ಕಳೆದ ವರ್ಷ ಸರ್ಕಾರದಿಂದ ಆಯೋಜಿಸಿದ್ದ ಕೊಪ್ಪಳ ಜಿಲ್ಲೆಯ ‘ಕನಕಗಿರಿ ಉತ್ಸವ’ ನಡೆಸಿಕೊಟ್ಟಿದ್ದ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕನಿಗೆ ₹3 ಕೋಟಿಗೂ ಅಧಿಕ ಹಣ ವಂಚಿಸಿದ ಆರೋಪದಡಿ ಐವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು (ಮಾ.25): ಕಳೆದ ವರ್ಷ ಸರ್ಕಾರದಿಂದ ಆಯೋಜಿಸಿದ್ದ ಕೊಪ್ಪಳ ಜಿಲ್ಲೆಯ ‘ಕನಕಗಿರಿ ಉತ್ಸವ’ ನಡೆಸಿಕೊಟ್ಟಿದ್ದ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕನಿಗೆ ₹3 ಕೋಟಿಗೂ ಅಧಿಕ ಹಣ ವಂಚಿಸಿದ ಆರೋಪದಡಿ ಐವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಫೆಂಟ್ರಿ ರಸ್ತೆಯ ‘ಪ್ರಸ್ತುತ್ ಇನೋವೇಟಿವ್ ಕ್ರಿಯೇಷನ್ಸ್ ಮತ್ತು ಸೆಲ್ಯೂಷನ್ಸ್’ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕ ಎನ್.ವಿನಯ್ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಆಂತರ್ಯ ಮೀಡಿಯಾದ ಎಂ.ಎನ್.ವರುಣ್ ಕುಮಾರ್, ಪಾರ್ಥಸಾರಥಿ, ಕಾಮರ್ಸ್ ಅಕೌಂಟಿಂಗ್ ಸಲ್ಯೂಷನ್ಸ್‌ನ ಶಶೀಧರ್, ಸುಧಾ ಹಾಗೂ ಲಿಂಜ್ ಕಂಪನಿಯ ವೈಭವ್ ಕುಮಾರ್ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ದೂರು?: ಕಳೆದ ವರ್ಷ ಮಾರ್ಚ್ 2 ಮತ್ತು 3ರಂದು ಕನಕಗಿರಿ ಉತ್ಸವ ನಡೆಸಲು ನನ್ನ ಮಾಲೀಕತ್ವದ ಸಂಸ್ಥೆಗೆ ಅವಕಾಶ ಸಿಕ್ಕಿತ್ತು. ಈ ವೇಳೆ ನಾನು, ವಿಶ್ವಾಸ್ ಭಾರದ್ವಜ್, ಸುಧಾ ಹಾಗೂ ಪಾರ್ಥಸಾರಥಿ ನಾಲ್ವರು ಸೇರಿ ಈ ಕಾರ್ಯಕ್ರಮ ನಡೆಸಲು ಮಾತುಕತೆ ಮಾಡಿದ್ದೆವು. ಈ ಕಾರ್ಯಕ್ರಮದಿಂದ ಬರುವ ಆದಾಯವನ್ನು ನಾಲ್ವರು ಸಮನಾಗಿ ಹಂಚಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದೆವು. ಅದರಂತೆ ನಾಲ್ವರು ಸೇರಿ ಎರಡು ದಿನದ ಕನಕಗಿರಿ ಉತ್ಸವ ನಡೆಸಿದ್ದೆವು.
ಸ್ಮಾರ್ಟ್‌ಮೀಟರ್ ಶುಲ್ಕ ಹೆಚ್ಚಳಕ್ಕೆ ಆರ್‌ಡಿಎಸ್‌ಎಸ್ ನಿಯಮ ಕಾರಣ: ಗೌರವ್ ಗುಪ್ತಾ ಸ್ಪಷ್ಟನೆ
ಬೇರೆ ಮೂರು ಕಂಪನಿಗಳ ಜಿಎಸ್‌ಟಿ ಸಲ್ಲಿಕೆ: ಬಳಿಕ ಈ ಕನಕಗಿರಿ ಉತ್ಸವಕ್ಕೆ ಖರ್ಚಾಗಿದ್ದ ₹5.50 ಕೋಟಿ ಖಜಾನೆಯಿಂದ ಬಿಡುಗಡೆ ಮಾಡಲು ಜಿಎಸ್‌ಟಿ ಸಹಿತ ಬಿಲ್‌ಗಳನ್ನು ಸಲ್ಲಿಸುವಂತೆ ಸಂಸ್ಥೆಗೆ ಸೂಚಿಸಲಾಗಿತ್ತು. ಆದರೆ, ನನ್ನ ಬಳಿ ಜಿಎಸ್‌ಟಿ ಇಲ್ಲದಿದ್ದರಿಂದ ನನಗೆ ಪರಿಚಯವಿದ್ದ ಲಿಂಝ್ ಕಂಪನಿಯ ವೈಭವ್ ನಾಯಕ್ ಕಡೆಯಿಂದ ₹1.72 ಕೋಟಿ, ಆಂತರ್ಯ ಮೀಡಿಯಾದ ವರುಣ್ ಕುಮಾರ್ ಕಡೆಯಿಂದ ₹1.97 ಕೋಟಿ ಹಾಗೂ ಕಾಮರ್ಸ್ ಅಕೌಂಟಿಂಗ್ ಸಲ್ಯೂಷನ್ಸ್‌ನ ಶಶಿಧರ್ ಕಡೆಯಿಂದ ₹2 ಕೋಟಿ ಬಿಲ್‌ಗಳನ್ನು ಖಜಾನೆಗೆ ಸಲ್ಲಿಸಿದ್ದೆ ಎಂದು ವಿನಯ್ ದೂರಿನಲ್ಲಿ ತಿಳಿಸಿದ್ದಾರೆ.
ಕಮಿಷನ್ ನೀಡಲು ಒಪ್ಪಂದ: ಈ ಮೂವರಿಗೂ ಸರ್ಕಾರದ ಖಜಾನೆಯಿಂದ ಕಂಪನಿಗಳ ಖಾತೆಗೆ ಕನಕಗಿರಿ ಉತ್ಸವದ ಬಿಲ್ ಪಾವತಿಯಾದ ಬಳಿಕ ಶೇ.5ರಷ್ಟು ಕಮಿಷನ್ ಕಡಿತ ಮಾಡಿ ಬಾಕಿ ಹಣ ಕೊಡುವಂತೆ ಒಪ್ಪಂದ ಮಾಡಿಕೊಂಡಿದ್ದೆ. ಭದ್ರತೆಗಾಗಿ ಶಶಿಧರ್‌ನಿಂದ ಐದು ಚೆಕ್‌ಗಳನ್ನು ಪಡೆದಿದ್ದೆ. ಈ ಒಪ್ಪಂದ ಪತ್ರಕ್ಕೆ ನಾನು, ಸುಧಾ, ಶಶಿಧರ್ ಹಾಗೂ ವರುಣ್ ಸಹಿ ಮಾಡಿದ್ದೆವು. ಈ ಒಪ್ಪಂದದ ಪತ್ರವನ್ನು ನನ್ನ ಸಂಸ್ಥೆಯ ಕಚೇರಿಯಲ್ಲೇ ಇರಿಸಿದ್ದೆ. ಬಳಿಕ ಶಶಿಧರ್ ನೀಡಿದ್ದ ಐದು ಚೆಕ್‌ಗಳ ಪೈಕಿ ಎರಡು ಚೆಕ್‌ಗಳನ್ನು ನನ್ನ ಜತೆ ಕೆಲಸ ಮಾಡುತ್ತಿದ್ದ ಸುಧಾ ತೆಗೆದುಕೊಂಡಿದ್ದರು. ಕನಕಗಿರಿ ಉತ್ಸವಕ್ಕೆ ನಾನು ದಿವಾಕರ್ ಎಂಬುವವರಿಂದ ₹30 ಲಕ್ಷ ಪಡೆದಿದ್ದೆ. ಹೀಗಾಗಿ ಬಡ್ಡಿ ಸೇರಿ ₹43.50 ಲಕ್ಷ ಕೊಡಬೇಕು ಎಂದಿದ್ದರು. ಉಳಿದ ಮೂರು ಚೆಕ್‌ಗಳು ನನ್ನ ಕಚೇರಿಯಲ್ಲೇ ಇದ್ದವು. ಇನ್ನು ವರುಣ್ ಕುಮಾರ್ ತನ್ನ ಬಳಿ ಚೆಕ್ ಇಲ್ಲ ಎಂದು ಕೇವಲ ಒಪ್ಪಂದಕ್ಕೆ ಸಹಿ ಮಾಡಿದ್ದರು.
ಹಣ ವಾಪಾಸ್ ನೀಡದೆ ವಂಚನೆ: ಇದಾದ ಕೆಲ ದಿನಗಳ ಬಳಿಕ ಕನಕಗಿರಿ ಉತ್ಸವ ಸಂಬಂಧ ವೈಭವ್ ಕಂಪನಿಗೆ ₹1.72 ಲಕ್ಷ ಪಾವತಿಯಾಗಿತ್ತು. ತೆರಿಗೆ ಕಡಿತವಾಗಿ ₹1.65 ಕೋಟಿ ಆತನ ಖಾತೆಗೆ ಬಂದಿತ್ತು. ಈ ವೇಳೆ ₹1.40 ಕೋಟಿ ನೀಡಿದ್ದ ವೈಭವ್ ಉಳಿದ ₹25 ಲಕ್ಷ ಕೇಳಿದ್ದಕ್ಕೆ ಜಿಎಸ್‌ಟಿ ಪಾವತಿಸಬೇಕು ಎಂದು ಹಣ ವಾಪಾಸ್ ನೀಡಿದೆ ಮೋಸ ಮಾಡಿದ್ದಾರೆ. ಇದಾದ ಬಳಿಕ ವರುಣ್‌ಗೆ ₹1.86 ಕೋಟಿ ಬಿಲ್ ಪಾವತಿಯಾಗಿದ್ದು, ಅದರಲ್ಲಿ ತೆರಿಗೆ ಕಡಿತವಾಗಿ ₹1.56 ಕೋಟಿ ಖಾತೆಗೆ ಬಂದಿದೆ. ಒಪ್ಪಂದದ ಪ್ರಕಾರ ಶೇ.5ರಷ್ಟು ಕಮಿಷನ್ ಕಡಿತ ಮಾಡಿ ಉಳಿದ ₹1.48 ಕೋಟಿ ನನಗೆ ನೀಡಬೇಕಿತ್ತು. ಆದರೆ, ಈವರೆಗೂ ಬಾಕಿ ಹಣ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂವಿಧಾನ ಬದಲಾವಣೆ ಬಗ್ಗೆ ನಾನು ಹೇಳಿಕೆ ನೀಡಿಲ್ಲ: ಡಿ.ಕೆ.ಶಿವಕುಮಾರ್
ಹಣ ಕೇಳಿದ್ದಕ್ಕೆ ಬೆದರಿಕೆ: ಇನ್ನು ಶಶೀಧರ್ ಕಂಪನಿಗೆ ₹1.88 ಕೋಟಿ ಬಂದಿದ್ದು, ತೆರಿಗೆ ಕಡಿತವಾಗಿ ₹1.59 ಕೋಟಿ ಖಾತೆಗೆ ಪಾವತಿಯಾಗಿದೆ. ಆದರೆ, ಈವರೆಗೂ ಆತ ನನಗೆ ಹಣ ನೀಡದೆ ವಂಚಿಸಿದ್ದಾರೆ. ಈ ನಡುವೆ ಶಶಿಧರ್ ನನ್ನ ಕಚೇರಿ ಸಹಾಯಕ ವಿನೋದ್‌ಗೆ ಕರೆ ಮಾಡಿ. ವಿನಯ್‌ಗೆ ಹೇಳಿರುವುದಾಗಿ ಸುಳ್ಳು ಹೇಳಿ ನಮ್ಮ ವ್ಯವಹಾರ ಸಂಬಂಧ ಆಗಿದ್ದ ಎರಡು ಅಗ್ರಿಮೆಂಟ್ ಮತ್ತು ಮೂರು ಚೆಕ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಗೊತ್ತಾಗಿ ಶಶಿಧರ್‌ನನ್ನು ಪ್ರಶ್ನೆ ಮಾಡಿದಾಗ, ನಿನಗೆ ಯಾವುದೇ ಹಣ ಹಾಗೂ ಚೆಕ್ ನೀಡುವುದಿಲ್ಲ. ಏನು ಬೇಕಾದರೂ ಮಾಡಿಕೋ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ನನಗೆ ವಂಚಿಸಿರುವ ಈ ಐವರು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಯ್ ದೂರಿನಲ್ಲಿ ಮನವಿ ಮಾಡಿದ್ದಾರೆ.