Prajwal Revanna Sexual Harassment Case: ಹೊಳೆನರಸೀಪುರದಲ್ಲಿ ರೇವಣ್ಣ, ಪ್ರಜ್ವಲ್‌ ವಿರುದ್ಧ ಸಂತ್ರಸ್ತೆ ದೂರು

Published : Apr 29, 2024, 06:48 AM IST
Prajwal Revanna Sexual Harassment Case: ಹೊಳೆನರಸೀಪುರದಲ್ಲಿ ರೇವಣ್ಣ, ಪ್ರಜ್ವಲ್‌ ವಿರುದ್ಧ ಸಂತ್ರಸ್ತೆ ದೂರು

ಸಾರಾಂಶ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಮತ್ತು ಅವರ ಪುತ್ರ, ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಹಾಸನ ಜಿಲ್ಲೆಯ ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು (ಏ.29): ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಮತ್ತು ಅವರ ಪುತ್ರ, ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಹಾಸನ ಜಿಲ್ಲೆಯ ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 47 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ರೇವಣ್ಣ ಮತ್ತು ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ 354(ಎ)- ಲೈಂಗಿಕ ಕಿರುಕುಳ, ಐಪಿಸಿ ಸೆಕ್ಷನ್‌ 354(ಡಿ)- ಕಿರುಕುಳ ಉಂಟುಮಾಡುವ ಉದ್ದೇಶದಿಂದ ದೇಹ ಸ್ಪರ್ಶ, ಐಪಿಸಿ ಸೆಕ್ಷನ್‌ 506- ಜೀವ ಬೆದರಿಕೆ ಹಾಗೂ ಐಪಿಸಿ ಸೆಕ್ಷನ್‌ 509- ಉದ್ದೇಶ ಪೂರ್ವಕವಾಗಿ ಆಕ್ಷೇಪಾರ್ಹ ಪದ ಬಳಕೆ, ಸನ್ನೆ, ಕ್ರಿಯೆಗಳ ಮೂಲಕ ಮಹಿಳೆಯ ಖಾಸಗಿತನಕ್ಕೆ ಧಕ್ಕೆ ಮಾಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೂರಿನಲ್ಲಿ ಏನಿದೆ?: ‘ನನ್ನ ಪತಿ ಈ ಹಿಂದೆ ಶಾಸಕ ಎಚ್‌.ಡಿ.ರೇವಣ್ಣ ಅವರ ಹಾಲಿನ ಡೈರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ನನಗೆ ಓರ್ವ ಮಗಳು ಇದ್ದಾಳೆ. ನಾನು ರೇವಣ್ಣ ಅವರ ಪತ್ನಿ ಭವಾನಿಗೆ ಸೋದರತ್ತೆಯ ಮಗಳಾಗಿದ್ದು, ಹತ್ತಿರದ ಸಂಬಂಧಿಯಾಗಿದ್ದೇನೆ. ನನ್ನ ಮಗ 2013ರಲ್ಲಿ ತೀರಿಕೊಂಡ ಬಳಿಕ ಎಚ್‌.ಡಿ.ರೇವಣ್ಣ ಅವರು ನನಗೆ ಕೆಲಸ ಕೊಡಿಸುವುದಾಗಿ ಮನೆಗೆ ಬರುವಂತೆ ಆಗಾಗ ಹೇಳುತ್ತಿದ್ದರು. ಅದರಂತೆ 2015ರಲ್ಲಿ ಬಿಸಿಎಂ ಮಹಿಳಾ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸಕ್ಕೆ ಸೇರಿಸಿದ್ದರು. ಇದಾದ 4 ವರ್ಷಗಳ ಬಳಿಕ ರೇವಣ್ಣ ಅವರ ಪುತ್ರ ಸೂರಜ್‌ ರೇವಣ್ಣ ಅವರ ಮದುವೆ ಸಮಯದಲ್ಲಿ ಮನೆಗೆಲಸಕ್ಕಾಗಿ ನನ್ನನ್ನು ಕರೆಸಿಕೊಂಡಿದ್ದರು. ಅಂದಿನಿಂದ ಮೂರು ವರ್ಷಗಳ ಕಾಲ ಅವರ ಮನೆಯಲ್ಲಿ ಕೆಲಸ ಮಾಡಿದ್ದೇನೆ’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

ಉಪ್ಪು ತಿಂದವ್ರು ನೀರು ಕುಡೀಬೇಕು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ಗೆ ಎಚ್‌ಡಿಕೆ ಪ್ರತಿಕ್ರಿಯೆ

ಕೊಠಡಿಗೆ ಆಹ್ವಾನ: ‘ನಾನು ಮನೆ ಕೆಲಸಕ್ಕೆ ಸೇರಿದ ನಾಲ್ಕು ತಿಂಗಳ ಬಳಿಕ ಎಚ್.ಡಿ.ರೇವಣ್ಣ ಅವರು ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸುತ್ತಿದ್ದರು. ಅವರ ಮನೆಯಲ್ಲಿ ಆರು ಜನ ಹೆಣ್ಣುಮಕ್ಕಳು ಕೆಲಸ ಮಾಡುತ್ತಿದ್ದರು. ಮನೆಗೆ ಪ್ರಜ್ವಲ್‌ ರೇವಣ್ಣ ಬಂದಾಗ ನಮಗೆ ಭಯವಾಗುತ್ತದೆ ಎಂದು ನನ್ನ ಜತೆಗೆ ಅವರು ಹೇಳುತ್ತಿದ್ದರು. ಅಂತೆಯೇ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗರು ಸಹ ನನಗೆ ಹಾಗೂ ಮನೆಯಲ್ಲಿದ್ದ ಆರು ಮಂದಿ ಕೆಲಸದ ಹೆಣ್ಣುಮಕ್ಕಳಿಗೆ ಎಚ್ಚರವಾಗಿರುವಂತೆ ತಿಳಿಸುತ್ತಿದ್ದರು’ ಎಂದು ಸಂತ್ರಸ್ತೆ ವಿವರಿಸಿದ್ದಾರೆ.

ಹಲವು ಬಾರಿ ದೌರ್ಜನ್ಯ: ‘ಎಚ್‌.ಡಿ.ರೇವಣ್ಣ ಅವರು ಮನೆಯಲ್ಲಿ ಪತ್ನಿ ಭವಾನಿ ಇಲ್ಲದಿರುವಾಗ ನನ್ನನ್ನು ಸ್ಟೋರ್ ರೂಮ್‌ಗೆ ಕರೆದು ಕೈಹಿಡಿದು ಎಳೆಯುತ್ತಿದ್ದರು. ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಸೀರೆಯ ಪಿನ್‌ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ನಾನು ಅಡುಗೆ ಮನೆಯಲ್ಲಿ ಇರುವಾಗ ಪ್ರಜ್ವಲ್‌ ರೇವಣ್ಣ ಸಹ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆ ಭಾಗದಲ್ಲಿ ಜಿಗುಟುತ್ತಿದ್ದರು. ಎಣ್ಣೆ ಹಚ್ಚಲು ನನ್ನನ್ನೇ ಕಳಿಸುವಂತೆ ಕೆಲಸದ ಹುಡುಗರ ಬಳಿ ಹೇಳಿ ಕಳುಹಿಸುತ್ತಿದ್ದರು. ಇದೇ ರೀತಿ ನನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಮಗಳ ಜತೆಗೂ ಅಸಭ್ಯ ಸಂಭಾಷಣೆ: ‘ನಾನು ಮನೆಯಲ್ಲಿ ಇದ್ದಾಗ ಪ್ರಜ್ವಲ್‌ ರೇವಣ್ಣ ನನ್ನ ಮೊಬೈಲ್‌ಗೆ ಕರೆ ಮಾಡುತ್ತಿದ್ದರು. ಈ ವೇಳೆ ನನ್ನ ಮಗಳು ಮನೆಯಲ್ಲಿ ಇರುತ್ತಿದ್ದಳು. ಹಲವು ಬಾರಿ ವಿಡಿಯೋ ಕಾಲ್‌ ಮಾಡಿ ಮಗಳ ಜತೆಗೆ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದಿಸಲು ಪ್ರಯತ್ನಿಸುತ್ತಿದ್ದರು. ಇದರಿಂದ ನನ್ನ ಮಗಳು ಹೆದರಿ ಪ್ರಜ್ವಲ್‌ ರೇವಣ್ಣನ ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಿದ್ದಳು. ಈ ಘಟನೆಗಳ ಬಳಿಕ ನಾನು ಎಚ್‌.ಡಿ.ರೇವಣ್ಣ ಅವರ ಮನೆ ಕೆಲಸ ಬಿಟ್ಟಿದ್ದೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ವಿಡಿಯೋ ನೋಡಿ ಭಯವಾಗಿದೆ: ‘ಇತ್ತೀಚೆಗೆ ಜಿಲ್ಲೆಯಾದ್ಯಂತ ಪ್ರಜ್ವಲ್‌ ರೇವಣ್ಣ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋಗಳು ವಾಟ್ಸಾಪ್‌ನಲ್ಲಿ ಹರಿದಾಡುತ್ತಿವೆ. ನನಗೂ ಕೆಲವು ವಿಡಿಯೋಗಳು ಬಂದಿವೆ. ಈ ಪೈಕಿ ವಿಡಿಯೋವೊಂದರಲ್ಲಿ ಇರುವ ಮಹಿಳೆ ತೋಟದ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಮಹಿಳೆ ಜತೆಗೆ ಪ್ರಜ್ವಲ್‌ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯದ ವಿಡಿಯೋ ನೋಡಿ ನನಗೆ ಭಯವಾಗಿದೆ. ಈ ವಿಚಾರವಾಗಿ ನನ್ನ ಗಂಡ ನನ್ನ ಶೀಲವನ್ನು ಶಂಕಿಸುತ್ತಿದ್ದಾರೆ. ನಿನ್ನ ವಿಡಿಯೋ ಹೊರಬಂದರೆ ನಮ್ಮ ಗತಿ ಏನು ಎಂದು ಕೇಳುತ್ತಿದ್ದಾರೆ. ಇದರಿಂದ ನಾನು ಮಾನಸಿಕ ಹಿಂಸೆಗೆ ಒಳಗಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ಜೀವ ಭಯವಿದೆ: ‘ಹಲವು ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಖಾಸಗಿ ಟಿ.ವಿ.ಯಲ್ಲಿ ಸುದ್ದಿ ಪ್ರಸಾರವಾಗಿದ್ದನ್ನು ನೋಡಿದೆ. ಹೀಗಾಗಿ ನಾನು ಖಾಸಗಿ ಸುದ್ದಿ ವಾಹಿನಿಗೆ ಬಂದು ಹೇಳಿಕೆ ನೀಡಿದ್ದೇನೆ. ನನಗೆ ಜೀವ ಭಯವಿದೆ. ನನ್ನ ಮತ್ತು ನನ್ನ ಮಗಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಎಚ್‌.ಡಿ.ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಬದಲಿಸಲು ‘ಕಾಂಗ್ರೆಸ್‌’ ಚಿಂತನೆ: ಪ್ರಧಾನಿ ಮೋದಿ

ವಿಡಿಯೋಗಳು ಶೀಘ್ರ ಎಫ್ಫೆಸ್ಸೆಲ್‌ಗೆ ರವಾನೆ: ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯದ ಆರೋಪದ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ವು ಮೊದಲಿಗೆ ಲೈಂಗಿಕ ದೌರ್ಜನ್ಯದ ವಿಡಿಯೋಗಳ ಅಸಲಿಯತ್ತು ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದೆ.  ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಗುರಿಯಾಗಿರುವ ಎಚ್‌.ಡಿ.ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು
ಹಣ ಸುಲಿಗೆ ಮಾಡ್ತಿದ್ದ ನಕಲಿ ಪಿಎಸ್ಐ ಬಂಧನ: ಪೊಲೀಸ್‌ ಕನಸು ಈಡೇರದಾಗ ಸುಲಿಗೆ ಕೃತ್ಯ