ದರೋಡೆ ಮಾಡಲು ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳ ಮುತ್ತು ಕೊಟ್ಟು ಪರಾರಿಯಾದ ಘಟನೆ ಮುಂಬೈನಲ್ಲಿ ನಡೆದಿದೆ. ಏನಿದು ಘಟನೆ?
ದರೋಡೆ ಪ್ರಕರಣದಲ್ಲಿಯೂ ಜನರು ಖುಷಿ ಪಡುವ ಘಟನೆ ನಡೆದಿರಲು ಸಾಧ್ಯವೇ ಇಲ್ಲ ಬಿಡಿ. ವೈರಿಗಳ ಮನೆಯಲ್ಲಿ ಕಳ್ಳತನವಾದರೆ ಒಳಗೊಳಗೇ ಖುಷಿ ಪಡುವ ಜನರು ಇದ್ದಾರೆಯೇ ವಿನಾ, ಕಳ್ಳತನ, ದರೋಡೆಯಂಥ ಸುದ್ದಿಗಳನ್ನು ಕೇಳಿದಾಗ ಯಾರ ಮನೆ, ಅವರು ಯಾರು ಎನ್ನುವುದು ಗೊತ್ತಿರದಿದ್ದರೂ ಅಯ್ಯೋ ಪಾಪ ಎಂದು ತಂತಾನೇ ಮಾತು ಬರುತ್ತದೆ. ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ್ದನ್ನು ಕ್ಷಣ ಮಾತ್ರದಲ್ಲಿ ಕಳ್ಳರು ಕೊಂಡೊಯ್ಯುತ್ತಾರೆ ಎಂದರೆ ಎಂಥವರ ಕರುಳಾದರೂ ಚುರುಕ್ ಎಂದೇ ಎನ್ನಿಸುತ್ತದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಕಳ್ಳ ಮಾಡಿದ್ದನ್ನು ನೋಡಿ ನೆಟ್ಟಿಗರು ಆತನನ್ನು ಬೈಯುವ ಬದಲು ತಮಾಷೆಯ ಕಮೆಂಟ್ಸ್ ಹಾಕುತ್ತಿದ್ದಾರೆ. ಸೋ ಸ್ವೀಟ್ ಎಂದೂ ಕೆಲವರು ಹೇಳುತ್ತಿದ್ದಾರೆ.
ಅಷ್ಟಕ್ಕೂ ಅಂಥದ್ದೇನು ಮಾಡಿದ ಕಳ್ಳ ಎನ್ನುತ್ತೀರಾ? ಕೆಲವೊಮ್ಮೆ ಕಳ್ಳತನ ಮಾಡಲು ಬಂದವರು ಕೊಲೆ ಮಾಡುವುದು ಇದೆ. ಮನೆಯಲ್ಲಿ ಏನೂ ಸಿಗದಿದ್ದರೂ ಸಿಟ್ಟಿನಲ್ಲಿ ಮನೆಯಲ್ಲಿ ಇದ್ದವರ ಮೇಲೆ ಹಲ್ಲೆ ಮಾಡಿ ಹೋಗುವುದೂ ಇದೆ. ಆದರೆ ಮುಂಬೈನ ಈ ಘಟನೆಯಲ್ಲಿ ಆದದ್ದೇ ಬೇರೆ. ಮುಂಬೈನ ಮಲಾಡ್ ಕುರಾರ್ ಪ್ರದೇಶದಲ್ಲಿ ನಡೆದ ವಿಲಕ್ಷಣ ಘಟನೆ ಇದಾಗಿದೆ. ದರೋಡೆ ಮಾಡುವ ಉದ್ದೇಶದಿಂದ ಒಂಟಿ ಮಹಿಳೆಯ ಮನೆಗೆ ನುಗ್ಗಿದ್ದಾನೆ ಕಳ್ಳ. ಒಳಗಿನಿಂದ ಬಾಗಿಲು ಹಾಕಿದ್ದಾನೆ. ಮಹಿಳೆ ಇದನ್ನು ನೋಡಿ ಭಯಪಟ್ಟುಕೊಂಡಿದ್ದಾರೆ. ಆಗ ಆಕೆ ಕೂಗಿಕೊಳ್ಳಲು ಹೋದಾಗ ಆಕೆಯ ಬಾಯಿಯನ್ನು ಬಲವಂತದಿಂದ ಮುಚ್ಚಿ, ಮೊಬೈಲ್ ಫೋನ್, ಎಟಿಎಂ ಕಾರ್ಡ್, ಹಣ, ಬೆಲೆ ಬಾಳುವ ವಸ್ತು ನೀಡುವಂತೆ ಒತ್ತಾಯಿಸಿದ್ದಾನೆ.
ಹೆತ್ತಮ್ಮ ಬಂದರೂ ಕಿಡ್ನಾಪರೇ ಬೇಕೆಂದು ಕಂದಮ್ಮನ ಕಣ್ಣೀರು: ಹೃದಯಸ್ಪರ್ಶಿ ವಿಡಿಯೋ ವೈರಲ್
ಆದರೆ ಆ ಮಹಿಳೆ ತನ್ನ ಬಳಿ ಅಂತಹ ಯಾವುದೇ ವಸ್ತುಗಳೂ ಇಲ್ಲ ಎಂದಾಗ, ಆ ಕಳ್ಳನಿಗೆ ಅದೇನು ಅನ್ನಿಸಿತೋ ಗೊತ್ತಿಲ್ಲ, ಆ ಮಹಿಳೆಯ ಮುತ್ತಿಕ್ಕಿ ಪರಾರಿಯಾಗಿದ್ದಾನೆ! ಬಳಿಕ ಮಹಿಳೆ ಪೊಲೀಸರಲ್ಲಿ ದೂರು ದಾಖಲಿಸಿದರು. ಅಲ್ಲಿ ಕಿರುಕುಳ ಮತ್ತು ದರೋಡೆ ಯತ್ನ ಸೇರಿದಂತೆ ಕೆಲವು ಸೆಕ್ಷನ್ ಅಡಿಯಲ್ಲಿ ಕಳ್ಳನ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದರು.
ಕೂಡಲೇ ಕಳ್ಳ ಸಿಕ್ಕಿಬಿದ್ದಿದ್ದಾನೆ. ಪೊಲೀಸರ ಪ್ರಕಾರ, ಆರರೋಪಿ ಅದೇ ಪ್ರದೇಶದ ನಿವಾಸಿ. ಆತನನ್ನು ಅರೆಸ್ಟ್ ಮಾಡಿ ನೋಟಿಸ್ ನೀಡಿದ ನಂತರ ಬಿಡುಗಡೆ ಮಾಡಲಾಗಿದೆ. ಆರೋಪಿಗೆ ಯಾವುದೇ ಪೂರ್ವ ಕ್ರಿಮಿನಲ್ ದಾಖಲೆ ಇಲ್ಲ. ಸದ್ಯ ನಿರುದ್ಯೋಗಿಯಾಗಿದ್ದು, ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ತಮಾಷೆಯ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಆ ಮಹಿಳೆಯ ಮೇಲೆ ಆತ ಕಣ್ಣು ಇಟ್ಟಿದ್ದ ಎಂದು ಕೆಲವರು ಹೇಳಿದರೆ, ನಾವಿಬ್ಬರೂ ನಿರುದ್ಯೋಗಿಗಳು, ಇಬ್ಬರೂ ಬಡವರು ಎಂದು ಕಳ್ಳನಿಗೆ ಎನ್ನಿಸಿರಬೇಕು ಎಂದು ಮತ್ತೆ ಕೆಲವರು ಹೇಳಿದ್ದಾರೆ. ಬಂದದ್ದು ಬಂದಾಗಿದೆ, ಖಾಲಿ ಕೈಯಲ್ಲಿ ಹೋಗಬಾರದು ಎಂದು ಮುತ್ತುಕೊಟ್ಟು ಹೋಗಿದ್ದಾನೆ ಎಂದು ಮತ್ತೆ ಕೆಲವರು ತಮಾಷೆ ಮಾಡಿದ್ದಾರೆ.
'ಬಿಂದಾಸ್' ತಾರೆ ಹನ್ಸಿಕಾ ಮೋಟ್ವಾನಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್! ಖ್ಯಾತ ನಟಿಯಿಂದ ದೂರು ದಾಖಲು