ಮುಂಬೈನ ಮಲಾಡ್‌ನಲ್ಲಿ ಕಳ್ಳತನಕ್ಕೆ ನುಗ್ಗಿದ ವ್ಯಕ್ತಿ ಬೆಲೆಬಾಳುವ ವಸ್ತುಗಳು ಸಿಗದಿದ್ದಾಗ ಮಹಿಳೆಗೆ ಮುತ್ತಿಟ್ಟು ಪರಾರಿಯಾಗಿದ್ದಾನೆ. ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಮುಂಬೈ (ಜ.6) ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ ಖದೀಮನಿಗೆ ಬೆಳೆಬಾಳುವ ವಸ್ತುಗಳು ಸಿಗದಿದ್ದಾಗ ಮನೆಯಲ್ಲಿದ್ದ ಮಹಿಳೆಗೆ ಮುತ್ತು ಕೊಟ್ಟು ಪರಾರಿಯಾದ ವಿಚಿತ್ರ ಘಟನೆ ಮುಂಬೈನ ಹೊರವಲಯದ ಮಲಾಡ್ ಎಂಬಲ್ಲಿ ನಡೆದಿದೆ.
ಕಳೆದ ಜನೆವರಿ 3 ರಂದು ಈ ಘಟನೆ ನಡೆದಿದೆ. ಇದರಿಂದ ಆಘಾತಕ್ಕೆ ಒಳಗಾದ ಮಹಿಳೆ ಕುರಾರ್ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ಕೃತ್ಯದ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ, ಕಿರುಕುಳ ಮತ್ತು ದರೋಡೆ ಯತ್ನದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಮಲಾಡ್‌ನ ಕುರಾರ್ ನಿವಾಸಿಯಾಗಿದ್ದು, ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದಾನ ಕೇಳುವ ನೆಪದಲ್ಲಿ ಕಳ್ಳತನಕ್ಕೆ ಯತ್ನ; ಗ್ರಾಮಸ್ಥರಿಂದ ನಕಲಿ ಸ್ವಾಮೀಜಿಗಳಿಗೆ ಹಿಗ್ಗಾಮುಗ್ಗಾ ಗೂಸಾ!
ಸಂತ್ರಸ್ತೆ ಮಹಿಳೆ ಹೇಳಿದ್ದೇನು?
ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಸುಮಾರು 38 ವರ್ಷದ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಒಳಗಿನಿಂದ ಬಾಗಿಲು ಲಾಕ್ ಮಾಡಿದ್ದಾನೆ. ನನ್ನ ಬಾಯಿ ಮುಚ್ಚಿಸಿ ಬೆಲೆ ಬಾಳುವ ಮೊಬೈಲ್, ವಸ್ತುಗಳು, ನಗದು ಹಣ, ಎಟಿಎಂ ಕಾರ್ಡ್ ನೀಡುವಂತೆ ಕೇಳಿದ್ದಾನೆ. ಆದರೆ ನಾನು ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳಿಲ್ಲ,ಚಿನ್ನಾಭರಣಗಳಿಲ್ಲ ಎಂದು ಹೇಳಿದ್ದೇನೆ ಆಗ ಆರೋಪಿ ನನಗೆ ಮುತ್ತಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ಘಟನೆಯ ಬಗ್ಗೆ ತಿಳಿಸಿದ್ದಾಳೆ.
ಇದನ್ನೂ ಓದಿ: ಮದುವೆಯಾದ 6 ತಿಂಗಳಿಗೇ ಶೀಲ ಶಂಕಿಸಿ ನಿತ್ಯ ಕಿರುಕುಳ; ತವರಿಗೆ ಹೋಗಿದ್ದ ಪತ್ನಿಯನ್ನ ಕರೆತಂದು ಕತೆ ಮುಗಿಸಿದ ಪಾಪಿ ಗಂಡ!
ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ:
ಆರೋಪಿಯ ವಿಚಾರಣೆ ನಡೆಸುತ್ತಿರುವ ಕುರಾರ್ ಪೊಲೀಸರು ಹೇಳುವಂತೆ, ಆರೋಪಿಗೆ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆರೋಪಿ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದು, ಪ್ರಸ್ತುತ ನಿರುದ್ಯೋಗಿಯಾಗಿದ್ದಾನೆ, ಕುಟುಂಬ ನಿರ್ವಹಣೆಗೆ ಈ ಕೃತ್ಯವೆಸಗಿರುವ ಸಾಧ್ಯತೆಯಿದೆ ಪ್ರಕರಣ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.