ಮನೆ ಮಾರಾಟ ಮಾಡಲೊಪ್ಪದ ಕಾರಣಕ್ಕೆ ಎರಡನೇ ಪತ್ನಿಯನ್ನು ಹತ್ಯೆಗೈದು ಬಳಿಕ ಬೇರೆಯರು ಕೊಂದಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ ಪತಿ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.
ಬೆಂಗಳೂರು (ಆ.29): ಮನೆ ಮಾರಾಟ ಮಾಡಲೊಪ್ಪದ ಕಾರಣಕ್ಕೆ ಎರಡನೇ ಪತ್ನಿಯನ್ನು ಹತ್ಯೆಗೈದು ಬಳಿಕ ಬೇರೆಯರು ಕೊಂದಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ ಪತಿ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಹೊಸಹಳ್ಳಿ ಸಮೀಪದ ರಜಾಕ್ ಪಾಳ್ಯದ ನಿವಾಸಿ ಮುಮ್ತಾಜ್ (40) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಪತಿ ಮೆಹೂಬ್ ಪಾಷನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿಗೆ ಮನೆ ಸಮೀಪದ ಸೀಬೆ ತೋಟದಲ್ಲಿ ಹಣ್ಣು ಬಿಡಿಸುವ ನೆಪದಲ್ಲಿ ಕರೆದೊಯ್ದು ಪತ್ನಿ ಮುಮ್ತಾಜ್‌ಳನ್ನು ಹತ್ಯೆಗೈದು ಮೆಹಬೂಬ್ ನಾಟಕವಾಡಿದ್ದ.
ಈ ಕುರಿತು ತನಿಖೆಗಿಳಿದ ಇನ್ಸ್‌ಪೆಕ್ಟರ್ ಶಬರೀಷ್ ನೇತೃತ್ವದ ತಂಡ, ಶಂಕೆ ಮೇರೆಗೆ ಮೃತಳ ಪತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಂಧ್ರಪ್ರದೇಶದ ವಿಕೋಟಾ ಮೂಲದ ಮೆಹಬೂಬ್ ಪಾಷ, 20 ವರ್ಷಗಳ ಹಿಂದೆ ಮುಮ್ತಾಜ್ ಜತೆ ಎರಡನೇ ವಿವಾಹವಾಗಿದ್ದ. ಮದುವೆ ಬಳಿಕ ನಗರಕ್ಕೆ ಬಂದ ದಂಪತಿ, ಬಾಗಲೂರು ಸಮೀಪ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ವಿಕೋಟಾದಲ್ಲಿ ಆತನ ಮೊದಲ ಪತ್ನಿ ಹಾಗೂ ಮಕ್ಕಳು ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಮೊದಲ ಪತ್ನಿಯ ಮಗಳ ಮದುವೆ ಸಲುವಾಗಿ ಸಾಲ ಮಾಡಿ ಮೆಹಬೂಬ್ ಸಂಕಷ್ಟಕ್ಕೆ ಸಿಲುಕಿದ್ದ.
ಆಗ ರಜಾಕ್ ನಗರದಲ್ಲಿನ ಮನೆ ಮಾರಾಟ ಮಾಡುವಂತೆ ಎರಡನೇ ಪತ್ನಿ ಮುಮ್ತಾಜ್‌ಗೆ ದುಂಬಾಲು ಬಿದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ತನ್ನಿಬ್ಬರು ಮಕ್ಕಳಿಗೆ ಮನೆ ಬೇಕಿದೆ ಎಂದು ಹೇಳಿ ಮನೆ ಮಾರಲು ಆಕೆ ಸುತರಾಂ ಒಪ್ಪಿಲ್ಲ. ಇದೇ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿದೆ. ಕೊನೆಗೆ ಪತ್ನಿಯನ್ನು ಹತ್ಯೆಗೈಯಲು ನಿರ್ಧರಿಸಿದ ಮೆಹಬೂಬ್, ಆ.24 ರಂದು ಸಂಜೆ ತನ್ನ ಮಗಳಿಗೆ ಕರೆ ಮಾಡಿ ತಾನು ಹೊಸಕೋಟೆಗೆ ಬಂದಿದ್ದು, ರಾತ್ರಿ ನಿಮ್ಮಜ್ಜಿ (ಮುಮ್ತಾಜ್ ತವರು ಮನೆ) ಮನೆಗೆ ಹೋಗುವುದಾಗಿ ಹೇಳಿದ್ದ. ಅದೇ ದಿನ ರಾತ್ರಿ ಮನೆ ಸಮೀಪ ಕೂಲಿ ಕೆಲಸ ಮಾಡುತ್ತಿದ್ದ ಮುಮ್ತಾಜ್‌ಗಳನ್ನು ಸೀಬೆ ತೋಟಕ್ಕೆ ಕರೆದೊಯ್ದು ಹಣ್ಣು ಬಿಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಗುದ್ದಲಿಯಿಂದ ತಲೆಗೆ ಹೊಡೆದು ಕೊಂದಿದ್ದ.
Gadag: ಬುದ್ದಿ ಮಾತು ಹೇಳಿದ ತಾಯಿಯನ್ನೇ ಕೊಂದು ಹಾಕಿದ ಪಾಪಿ ಮಗ!
ಈ ಕೃತ್ಯ ಎಸಗಿದ ಬಳಿಕ ಅತ್ತೆ ಮನೆಗೆ ಹೋಗಿ ಮಗಳು ಬಂದಿಲ್ಲವೇ ಎಂದು ವಿಚಾರಿಸಿದ್ದ. ಮರುದಿನ ತೋಟದಲ್ಲಿ ಮುಮ್ತಾಜ್ ಮೃತದೇಹ ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅದೇ ಹೊತ್ತಿಗೆ ತನ್ನ ಪತ್ನಿಯನ್ನು ಯಾರೋ ಅಪರಿಚಿತರು ಕೊಲೆ ಮಾಡಿದ್ದಾರೆ ಎಂದು ಕಣ್ಣೀರಿಟ್ಟು ಮೆಹಬೂಬ್ ದೂರು ಕೊಟ್ಟಿದ್ದ. ದೂರಿನ ಅನ್ವಯ ತನಿಖೆಗಿಳಿದ ಪೊಲೀಸರು, ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಪತಿ ಮೇಲೆ ಶಂಕೆ ಮೂಡಿದೆ. ಈ ಗುಮಾನಿ ಮೇರೆಗೆ ಅಂತ್ಯಕ್ರಿಯೆ ಬಳಿಕ ಆತನನ್ನು ವಶಕ್ಕೆ ಪಡೆದು ತೀವ್ರವಾಗಿ ಪ್ರಶ್ನಿಸಿದಾಗ ಮೆಹಬೂಬ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.