* ತಮಿಳುನಾಡು ಮೂಲದ ಮತೀಯ ಸಂಘಟನೆಯಿಂದ ಕೊಲೆ ಬೆದರಿಕೆ
* ಬೆಂಗಳೂರಿನಲ್ಲಿ ಕೇಸು ದಾಖಲು
* ತನಿಖೆಗೆ ಹೈ ರಿಜಿಸ್ಟ್ರಾರ್‌ಗೆ ಮನವಿ
ಬೆಂಗಳೂರು(ಮಾ.20): ಹಿಜಾಬ್(Hijab) ಕುರಿತು ತೀರ್ಪು(Verdict) ನೀಡಿರುವ ನ್ಯಾಯಾಧೀಶರಿಗೆ ತಮಿಳುನಾಡು(Tamil Nadu) ಮೂಲದ ಮತೀಯ ಸಂಘಟನೆಯೊಂದು ಕೊಲೆ ಬೆದರಿಕೆ ಹಾಕಿರುವುದು ವಿಡಿಯೋ ವೈರಲ್ ಬೆನ್ನಲೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸಂಘಟನೆ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ ನ್ಯಾಯಮೂರ್ತಿಗಳಿಗೆ(Judge) ಬೆದರಿಕೆ(Threat) ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಮನವಿ ಮಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದ್ದ ಹಿಜಾಬ್ ಪ್ರಕರಣ ಸಂಬಂಧ ಹೈಕೋರ್ಟ್(High Court of Karnataka) ತೀರ್ಪು ನೀಡಿತ್ತು. ಈ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು ಮೂಲದ ತೌಹೀದ್ ಜಮಾತ್ ಸಂಘಟನೆಯ ಮುಖಂಡ ಆರ್.ರೆಹ್ಮತ್‌ವುಲ್ಲಾ ಎಂಬುವರು ಮಧುರೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿಜಾಬ್ ಉಲ್ಲೇಖಿಸಿ ಪರೋಕ್ಷವಾಗಿ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧಾರಿಸಿ ವಕೀಲ, ಸುಧಾ ಕಟ್ವ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Hijab Row: ಮಂಗ್ಳೂರಲ್ಲಿ ಮತ್ತೆ ಹಿಜಾಬ್ ವಿವಾದ: ವಿದ್ಯಾರ್ಥಿನಿಯರ ತರಗತಿ ಪ್ರವೇಶಕ್ಕೆ ತಡೆ
ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು(Police) ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 506(ಬೆದರಿಕೆ), 501(1)(ಮಾನಹಾನಿ), 503(ಕ್ರಿಮಿನಲ್ ಬೆದರಿಕೆ), 109(ಪ್ರಚೋದನೆ), 504(ಶಾಂತಿ ಭಂಗ), 505(ಸಾರ್ವಜನಿಕ ಕಿಡಿಗೇಡಿತನ) ಸೇರಿದಂತೆ ವಿವಿಧ ಸೆಕ್ಷನ್‌ಗಳಲ್ಲಿ ಎಫ್‌ಐಆರ್ ದಾಖಲಾಗಿದೆ.
ಗಿರೀಶ್ ಪತ್ರದಲ್ಲಿ ಏನಿದೆ:
ತೌಹೀದ್ ಜಮಾತ್ ಸಂಘಟನೆಯ ಮುಖಂಡ ಆರ್.ರಹ್ಮತ್‌ವುಲ್ಲಾ ಅವರು, ಸಾರ್ವಜನಿಕ ಭಾಷಣದಲ್ಲಿ ಹಿಜಾಬ್ ಕುರಿತು ತೀರ್ಪು ನೀಡಿರುವ ‘ನ್ಯಾಯಾಮೂರ್ತಿಗಳು ಕೊಲೆಯಾದಲ್ಲಿ ಅವರೇ ನೇರಹೊಣೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಮುಖಂಡರು, ತೀರ್ಪು ಸಂವಿಧಾನಕ್ಕೆ ವಿರುದ್ಧವಾಗಿದೆ ಹೇಳಿದ್ದಾರೆ. ಅಮೀರ್- ಇ-ಶರಿತ್ ಎಂಬ ಸಂಘಟನೆ ತೀರ್ಪು ಖಂಡಿಸಿ ಬಂದ್ ಆಚರಣೆ ಮಾಡಿದೆ. ಹೊಸಪೇಟೆಯಲ್ಲಿ ಹಿಜಾಬ್ ಧರಿಸುವುದನ್ನು ಸಮರ್ಥಿಸಿ ಗೋಡೆಗಳ ಮೇಲೆ ಬರಹಗಳನ್ನು ಹಾಕಲಾಗಿದೆ. ಈ ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ, ಸ್ವಯಂಪ್ರೇರಿತ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಮತ್ತೆ ಹಿಜಾಬ್ ವಿವಾದ ಸದ್ದು: ಪ್ರತಿಭಟನೆ
ಶಿವಮೊಗ್ಗ: ಹಿಜಾಬ್(Hijab) ಧರಿಸಿ ಕಾಲೇಜು ಪ್ರವೇಶಕ್ಕೆ ಅವಕಾಶ ಕೊಡಬೇಕೆಂದು ಒತ್ತಾಯಿಸಿ ಮುಸ್ಲಿಂ ವಿದ್ಯಾರ್ಥಿಗಳು(Muslim Students) ಮಾ.08 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ(Protest) ನಡೆಸಿದ್ದರು.
ನಗರದಲ್ಲಿ ಕೆಲ ದಿನಗಳಿಂದ ತಣ್ಣಗಿದ್ದ ಹಿಜಾಬ್ ವಿವಾದ ಇದೀಗ ಮತ್ತೆ ಶುರುವಾಗಿದೆ. ಮಂಗಳವಾರ ಪ್ರತಿಭಟನೆ ನಡೆಸಿದ ಮುಸ್ಲಿಂ ವಿದ್ಯಾರ್ಥಿಗಳು, ಈಗಾಗಲೇ ಹಲವು ದಿನಗಳಿಂದ ನಮಗೆ ತರಗತಿಗೆ ಪ್ರವೇಶ ನೀಡುತ್ತಿಲ್ಲ. ಇದರಿಂದಾಗಿ ಪಾಠ, ಪ್ರವಚನಗಳು ನಮಗೆ ಸಿಗದಂತಾಗಿದೆ. ಕೂಡಲೇ ತರಗತಿ ಪ್ರವೇಶಕ್ಕೆ ಅವಕಾಶ ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದರು.
Hijab Row: ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನ ಸರಿಯಲ್ಲ: ಉಪರಾಷ್ಟ್ರಪತಿ ನಾಯ್ಡು
ಹಿಜಾಬ್ ನಮ್ಮ ಹಕ್ಕಾಗಿದೆ. ಸಂವಿಧಾನದಲ್ಲಿಯೂ(Constitution) ಕೂಡಾ ಹಿಜಾಬ್‌ಗೆ ಅವಕಾಶವಿದೆ. ಆದರೂ ಸಹ ನಾವುಗಳು ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ನಮ್ಮ ಶಿಕ್ಷಣಕ್ಕೆ(Education) ತೊಂದರೆಯಾಗುತ್ತಿದೆ ಎಂದು ದೂರಿದರು.
ಪೂರ್ಣ ವಸ್ತ್ರ ಸಂಹಿತೆ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿದೆ. ಆದರೂ ಸಹ ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ತರಲು ಏಕೆ ಅವಕಾಶ ಕೊಡುತ್ತಿಲ್ಲ ಎಂಬುದು ನಮಗೆ ತಿಳಿಯುತ್ತಿಲ್ಲ. ಕೂಡಲೇ ತರಗತಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲದೆ ಅವರ ಪೋಷಕರೂ ಸಹ ಇದರಲ್ಲಿ ಪಾಲ್ಗೊಂಡಿದ್ದರು.