
ಬೆಂಗಳೂರು (ಡಿ.10) : ಬುಡುಬುಡಿಕೆ ಭವಿಷ್ಯ ಹೇಳುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಿನ್ನ ಗಂಡ ಮತ್ತು ಮಗನಿಗೆ ಇರುವ ಗಂಡಾಂತರ ಪರಿಹರಿಸುವುದಾಗಿ ಮಹಿಳೆಯೊಬ್ಬರಿಗೆ ನಿಂಬೆ ಹಣ್ಣು ಮಂತ್ರಿಸಿ ಕೊಟ್ಟು ಆಕೆ ಪ್ರಜ್ಞೆ ತಪ್ಪಿದ ಬಳಿಕ ಮೈ ಮೇಲಿನ ಒಡವೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪರಪ್ಪನ ಅಗ್ರಹಾರ ವ್ಯಾಪ್ತಿಯ ಹೊಸರೋಡ್ 14ನೇ ಕ್ರಾಸ್ ನಿವಾಸಿ ಕಾಂತಾ(42) ಅವರ ಮನೆಯಲ್ಲಿ ಡಿ.2ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೋಚುತ್ತಿದ್ದಾಗಲೇ ಮನೆಗೆ ಬಂದು ಕಳ್ಳರನ್ನು ಕೂಡಿ ಹಾಕಿದ ಮಾಲೀಕ!
ದೂರುದಾರೆ ಕಾಂತಾ ಮನೆಗೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದಾರೆ. ಡಿ.2ರಂದು ಬೆಳಗ್ಗೆ 8.50ರ ಸುಮಾರಿಗೆ ಬುಡುಬುಡಿಕೆ ವ್ಯಕ್ತಿಯೊಬ್ಬ ಮನೆಗೆ ಬಂದಿದ್ದು, ನಿಮ್ಮ ಮಗ ಹಾಗೂ ಗಂಡನಿಗೆ ಗಂಡಾಂತರವಿದೆ. ಅಮವಾಸ್ಯೆ ನಂತರ ಮೂರು ದಿನಗಳಲ್ಲಿ ಇಬ್ಬರೂ ಸತ್ತು ಹೋಗುತ್ತಾರೆ ಎಂದು ಹೆದರಿಸಿದ್ದಾನೆ. ಇದರಿಂದ ಗಾಬರಿಗೊಂಡ ಕಾಂತಾ, ಗಂಡಾಂತರಕ್ಕೆ ಪರಿಹಾರ ಕೇಳಿದಾಗ, ಆ ವ್ಯಕ್ತಿ ₹1,500 ಕೊಟ್ಟರೆ ಪರಿಹಾರ ನೀಡುವುದಾಗಿ ಹೇಳಿದ್ದಾನೆ. ಅದರಂತೆ ಕಾಂತಾ ಅವರು ಹಣ ನೀಡಿದ್ದಾರೆ.
ಬಳಿಕ ನಿಂಬೆ ಹಣ್ಣು ತರುವಂತೆ ಕಾಂತಾ ಅವರನ್ನು ಮನೆಗೆ ಒಳಗೆ ಕಳುಹಿಸಿದ್ದಾನೆ. ನಿಂಬೆ ಹಣ್ಣು ತಂದು ಆ ವ್ಯಕ್ತಿಗೆ ನೀಡಿದ್ದಾರೆ. ಆಗ ಆತ ನಿಂಬೆ ಹಣ್ಣು ಮಂತ್ರಿಸಿ ಮತ್ತೆ ಕಾಂತಾ ಅವರ ಕೈಗೆ ಕೊಟ್ಟು ಮೂರು ಸುತ್ತು ಸುತ್ತುವಂತೆ ಸೂಚಿಸಿದ್ದಾನೆ. ಅದರಂತೆ ಕಾಂತಾ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಮೂರು ಸುತ್ತು ಸುತ್ತುವಾಗ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾರೆ.
ಕರ್ತವ್ಯನಿರತ ಪೊಲೀಸ್ ಪೇದೆ ನಿಗೂಢವಾಗಿ ಕಣ್ಮರೆ
ಕೆಲ ಸಮಯದ ಬಳಿಕ ಎಚ್ಚರಗೊಂಡು ನೋಡಿದಾಗ, ಬುಡಬುಡಿಕೆ ವ್ಯಕ್ತಿ ಹಾಗೂ ಆಕೆಯ ಕತ್ತಿನಲ್ಲಿ ಧರಿಸಿದ್ದ 12 ಗ್ರಾಂ ತೂಕದ ಚಿನ್ನದ ಸರ ಇಲ್ಲದಿರುವುದು ಕಂಡು ಬಂದಿದೆ. ಬಳಿಕ ಕಾಂತಾಗೆ ತಾನು ಮೋಸ ಹೋಗಿರುವುದು ಅರಿವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ