ತಮ್ಮ 26ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ದಂಪತಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ನಡೆದಿದೆ. ಜೆರಿಲ್ ಮತ್ತು ಆ್ಯನ್ ಮಾನ್ಕ್ರಿಫ್ ತಮ್ಮ ವಿವಾಹದ ಉಡುಪುಗಳನ್ನು ಧರಿಸಿ, ವಿದಾಯ ಸಂದೇಶವನ್ನು ಆಪ್ತರಿಗೆ ಕಳುಹಿಸಿದ್ದಾರೆ.
ನಾಗ್ಪುರ: ಕುಟುಂಬಸ್ಥರು ಮತ್ತು ಆಪ್ತರೊಂದಿಗೆ 26ನೇ ವಾರ್ಷಿಕೋತ್ಸವದ ಪಾರ್ಟಿ ಆಚರಿಸಿ ರಾತ್ರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಾಗ್ಪುರದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಸಾಯುವ ಮುನ್ನ ಜೋಡಿ ಕಳುಹಿಸಿದ ಸಂದೇಶದಿಂದ ಬುಧವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಮೃತರನ್ನು ಜೆರಿಲ್ ಡ್ಯಾಮ್ಸನ್ ಆಸ್ಕರ್ (57) ಮತ್ತು ಆ್ಯನ್ (46) ಎಂದು ಗುರುತಿಸಲಾಗಿದೆ. ಮಂಗಳವಾರವಷ್ಟೇ ಜೆರಿಲ್ ಮತ್ತು ಆ್ಯನ್ ಅದ್ಧೂರಿಯಾಗಿ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ವೇಳೆ 26 ವರ್ಷದ ಹಿಂದೆ ಮದುವೆ ದಿನ ಧರಿಸಿದ್ದ ಬಟ್ಟೆಯನ್ನು ಜೆರಿಲ್ ಮತ್ತು ಆ್ಯನ್ ಧರಿಸಿದ್ದರು.
ಜೆರಿಲ್ ಅವರ ದೇಹ ಅಡುಗೆಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಆ್ಯನ್ ಮೃತದೇಹ ಡ್ರಾಯಿಂಗ್ ರೂಮ್‌ನಲ್ಲಿ ಸಿಕ್ಕಿದೆ. ಮೊದಲು ಆ್ಯನ್ ಕುತ್ತಿಗೆಗೆ ಹಗ್ಗದಿಂದ ಬಿಗಿದು ಸಾಯಿಸಲಾಗಿದೆ. ನಂತರ ಶವವನ್ನು ಬಟ್ಟೆಯಿಂದ ಮುಚ್ಚಿ ಹೂಗಳಿಂದ ಅಲಂಕರಿಸಿರುವ ಜೆರಿಲ್, ಅಡುಗೆಮನೆಯಲ್ಲಿ ಸ್ಕಾರ್ಫ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜೆರಿಲ್ ಮತ್ತು ಆ್ಯನ್ ದಂಪತಿಗೆ ಮಕ್ಕಳು ಇರಲಿಲ್ಲ. ಡೆತ್‌ನೋಟ್‌ನಲ್ಲಿ ತಮ್ಮ ಸಾವಿಗೆ ಯಾರೂ ಕಾರಣ ಅಲ್ಲ ಎಂಬುದನ್ನು ದಂಪತಿ ಸ್ಪಷ್ಟಪಡಿಸಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಡೆತ್‌ನೋಟ್‌ನಲ್ಲಿ ತಿಳಿಸಿಲ್ಲ. ಇದೆಲ್ಲದರ ಜೊತೆ ತಮ್ಮ ಆಸ್ತಿಯ ಕುರಿತ ಉಯಿಲನ್ನು ಜೆರಿಲ್ ಮತ್ತು ಆ್ಯನ್ ದಂಪತಿ ಹಂಚಿಕೊಂಡಿದ್ದಾರೆ. ಮಧ್ಯರಾತ್ರಿಯವರೆಗೂ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದ ದಂಪತಿ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರೋದನ್ನು ಕಂಡು ಸಂಬಂಧಿಕರು ಮತ್ತು ನೆರೆಹೊರೆಯವರು ಆಘಾತಕ್ಕೆ ಒಳಗಾಗಿದ್ದಾರೆ.
ದಂಪತಿಯ ಆಸೆಯಂತೆಯೇ ಒಂದೇ ಶವಪೆಟ್ಟಿಗೆಯಲ್ಲಿ ಇಬ್ಬರನ್ನು ಮದುವೆ ಧಿರಿಸಿನಲ್ಲಿ ಅಂತ್ಯಸಂಸ್ಕಾರ ನೆರೆವೇರಿಸಲಾಗಿದೆ. ಕಳೆದ ಮೂರು ತಲೆಮಾರುಗಳಿಂದ ಅಂತ್ಯಕ್ರಿಯೆ ನಡೆಸುವ ವಿಜಯ್ ಅಲಿಕ್ ಮೈಕೆಲ್ ಎಂಬವರು ಮಾತನಾಡಿ, ಇದೇ ಮೊದಲ ಬಾರಿಗೆ ಇಬ್ಬರಿಗಾಗಿ ಒಂದೇ ಶವಪೆಟ್ಟಿಗೆ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ. ದಂಪತಿ ಕೈ ಹಿಡಿದುಕೊಂಡೇ ತಮ್ಮ ಅಂತ್ಯಸಂಸ್ಕಾರ ಆಗಬೇಕೆಂದು ಹೇಳಿಕೊಂಡಿದ್ದರು. ಇದೀಗ ಅದೇ ರೀತಿಯಲ್ಲಿ ನೆರವೇರಿಸಲಾಗಿದೆ ಎಂದು ಸಂಬಂಧಿಕರು ಹೇಳಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಅಕ್ರಮಗಳನ್ನು ಬಯಲಿಗೆಳೆದ ಪತ್ರಕರ್ತನ ಮೃತದೇಹ ಗುತ್ತಿಗೆದಾರನ ಮನೆ ಸಮೀಪದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆ!
ಹೋಟೆಲ್‌ವೊಂದರಲ್ಲಿ ಮುಖ್ಯ ಬಾಣಸಿಗರಾಗಿ ಜೆರಿಲ್ ಕೆಲಸ ಮಾಡಿಕೊಂಡಿದ್ದರು. ಕೋವಿಡ್-19 ಕಾಲಘಟ್ಟದಲ್ಲಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದರು. ಆದ್ರೆ ಮತ್ತೆ ಕೆಲಸಕ್ಕೆ ಹಿಂದಿರುಗಿರಲಿಲ್ಲ. ಇನ್ನು ಆ್ಯನ್ ಗೃಹಿಣಿಯಾಗಿ ಮನೆಯಲ್ಲಿದ್ದರು. ಬೆಳಗ್ಗೆ 5.47ಕ್ಕೆ ಜೆರಿಲ್ ಮತ್ತು ಆ್ಯನ್ ದಂಪತಿಯ ಪೋಸ್ಟ್ ನೋಡಿದ ಸಂಬಂಧಿಕರಿಬ್ಬರು ಎಲ್ಲರಿಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹಾಗೆ ಸ್ಥಳೀಯ ಪೊಲೀಸರಿಗೂ ವಿಷಯ ತಿಳಿಸಿ ಜೆರಿಲ್ ನಿವಾಸಕ್ಕೆ ತೆರಳಿದಾಗ ಇಬ್ಬರ ಶವ ಪತ್ತೆಯಾಗಿದೆ.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜರಿಪಟ್ಕಾ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಅರುಣ್ ಶಿರ್ಷತ್, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅನುಮಾನಸ್ಪದ ಘಟನೆ ಕಂಡು ಬಂದಿಲ್ಲ. ರಾತ್ರಿ ಪಾರ್ಟಿ ವೇಳೆ ದಂಪತಿ ತುಂಬಾ ಸಂತೋಷವಾಗಿದ್ದರು. ಇಬ್ಬರ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡು, ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮದುವೆಯಾದ 6 ತಿಂಗಳಿಗೇ ಶೀಲ ಶಂಕಿಸಿ ನಿತ್ಯ ಕಿರುಕುಳ; ತವರಿಗೆ ಹೋಗಿದ್ದ ಪತ್ನಿಯನ್ನ ಕರೆತಂದು ಕತೆ ಮುಗಿಸಿದ ಪಾಪಿ ಗಂಡ!