ನಕಲಿ ಬಂಗಾರದ ಗುಂಡು ಕೊಟ್ಟು 15 ಲಕ್ಷ ರು. ಪಡೆದು ವಂಚನೆ| ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಬಳಿ ನಡೆದ ಘಟನೆ| ಉತ್ತರ ಭಾರತಕ್ಕೆ ಸೇರಿದ ಇಬ್ಬರು ಖದೀಮರು|
ಕಾರಟಗಿ(ಅ.29): ರಸ್ತೆ ನಿರ್ಮಾಣದ ವೇಳೆ ಸಿಕ್ಕ ಬಂಗಾರದ ಗುಂಡುಗಳೆಂದು ನಂಬಿಸಿ ಸುಮಾರು ಒಂದುವರೆ ಕೆ.ಜಿ.ಯಷ್ಟು ನಕಲಿ ಬಂಗಾರದ ಗುಂಡುಗಳನ್ನು ಕೊಟ್ಟು 15 ಲಕ್ಷ ರು.ಗಳನ್ನು ಪಡೆದು ಕಿರಾಣಿ ಅಂಗಡಿ ಶೆಟ್ಟರೊಬ್ಬರಿಗೆ ಅಪರಿಚಿತರು ನಾಮ ಹಾಕಿ ಪರಾರಿಯಾಗಿರುವ ಘಟನೆ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ.
ಗಂಗಾವತಿ ನಗರದ ಕೆ.ಇ.ಶ್ರೀನಿವಾಸ್ ಶೆಟ್ಟಿ ಶ್ರೀರಾಮನಗರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದು ಅಲ್ಲಿಗೆ 15 ದಿನಗಳ ಹಿಂದೆ ತೆರಳಿದ ಉತ್ತರ ಭಾರತಕ್ಕೆ ಸೇರಿದ ಇಬ್ಬರು ಅಪರಿಚಿತರು ಶೆಟ್ರರನ್ನು ಪರಿಚಯ ಮಾಡಿಕೊಂಡು ದಿನಸಿ ಖರೀದಿಸಿ ವಿಶ್ವಾಸ ಮೂಡಿಸಿದ್ದರು. ಹೀಗೆ ವಿಶ್ವಾಸ ಮೂಡಿಸಿದ ಅಪರಿಚಿತರು, ತಾವು ರಸ್ತೆ ನಿರ್ಮಾಣ ಮಾಡುವಾಗ ಭೂಮಿಯಲ್ಲಿ ಬಂಗಾರದ ಗುಂಡುಗಳು ಸಿಕ್ಕಿವೆ ಎಂದು ಹೇಳಿದ್ದರು. ಸರಿಸುಮಾರು ಒಂದುವರೆ ಕೆಜಿಯಷ್ಟು ಬಂಗಾರದ ಗುಂಡುಗಳು ಸಿಕ್ಕಿದ್ದು ಬೇಕಾದರೆ ಎರಡನ್ನು ನೋಡಿ ಎಂದು ಕೊಟ್ಟಿದ್ದರು. ಎರಡು ಬಂಗಾರದ ಗುಂಡುಗಳನ್ನು ಪಡೆದಿದ್ದ ಶೆಟ್ಟರು, ಗಂಗಾವತಿಯಲ್ಲಿನ ಮಾಳ್ವಿಸಾ ಜುವೆಲರ್ಸ್ ಮಾಲಿಕ ಅಪ್ಪು ಬಳಿ ತೆಗೆದುಕೊಂಡು ಗುಂಡುಗಳನ್ನು ಪರೀಕ್ಷಿಸಿ ಬಂಗಾರವೆಂದು ದೃಢಪಡಿಸಿಕೊಂಡಿದ್ದರು.
ದಲಿತರ ಕೇರಿಗೆ ನುಗ್ಗಿ ಚಪ್ಪಲಿ, ಮಾರಕಾಸ್ತ್ರಗಳಿಂದ ಸವರ್ಣಿಯರ ಹಲ್ಲೆ
ಇದನ್ನು ನಂಬಿದ್ದ ಕಿರಾಣಿ ಅಂಗಡಿ ಶೆಟ್ರು ಆ ಅಪರಿಚಿತರೊಂದಿಗೆ ಒಂದುವರೆ ಕೆಜಿ ಬಂಗಾರವನ್ನು ಇಡಿಯಾಗಿ ಖರೀದಿಸಲು ಮುಂದಾಗಿದ್ದರು. 18 ಲಕ್ಷ ರು.ಗೆ ನೀಡುವುದಾಗಿ ಅಪರಿಚಿತರು ಬೇಡಿಕೆ ಇಟ್ಟಿದ್ದರು. ಕೊನೆಗೆ 15 ಲಕ್ಷ ರು. ಖರೀದಿಸಲು ಒಪ್ಪಂದವಾಗಿ, ಸಿದ್ದಾಪುರ ಬಳಿಯ ಲಕ್ಷ್ಮೀ ಕ್ಯಾಂಪ್‌ನಲ್ಲಿ ಬಂಗಾರವಿದ್ದು ಅಲ್ಲಿಯೇ ಕೊಡುವುದಾಗಿ ನಂಬಿಸಿ ಮಾತುಕತೆ ಮುಗಿಸಿದ್ದರು.
ಲಕ್ಷ್ಮಿಕ್ಯಾಂಪ್ ಬಳಿ ಶೆಟ್ಟರು, ಅಪರಿಚಿತರಿಗೆ 15 ಲಕ್ಷ ರು. ನೀಡಿ ಒಂದುವರೆ ಕೆಜಿ ಖರೀದಿಸಿದ್ದರು. ನಂತರ ಎಲ್ಲ ಬಂಗಾರದ ಗುಂಡುಗಳನ್ನು ಪರೀಕ್ಷಿಸಿದ ಬಳಿಕ ಇದೆಲ್ಲ ನಕಲಿ ಎನ್ನುವುದು ಗಮನಕ್ಕೆ ಬಂದಿದೆ. ಘಟನೆಗೆ ಸಂಬಂಧ ಅ. 27ರಂದು ವಂಚನೆಗೊಳಗಾದ ಕೆ.ಇ. ಶ್ರೀನಿವಾಸ್ ಶೆಟ್ಟಿಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪಿಎಸ್‌ಐ ಅವಿನಾಶ ಕಾಂಬಳೆ ತನಿಖೆ ಕೈಗೆತ್ತಿಕೊಂಡಿದ್ದಾರೆ.