ಬೊಂಬೆನಾಡಲ್ಲಿ ಹೆಚ್ಚಿದ ಕಳ್ಳರ ಹಾವಳಿ: ಖದೀಮರ ಹಾಟ್‌ಸ್ಪಾಟ್‌ ಆದ ಚನ್ನಪಟ್ಟಣ

By Kannadaprabha News  |  First Published Sep 2, 2023, 10:03 PM IST

ಕಳೆದ ಕೆಲ ತಿಂಗಳಿನಿಂದ ಬೊಂಬೆನಾಡಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ತಾಲೂಕಿನಲ್ಲಿ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಕಳವು, ಬೈಕ್‌ಗಳ ಕಳವು ಸರಗಳ್ಳತನಗಳಿಮದ ಪಟ್ಟಣದ ಜನತೆ ಅತಂಕಕ್ಕೆ ಒಳಗಾಗಿದ್ದಾರೆ. 


ವಿಜಯ್‌ ಕೇಸರಿ

ಚನ್ನಪಟ್ಟಣ (ಸೆ.02): ಕಳೆದ ಕೆಲ ತಿಂಗಳಿನಿಂದ ಬೊಂಬೆನಾಡಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ತಾಲೂಕಿನಲ್ಲಿ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಕಳವು, ಬೈಕ್‌ಗಳ ಕಳವು ಸರಗಳ್ಳತನಗಳಿಮದ ಪಟ್ಟಣದ ಜನತೆ ಅತಂಕಕ್ಕೆ ಒಳಗಾಗಿದ್ದಾರೆ. ಒಂದೆರಡು ತಿಂಗಳಿಂದ ಬೀಗ ಹಾಕಿದ ಮನೆಗಳು ಗುರುತಿಸಿ ಕಳ್ಳತನ ಮಾಡುವುದು, ಜನನಿಬಿಡ ಸ್ಥಳಗಳಲ್ಲೇ ಮಹಿಳೆಯರ ಸರಗಳ್ಳತನ, ಮನೆ ಮುಂದೆ ನಿಲ್ಲಿಸಿದ್ದ ಬೈಕ್‌, ಕಾರುಗಳನ್ನು ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಬೊಂಬೆನಾಡು ಖ್ಯಾತಿಯ ಚನ್ನಪಟ್ಟಣ ಖದೀಮರ ಹಾಟ್‌ಸ್ಪಾಟ್‌ ಪರಿವರ್ತಿತವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ.

Tap to resize

Latest Videos

ಅಂಗಡಿ ಮನೆಗಳಲ್ಲಿ ಕಳವು: ಬೀಗ ಹಾಕಿದ ಅಂಗಡಿಗಳು, ಮನೆಗಳನ್ನು ಗುರುತಿಸುವ ಕಳ್ಳರು ಬೀಗ ಒಡೆದು ಕ್ಷಣಾರ್ಧದಲ್ಲಿ ಒಡವೆ, ವಸ್ತುಗಳನ್ನು ದೋಚುತ್ತಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಸುಮಾರು 12ಕ್ಕೂ ಹೆಚ್ಚು ಅಂಗಡಿ, ಮನೆಗಳ್ಳತನ ನಡೆದಿದೆ. ಅದರಲ್ಲೂ ಜುಲೈ ತಿಂಗಳು ಒಂದರಲ್ಲೇ 7 ಮನೆಗಳ್ಳತನಗಳಾಗಿದ್ದು, ಜನ ಮನೆಗೆ ಬೀಗ ಹಾಕಿ ಹೊರಹೋಗಲು ಹಿಂಜರಿಯುವಂತಾಗಿದೆ. ನಗರದ ಮಹಾಲಕ್ಷ್ಮಿ ಬಡಾವಣೆಯ ಮನೆ ಬೀಗ ಮುರಿದು ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದರು. ಅಪ್ಪಗೆರೆ ಐಟಿಐ ಕಾಲೇಜಿನ ಬಳಿಯ ಮನೆಯೊಂದರಲ್ಲಿ ಮಧ್ಯಾಹ್ನವೇ ಬೀಗ ಮುರಿದು 8 ಲಕ್ಷ ಮೌಲ್ಯದ ಒಡವೆ ಹಣ ಕಳವಾಗಿತ್ತು. ಅಪ್ಪರ್‌ ಡೇರಾದ ಮನೆ ಬೀರುವಿನಲ್ಲಿ 2 ಲಕ್ಷ, ಬಸವೇಶ್ವರ ನಗರದ ಮನೆಯೊಂದರ ಬೀಗ ಒಡೆದು 9 ಲಕ್ಷ ಮೌಲ್ಯದ ನಗದು, ಆಭರಣ, ದೊಡ್ಡಮಳೂರಿನ ಹಾರ್ಡ್‌ವೇರ್‌ ಅಂಗಡಿಯ ಛಾವಣಿ ಕತ್ತರಿಸಿ 1.37 ಲಕ್ಷ ಮೌಲ್ಯದ ವಸ್ತುಗಳ ಕಳವು ಪ್ರಕರಣಗಳು ಜನರ ನಿದ್ದೆ ಗೆಡಿಸಿದೆ.

ರಾಜೀವ್‌ಗಾಂಧಿ ಮೆಡಿಕಲ್‌ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್‌ಡಿಕೆ ಆಕ್ರೋಶ

ಕಾರು, ಬೈಕ್‌ಗಳು ಮಾಯ: ಮನೆ ಮುಂದೆ ನಿಲ್ಲಿಸುವ ಕಾರು, ಬೈಕ್‌ಗಳಿಗೂ ರಕ್ಷಣೆಯಿಲ್ಲದಂತಾಗಿದೆ. ತಾಲೂಕಿನಲ್ಲಿ ಮೂರು ತಿಂಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ವಾಹನ ಕಳವು ಮಾಡಲಾಗಿದೆ. ಇತ್ತೀಚಿಗೆ ಮಳೂರು ಬಳಿ ಟೀ ಕುಡಿದು ಬರುವಷ್ಟರಲ್ಲಿ ಬೈಕ್‌ ಕಳವಾಗಿತ್ತು.

ದೇವಸ್ಥಾನಗಳೂ ಸುರಕ್ಷಿತವಲ್ಲ: ಇನ್ನು ದೇವಸ್ಥಾನಗಳ ಬಾಗಿಲು ಒಡೆದು ದೇವರ ಮೇಲಿನ ಆಭರಣ ಹಾಗೂ ಹುಂಡಿಯನ್ನು ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ದೇವಸ್ಥಾನಗಳನ್ನು ಗುರುತಿಸಿ ಹುಂಡಿ ಹಣ, ಚಿನ್ನಭಾರಣ, ಬೆಳ್ಳಿ ವಸ್ತುಗಳನ್ನು ಕಳ್ಳರು ಹೊತ್ತೊಯ್ಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಗರ ವ್ಯಾಪ್ತಿಯ ಹೌಸಿಂಗ್‌ ಬೋರ್ಡ್‌ನ ಬಲಮುರಿ ಗಣೇಶನ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣವೇ ಇದಕ್ಕೆ ತಾಜಾ ಉದಾಹರಣೆ.

ಒಡವೆ ಧರಿಸಿ ಓಡಾಡಲು ಭಯ: ಇನ್ನು ಮಹಿಳೆಯರು ಒಡೆವೆಗಳನ್ನು ಹಾಕಿಕೊಂಡು ಬಸ್‌ಗಳಲ್ಲಿ ಪ್ರಯಾಣಿಸುವುದೇ ಅಪಾಯಕಾರಿ ಎಂಬಂತಾಗಿದೆ. ಇತ್ತೀಚೆಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಹರೂರು ಹಾಗೂ ಕನ್ನಮಂಗಲ ಗ್ರಾಮದ ಮಹಿಳೆಯರ 1.92 ಲಕ್ಷ ಮೌಲ್ಯದ 55 ಗ್ರಾಂ ಚಿನ್ನದ ಸರ, 2.10 ಲಕ್ಷ ಮೌಲ್ಯದ 60 ಗ್ರಾಂ ಚಿನ್ನಾಭರಣ ಕಳವು, ಬ್ರಹ್ಮಣೀಪುರ ಗ್ರಾಮದ ವೃದ್ಧೆಯ 2.55 ಲಕ್ಷ ಮೌಲ್ಯದ 60 ಗ್ರಾಂ ತೂಕದ ಚಿನ್ನದ ಸರ, ನಗರದ ಅಂಚೆ ಕಚೇರಿ ರಸ್ತೆಯಲ್ಲಿ ವೃದ್ಯಾಪ್ಯ ವೇತನ ಮಾಡಿಸಿಕೊಡುವ ನೆಪದಲ್ಲಿ ವೃದ್ಧೆಯೊಬ್ಬರ 45 ಗ್ರಾಂ ಚಿನ್ನಾಭರಣ ದೋಚಿ ಪರಾರಿ, ಬಸ್‌ನಲ್ಲಿ ಕೆಲಗೆರೆ ಗ್ರಾಮದ ವೃದ್ಧೆಯ 36 ಗ್ರಾಂ ಚಿನ್ನದ ಸರ, ಗಂಗೆದೊಡ್ಡಿ ಗ್ರಾಮದ ವೃದ್ಧೆಯ 49.500 ನಗದು ಕಳವು ಮಾಡಿದ್ದು, ಮಹಿಳೆಯರು ಒಡವೆ ಧರಿಸಿ ಆಚೆ ಬರಲು ಹಿಂಜರಿಯುವಂತಾಗಿದೆ.

ಜಾನುವಾರು ಕುರಿತು ಜೋಪಾನ: ಇದಲ್ಲದೇ ಇತ್ತೀಚಿನ ದಿನಗಳಲ್ಲಿ ಮನೆ ಮುಂದೆ ಹಾಗೂ ಕೊಟ್ಟಿಗೆಯಲ್ಲಿ ಕಟ್ಟಿದ ಜಾನುವಾರುಗಳನ್ನು ಕಳವು ಮಾಡಲಾಗುತ್ತಿದೆ. ಕಳೆದ ವಾರ ತಾಲೂಕಿನ ಮತ್ತೀಕೆರೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳನ್ನು ಅಪಹರಿಸಲಾಗಿದೆ. ಇದಲ್ಲದೇ ತಾಲೂಕಿನ ವಿವಿಧೆಡೆ ಕುರಿ ಹಾಗೂ ಮೇಕೆಗಳನ್ನು ಶೆಡ್‌ನಿಂದ ಕಳವು ಮಾಡುತ್ತಿದ್ದಾರೆ. ಇದೆಲ್ಲಕ್ಕೂ ಕಳಶವಿಟ್ಟಂತೆ ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ರಸ್ತೆ ವಿಭಜಕದ ಮಧ್ಯೆ ಹಾಕಿರುವ ತಂತಿ ಬೇಲಿಗಳನ್ನೇ ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ. ತಾಲೂಕಿನಲ್ಲಿ ಕಳ್ಳರ ಹಾವಳಿ ಹೆಚ್ಚಳಗೊಂಡಿರುವುದು ಚನ್ನಪಟ್ಟಣದ ನಾಗರಿಕರನ್ನು ಚಿಂತೆಗೀಡು ಮಾಡಿದೆ.

55ಕ್ಕೂ ಹೆಚ್ಚು ಪ್ರಕರಣ: ಕಳೆದ ಮೂರು ತಿಂಗಳ ಅವಧಿಯಲ್ಲಿ 12 ಅಂಗಡಿ ಹಾಗೂ ಮನೆಗಳ್ಳತನ, 21ಕ್ಕೂ ಹೆಚ್ಚು ವಾಹನಗಳ ಕಳ್ಳತನ, ಮಹಿಳೆಯರ ಚಿನ್ನಾಭರಣ, ಜಾನುವಾರು ಹಾಗೂ ಇತರೆ ಕಳ್ಳತನ ಪ್ರಕರಣಗಳು ದಾಖಲಾಗಿದೆ. ಜನರು ನಿರ್ಬಿಡೆಯಿಂದ ಜೀವನ ಸಾಗಿಸುವುದೇ ದುಸ್ತರವಾಗಿ ಪರಿಣಮಿಸಿದೆ. ಅದರಲ್ಲೂ ಜುಲೈ ತಿಂಗಳಿನಲ್ಲೇ ಹೆಚ್ಚು ಕಳ್ಳತನ ಪ್ರಕರಣಗಳು ನಡೆದಿದ್ದು, ಕಳ್ಳರ ಕಾಟಕ್ಕೆ ಕಡಿವಾಣ ಹಾಕಬೇಕಿದೆ.

ಪ್ರಮುಖ ಪ್ರಕರಣಗಳು
1.ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಮನೆ ಬೀಗ ಮುರಿದು 4 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಸೇರಿ 6 ಲಕ್ಷ ಮೌಲ್ಯದ ಕಳವು.

2.ಅಪ್ಪಗೆರೆ ಐಟಿಐ ಕಾಲೇಜು ಬಳಿ ಹಗಲಲ್ಲೆ ಮನೆಯೊಂದರ 8 ಲಕ್ಷ ಮೌಲ್ಯದ ಹಣ ಒಡವೆ ಹಣ ಕಳವು.

3.ಅಪ್ಪರ್‌ ಡೇರಾ ಮನೆಯ ಬೀರುವಿನಿಂದ 2 ಲಕ್ಷ ನಗದು ಕಳವು.

4.ಬಸವೇಶ್ವರ ನಗರದ ಮನೆಯೊಂದರ ಬೀಗ ಒಡೆದು 1.5 ಲಕ್ಷ ನಗದು, 7.5 ಲಕ್ಷ ಮೌಲ್ಯದ ಚುನ್ನಾಭರಣ ಸೇರಿ 9 ಲಕ್ಷ ಮೌಲ್ಯದ ವಸ್ತುಗಳ ಕಳವು.

5.ದೊಡ್ಡಮಳೂರಿನ ಹಾರ್ಡ್‌ವೇರ್‌ ಅಂಗಡಿ ಛಾವಣಿ ಕತ್ತರಿಸಿ 1.37 ಲಕ್ಷ ಮೌಲ್ಯದ ವಸ್ತುಗಳ ಕಳವು.

6.ಬಸ್‌ನಲ್ಲಿ ಹರೂರು, ಕನ್ನಮಂಗಲದ ಇಬ್ಬರು ಮಹಿಳೆಯರ 55 ಗ್ರಾಂ ಹಾಗೂ 60 ಗ್ರಾಂ ಚಿನ್ನಾಭರಣ ಕಳವು.

ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇಧಕ್ಕೆ ಚಿಂತನೆ: ಯಾಕೆ ಗೊತ್ತಾ?

7.ಬಸ್‌ನಲ್ಲಿ ಬ್ರಹ್ಮಣೀಪುರದ ವೃದ್ಧೆಯ 2.55 ಲಕ್ಷ ಮೌಲ್ಯದ 60 ಗ್ರಾಂ ಒಡವೆ ಕಳವು.

8.ವೃದ್ಧಾಪ್ಯ ವೇತನ ಮಾಡಿಕೊಡುವ ಹೆಸರಿನಲ್ಲಿ ವೃದ್ಧೆಯೊಬ್ಬರ 2.77 ಲಕ್ಷ ಮೌಲ್ಯದ 45 ಗ್ರಾಂ ಚಿನ್ನಾಭರಣದ ದೋಚಿ ಪರಾರಿ.

9.ಬಸ್‌ನಲ್ಲಿ ಕೆಲಗೆರೆ ಗ್ರಾಮದ ವೃದ್ಧೆಯ 36 ಗ್ರಾಂ ಚಿನ್ನದ ಸರ, ಗಂಗೆದೊಡ್ಡಿ ಗ್ರಾಮದ ವೃದ್ಧೆಯ 49.500 ನಗದು ಕಳವು.

10.ದೊಡ್ಡಮಳೂರು ಹಾರ್ಡ್‌ವೇರ್‌ ಅಂಗಡಿಯಲ್ಲಿ 1.37 ಲಕ್ಷ ಮೌಲ್ಯದ ವಸ್ತುಗಳ ಕಳವು.

click me!