ಕೆಲಸಕ್ಕಿದ್ದ ಅಂಗಡಿಯಲ್ಲೇ ಎರಡೂವರೆ ಕೆ.ಜಿ ಚಿನ್ನ ಕದ್ದ ಚಾಲಾಕಿ ಕಳ್ಳ..!

By Kannadaprabha NewsFirst Published Jul 27, 2020, 8:11 AM IST
Highlights

ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡ ಮಳಿಗೆ ಮೇಲ್ವಿಚಾರಕ|ಈ ಸಂಬಂಧ ದೂರು ನೀಡಿದ ಮಳಿಗೆಯ ಮ್ಯಾನೇಜರ್‌ ಲಕ್ಷ್ಮಿನಾರಾಯಣ್‌| ಚಿನ್ನದಂಗಡಿಯಲ್ಲಿ ಏಳೆಂಟು ವರ್ಷಗಳಿಂದ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ|

ಬೆಂಗಳೂರು(ಜು.27): ಕೆಲಸಕ್ಕಿದ್ದ ಚಿನ್ನಾಭರಣ ಮಳಿಗೆಯಲ್ಲಿ ಸಿಬ್ಬಂದಿಯೊಬ್ಬ ಸುಮಾರು ಎರಡೂವರೆ ಕೆಜಿಯಷ್ಟು ಚಿನ್ನಾಭರಣ ಕದ್ದು ಪರಾರಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನಗರದ ಎಂ.ಜಿ.ರಸ್ತೆಯಲ್ಲಿರುವ ನವರತ್ನ ಜ್ಯುವೆಲ್ಲರಿ ಮಳಿಗೆಯಲ್ಲಿ ಕೃತ್ಯ ನಡೆದಿದೆ.

ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಮಳಿಗೆ ಮೇಲ್ವಿಚಾರಕನಾಗಿದ್ದ ಆರೋಪಿ ಲಂಬೋದರ ಎಂಬಾತ ತಲೆಮರೆಸಿಕೊಂಡಿದ್ದಾನೆ. ಮಳಿಗೆಯ ಮ್ಯಾನೇಜರ್‌ ಲಕ್ಷ್ಮಿನಾರಾಯಣ್‌ ಎಂಬುವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನಾಯಿ ಮರಿ ಮಾರಾಟದ ನೆಪದಲ್ಲಿ ವಂಚನೆ: ವ್ಯಕ್ತಿಗೆ ಟೋಪಿ ಹಾಕಿದ ಕಳ್ಳರು..!

ನವರತ್ನ ಶಾಪ್‌ನಲ್ಲಿ ಆರೋಪಿ ಏಳೆಂಟು ವರ್ಷಗಳಿಂದ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಗ್ರಾಹಕರು ನೀಡುವ ಚಿನ್ನದ ಆಭರಣಗಳನ್ನು ರಿಪೇರಿ ಮಾಡಿಸಿ ಮಳಿಗೆಗೆ ತಂದುಕೊಡುವ ಕಾರ್ಯ ಮಾಡುತ್ತಿದ್ದ. ಹಲವು ವರ್ಷಗಳಿಂದ ಇದೇ ಕಾಯಕ ಮಾಡುತ್ತಿದ್ದ. ಜು.7ರಂದು ಗ್ರಾಹಕರೊಬ್ಬರು ರಿಪೇರಿಗಾಗಿ ನೀಡಿದ್ದ ಚಿನ್ನದ ಬಗ್ಗೆ ಪ್ರಶ್ನಿಸಿದ ವೇಳೆ, ಅನುಮಾನ ಬರುವಂತೆ ಲಂಬೋದರ ಉತ್ತರ ನೀಡಿದ್ದಾನೆ. ಇದರಿಂದ ಅನುಮಾನಗೊಂಡ ಮ್ಯಾನೇಜರ್‌ ಲಕ್ಷ್ಮಿನಾರಾಯಣ್‌ ಜು.23ರಂದು ಆರೋಪಿ ಲಂಬೋದರ್‌ಗೆ ನೀಡಿದ ಚಿನ್ನದ ಬಗ್ಗೆ ಪರಿಶೀಲಿಸಿದ್ದರು. ಸುಮಾರು 2 ಕೆ.ಜಿ. 400 ಗ್ರಾಂನಷ್ಟು ಚಿನ್ನಾಭರಣ ಕಾಣೆಯಾಗಿರುವುದು ಗೊತ್ತಾಗಿದೆ. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

click me!