ಬಿಟ್‌ಕಾಯಿನ್ ಹೂಡಿಕೆ ನಷ್ಟ: ಮಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ!

By Ravi JanekalFirst Published Nov 25, 2022, 8:23 AM IST
Highlights
  • ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಂದೆ.
  • ಸಾವಿಗೆ ಹೆದರಿ 10 ದಿನಗಳ ಕಾಲ ತಲೆಮಾರಿಸಿಕೊಂಡಿದ್ದ.
  • ಕೋಲಾರದಲ್ಲಿ ನಡೆದಿರುವ ಘಟನೆ
  • ಬಿಟ್‌ಕಾಯಿನ್ ಹೂಡಿಕೆ ಮಾಡೋ ಮುನ್ನ ಎಚ್ಚರ

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ನ.25) : ಸಾಲದ ಸುಳಿಗೆ ಸಿಲುಕಿ ಇಲ್ಲೊಬ್ಬ ತಂದೆ ಮಾಡಬಾರದ ಕೆಲಸ ಮಾಡಿದ್ದಾನೆ. ಇದ್ದೊಬ್ಬ ಮಗಳಿಗಾಗಿ ಕೇಳಿದೆಲ್ಲಾ ತಂದುಕೊಟ್ಟು ರಾಣಿಯಂತೆ ನೋಡಿಕೊಂಡಿದ್ದ. ಆದ್ರೆ ವಿಪರೀತ ಸಾಲದ ಜೊತೆ ಬಿಟ್ ಕಾಯಿನ್ ಮೇಲೆ ಹಾಕಿದ್ದ ಹೂಡಿಕೆಯ ನಷ್ಟದಿಂದಾಗಿ ತೀವ್ರ ನಷ್ಟ ಅನುಭವಿಸಿ, ತಪ್ಪಿಸಿಕೊಂಡು ತಿರುಗುತ್ತಿದ್ದ. ಈ ನಷ್ಟದಿಂದಾಗಿ ಖಿನ್ನತೆಗೊಳಗಾಗಿ ನಾನು ಬದುಕಿರಲೇ ಬಾರದು ಎಂದು ನಿರ್ಧರಿಸಿ ಮಗಳನ್ನೇ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

ಹೌದು ಇದೇ ತಿಂಗಳು ನವೆಂಬರ್ 16 ರಂದು ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬಳಿ ಇರುವ ಕೆರೆಯ ಬಳಿ ಒಂದು ಅಮಾನುಷ ಘಟನೆಗೆ ಸಾಕ್ಷಿಯಾಗಿತ್ತು. ಗುಜರಾತ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ತನ್ನ ಮೂರು ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಕೆರೆಯ ಪಕ್ಕದಲ್ಲೇ ಬಿಸಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಕೆರೆಯಲ್ಲಿ ಆತನ ಮೃತ ದೇಹ ಪತ್ತೆಗಾಗಿ ಇನ್ನಿಲ್ಲದ ಪ್ರಯತ್ನ ಮಾಡಿದ್ರು ಪ್ರಯೋಜನವಾಗಿರಲಿಲ್ಲ. ಕೊನೆಗೆ ಪೊಲೀಸರು ಕಾರ್ಯಾಚರಣೆ ನಿಲ್ಲಿಸಿದ್ರು.

Belagavi: ಪತಿ ಸಾವಿನಿಂದ ಮನನೊಂದು ಒಂದೂವರೆ ವರ್ಷದ ಮಗಳ ಹತ್ಯೆಗೈದು ಪತ್ನಿ ನೇಣಿಗೆ ಶರಣು

ಆದರೆ ಇದೀಗ ಪ್ರಕರಣದ ಅಸಲಿಯತ್ತು ಏನೂ ಅನ್ನೋದು ಬಯಲಾಗಿದ್ದು, ತನ್ನ ಮಗಳನ್ನು ತಾನೇ ಕೊಂದ ಕಥೆ ಕೇಳಿದರೆ ಎಂಥವರಿಗೂ ಕರುಳು ಕಿತ್ತುಬಂದಂತಾಗುತ್ತದೆ. 

ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗುಜರಾತ್ ಮೂಲದ ಸಾಪ್ಟ್‌ವೇರ್ ಇಂಜಿನಿಯರ್ ರಾಹುಲ್ ಎಂಬಾತ ಬೆಂಗಳೂರಿನ ಬಾಗಲೂರಿನಲ್ಲಿ ತಾನು ಪ್ರೀತಿಸಿ ಮದುವೆಯಾಗಿದ್ದ ಭವ್ಯ ಜೊತೆ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸವಿದ್ದ. ಕಳೆದ ಐದು ವರ್ಷಗಳ ದಾಂಪತ್ಯ ಜೀವನಕ್ಕೆ ಕಾಲಿಟ್ಟದ ರಾಹುಲ್ ಮತ್ತು ಭವ್ಯಾ ದಂಪತಿಗೆ ಮುದ್ದಾದ 3 ವರ್ಷದ ಜಿಯಾ ಅನ್ನೋ ಹೆಸರಿನ ಹೆಣ್ಣು ಮಗು ಇತ್ತು.

2016 ರಿಂದ ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡಿ ಸಾಕಷ್ಟು ನಷ್ಟ ಅನುಭವಿಸಿದ್ದ ರಾಹುಲ್ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಕಾರ್ಯ ಇಲ್ಲದೆ ಬೇಸತ್ತು ಮನೆಯಲ್ಲೇ ಕುಳಿತಿದ್ದ. ಆದ್ರೆ ಸಾಲಗಾರರ ಕಾಟ ತಾಳಲಾರದೆ ಸಾಯಲೇ ಬೇಕು ಅಂತ ನಿರ್ಧರಿಸಿ, ಇದೇ ನ.15 ರಂದು ಮಗಳನ್ನು ಶಾಲೆಗೆ ಬಿಡಲು ತನ್ನ ಕಾರಿನಲ್ಲಿ ಹೊರಟ್ಟಿದ್ದ,ಆದ್ರೆ ಕೆಲ ದಿನಗಳ ಹಿಂದೆಯಷ್ಟೇ ತನ್ನ ಪತ್ನಿಯ ಒಡವೆಯನ್ನು ಅಡವಿಟ್ಟು,ಇನ್ಯಾರೋ ಮನೆಗೆ ಬಂದು ಕಳುವು ಮಾಡಿದ್ದಾರೆ ಅಂತ ಪೊಲೀಸ್ ಠಾಣೆಯಲ್ಲಿ ರಾಹುಲ್ ಸುಳ್ಳು ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಬಂದು ಠಾಣೆಗೆ ಬರುವಂತೆ ಕರೆದಿದ್ದರು.ಇದರ ಜೊತೆಗೆ ತನ್ನ ಪತ್ನಿ ಕೇಳಿದ್ದನ್ನು ಕೊಡಿಸಿ ಸಂತೋಷವಾಗಿಡಬೇಕು ಎನ್ನುವ ಜವಾಬ್ದಾರಿ. ಇಂತಹ ಪರಿಸ್ಥಿತಿಯಲ್ಲಿ ಜೇಬಲ್ಲಿ ಒಂದು ನಯಾಪೈಸೆ ಇಲ್ಲದಿರುವಾಗ ಅಂದು ತನ್ನ ಮಗಳನ್ನು ಶಾಲೆಗೆ ಬಿಟ್ಟು ಬರುವುದಾಗಿ ಹೋದ ರಾಹುಲ್ ರಾತ್ರಿ ಆದರೂ ಸಹ ವಾಪಾಸ್ ಮನೆಗೆ ಬಂದಿಲ್ಲ. ಒಂದು ವೇಳೆ ಮನೆಗೆ ಹೋದರೂ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಭಾವಿಸಿ, ತನ್ನ ಮುದ್ದಿನ ಮಗಳೊಂದಿಗೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದ.

ಇನ್ನು ರಾಹುಲ್ ಸಾಯುವ ನಿರ್ಧಾರ ಮಾಡಿ ತನ್ನ ಮಗಳೊಂದಿಗೆ ನೇರವಾಗಿ ಕೋಲಾರ ತಾಲೂಕು ಕೆಂದಟ್ಟಿ ಗ್ರಾಮದ ಕೆರೆಯ ಬಳಿ ಸಂಜೆ ಬಂದು ನಿಂತಿದ್ದ.ತನ್ನ ಮಗಳನ್ನು ಸಾಯಿಸಿ ಆಕೆಯನ್ನು ಕೆರೆಗೆ ಬಿಸಾಡಿ ತಾನು ಸಹ ಕೆರೆಯಲ್ಲಿ ಮುಳುಗಿ ಸಾಯಲು ನಿರ್ಧರಿಸಿದ್ದ. ಮಗಳು ಬದುಕಿ ತಾನು ಸಾಯಬಾರದು ಎಂದು ಮೊದಲು ಮಗಳನ್ನು ಎದೆಗೆ ಬಿಗಿದಪ್ಪಿಕೊಂಡು ಉಸಿರುಗಟ್ಟಿಸಿ ಮೊದಲು ಸಾಯಿಸಿದ್ದಾನೆ. ನಂತರ ಮಗಳ ಜೊತೆ ನೀರಿಗೆ ಹಾರಿದ್ದಾನೆ. ಆದರೆ ನೀರು ಆಳವಿರಲಿಲ್ಲದ ಕಾರಣ ರಾಹುಲ್ ಸಾಯಲು ಸಾಧ್ಯವಾಗಿಲ್ಲ.

ಇನ್ನು ಸಾವಿಗೆ ಹೆದರಿ ರಾಹುಲ್ ತನ್ನ ಮಗಳು ಜಿಯಾಳ ಮೃತದೇಹವನ್ನು ಕೆರೆಯ ಪಕ್ಕದಲ್ಲೇ ಬಿಟ್ಟು,ಕಾರು, ಮೊಬೈಲ್, ಪರ್ಸ್, ಎಲ್ಲವನ್ನೂ ಬಿಟ್ಟು, ಅಪರಿಚಿತ ವ್ಯಕ್ತಿಯೊಬ್ಬರ ಸಹಾಯದಿಂದ ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಡ್ರಾಪ್ ತೆಗೆದುಕೊಂಡು, ರೈಲಿನ ಮೂಲಕ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ದೆಹಲಿ, ಹೀಗೆ ರೈಲಿನಲ್ಲಿ 4-5 ರಾಜ್ಯಗಳನ್ನು ಸುತ್ತಾಡಿದ್ದಾನೆ. ರೈಲಿನಲ್ಲಿ ಪ್ರಯಾಣ ಮಾಡುವ ವೇಳೆಯೂ ರೈಲಿನಿಂದ ಹಾರಿ ಸಾಯಲು ಸಹ ಯತ್ನಿಸಿದ್ದಾನೆ. ಆದರೂ ಆತನಿಗೆ ಸಾಯಲು ಧೈರ್ಯ ಸಾಕಾಗಿಲ್ಲ. ಈ ವೇಳೆ ತನ್ನ ಹೆಂಡತಿ ಹಾಗೂ ಮನೆಯವರಿಗೆ ಫೋನ್ ಮಾಡಿ ಕಿಡ್ನ್ಯಾಪ್ ಕಥೆ ಕಟ್ಟಿದ್ದಾನೆ. ಆಗ ಇವನಿಗಾಗಿ ಹುಡುಕಾಟ ನಡೆಸಿದ ಪೊಲೀಸರು ರಾಹುಲ್ ಆಂಧ್ರ ಪ್ರದೇಶದಿಂದ ರೈಲಿನಲ್ಲಿ ಬೆಂಗಳೂರಿನತ್ತ ಹೊರಟಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಪೊಲೀಸರು ಬಂಧಿಸಿ, ಕರೆತಂದು ವಿಚಾರಣೆ ಮಾಡಿದಾಗ ಅಸಲಿ ವಿಷಯ ತಿಳಿದು ಬಂದಿದೆ.

ಪತ್ನಿ ಕೊಂದು, ಮಗಳನ್ನು ಕೊಲ್ಲಲು ಯತ್ನಿಸಿದ ಅಪ್ಪ, ಸತ್ತಂತೆ ನಟಿಸಿದ ಪುತ್ರಿ!

ಅದೇನೇ ಇರಲಿ ಸಾಲ ಮಾಡುವ ಮುನ್ನ ರಾಹುಲ್ ಯೋಚನೆ ಮಾಡಬೇಕಿತ್ತು. ತಾನು ಮಾಡಿದ್ದ ತಪ್ಪಿನಿಂದ ಏನೂ ಅರಿಯದ ಮುಗ್ದ ಮನಸ್ಸಿನ ಮಗಳನ್ನೇ ಕೊಂದಿದ್ದು ಮಾತ್ರ ಅನ್ಯಾಯ. ಆ ಮಗು ಮಾಡಿದ ತಪ್ಪೇನು? ಮಗಳನ್ನು ಕೊಂದು ತಾನು ಬದುಕಿರುವ ರಾಹುಲ್ ಒಂದು ವೇಳೆ ಮಾಡಿರುವ ಸಾಲ ತೀರಿಸಿದ್ರೂ ಸಹ ಜೀವನ ಪರ್ಯಾಂತ ಮಗಳನ್ನು ಕೊಂದಿರೋದಕ್ಕೆ ಪಶ್ಚತ್ತಾಪ ಪಡೋದ್ರಲ್ಲಿ ಅನುಮಾನವಿಲ್ಲ.

click me!