ಮೈಸೂರು ಬಳಿ ಭೀಕರ ರಸ್ತೆ ಅಪಘಾತ ಪ್ರಕರಣ: 9 ಜನರ ಸಾಮೂಹಿಕ ಅಂತ್ಯಸಂಸ್ಕಾರ!

By Kannadaprabha NewsFirst Published May 30, 2023, 11:01 PM IST
Highlights

ಮೈಸೂರು ಬಳಿ ಸೋಮವಾರ ಜರುಗಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಸಂಗನಕಲ್ಲು ಗ್ರಾಮದ 9 ಜನರ ಅಂತ್ಯಸಂಸ್ಕಾರ ಗ್ರಾಮದ ಹೊರ ವಲಯದ ವೀರಶೈವ ರುದ್ರಭೂಮಿಯಲ್ಲಿ ಮಂಗಳವಾರ ಜರುಗಿತು.

ಬಳ್ಳಾರಿ (ಮೇ.30) : ಮೈಸೂರು ಬಳಿ ಸೋಮವಾರ ಜರುಗಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಸಂಗನಕಲ್ಲು ಗ್ರಾಮದ 9 ಜನರ ಅಂತ್ಯಸಂಸ್ಕಾರ ಗ್ರಾಮದ ಹೊರ ವಲಯದ ವೀರಶೈವ ರುದ್ರಭೂಮಿಯಲ್ಲಿ ಮಂಗಳವಾರ ಜರುಗಿತು.

ನಾಲ್ಕು ಆ್ಯಂಬುಲೆನ್ಸ್‌ಗಳಲ್ಲಿ ಮೈಸೂರಿನಿಂದ ಮೃತದೇಹಗಳನ್ನು ಗ್ರಾಮಕ್ಕೆ ಪೊಲೀಸ್‌ ಭದ್ರತೆಯ ಮೂಲಕ ತರಲಾಯಿತು. ಅಪಘಾತದ ಸುದ್ದಿ ಕೇಳಿದ ಬಳಿಕ ದಿಗ್ಭಾ$›ಂತರಾಗಿದ್ದ ಗ್ರಾಮಸ್ಥರು ಮೃತದೇಹಗಳು ಗ್ರಾಮಕ್ಕೆ ಬರುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು. ಮೃತದೇಹಗಳನ್ನು ನೋಡುತ್ತಿದ್ದಂತೆಯೇ ಕುಟುಂಬ ಸದಸ್ಯರ ದುಃಖದ ಕಟ್ಟೆಒಡೆಯಿತು. ಒಬ್ಬರನ್ನೊಬ್ಬರು ತಬ್ಬಿಕೊಂಡು ಗೋಳಿಟ್ಟಮೃತರ ಸಂಬಂಧಿಕರು, ವಿಕೃತ ವಿಧಿಯಾಟಕ್ಕೆ ಹಿಡಿಶಾಪ ಹಾಕಿದರು.ಪ್ರವಾಸಕ್ಕೆಂದು ತೆರಳಿ ಶವವಾಗಿ ಮರಳಿದ ಮಗ, ಸೊಸೆ, ಮೊಮ್ಮಕ್ಕಳ ಸ್ಥಿತಿ ಕಂಡು ಮಂಜುನಾಥ ಅವರ ತಾಯಿ ಲಕ್ಷ್ಮಮ್ಮ ಅವರ ರೋಧನೆ ಮುಗಿಲು ಮುಟ್ಟಿತ್ತು. ಸಾವಿನ ಸುದ್ದಿ ಕೇಳಿದ ಬಳಿಕ ನಿರಂತರವಾಗಿ ರೋಧಿಸುತ್ತಿದ್ದ ಲಕ್ಷ್ಮಮ್ಮ ಹಾಗೂ ಮೃತ ಮಂಜುನಾಥನ ಸಹೋದರ ಸುರೇಶ್‌ ಅವರು ಅತ್ತು ಅತ್ತು ಕಣ್ಣೀರು ಬತ್ತಿ ಹೋಗಿದ್ದವು. ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಗ್ರಾಮಸ್ಥರ ಕಣ್ಣಾಲಿಗೆಗಳು ತುಂಬಿ ಬಂದವು. ಅಪಘಾತದಲ್ಲಿ ಮೂರು ಮಕ್ಕಳು ಸಹ ಮೃತಪಟ್ಟಿದ್ದು, ಮಕ್ಕಳ ಶವಗಳನ್ನು ಕಂಡ ಜನರು ಕಂಬನಿ ಮಿಡಿದರು.

Mysuru Road Accident: ಅಪಘಾತದಲ್ಲಿ ಬಲಿಯಾದವರ ಸಾಮೂಹಿಕ ಅಂತ್ಯ ಸಂಸ್ಕಾರ, ಇವರನ್ನ ಬಿಟ್ಟು ನಾ ಹ್ಯಾಂಗ ಬದುಕಲಿ

ಮೃತರ ಅಂತಿಮ ದರ್ಶನಕ್ಕಾಗಿ ಅವಕಾಶ ಮಾಡಿಕೊಡಲಾಗಿತ್ತು. ಮೃತರ ಮನೆಯ ಮುಂದೆಯೇ ಗ್ರಾಮಸ್ಥರು ಅಗತ್ಯ ವ್ಯವಸ್ಥೆ ಮಾಡಿದ್ದರು. ಸಂಗನಕಲ್ಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಆಗಮಿಸಿ, ಮೃತರ ದರ್ಶನ ಪಡೆದರು. ಬಳಿಕ ಆ್ಯಂಬುಲೆನ್ಸ್‌ಗಳಲ್ಲಿ ಮೃತದೇಹಗಳನ್ನು ವೀರಶೈವ ರುದ್ರಭೂಮಿಗೆ ತರಲಾಯಿತು. ಶಿವಶರಣ ಸೇವಾ ಟ್ರಸ್‌್ವ ಮತ್ತು ಸಂಗನಕಲ್ಲು ಗ್ರಾಮಸ್ಥರಿಂದ ಜೆಸಿಬಿ ಮೂಲಕ ಒಂಬತ್ತು ಗುಂಡಿಗಳನ್ನು ಅಗೆದು ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿದ್ದರು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಒಂದರ ಪಕ್ಕ ಮತ್ತೊಂದರಂತೆ ತೆಗೆದಿದ್ದ 9 ಗುಂಡಿಗಳಲ್ಲಿ ಒಂದೊಂದಾಗಿ ಶವಗಳನ್ನಿಟ್ಟು ಅಂತಿ ವಿಧಿವಿಧಾನಗಳನ್ನು ನಡೆಸಲಾಯಿತು. ಘಟನೆಯಿಂದ ಇಡೀ ಗ್ರಾಮದಲ್ಲಿ ಮೌನ ಆವರಿಸಿತ್ತು.

ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಸಂಸದೆ ಜೆ. ಶಾಂತಾ, ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಅಪರ ಜಿಲ್ಲಾಧಿಕಾರಿ ಮಹ್ಮದ್‌ ಜುಬೇರ, ಉಪವಿಭಾಗಾಧಿಕಾರಿ ಹೇಮಂತ್‌ಕುಮಾರ್‌, ಡಿಎಚ್‌ಒ ಡಾ. ಎಚ್‌.ಎಲ್‌. ಜನಾರ್ದನ, ಸಚಿವ ಬಿ. ನಾಗೇಂದ್ರ ಸಹೋದರ ವೆಂಕಟೇಶ್‌ ಪ್ರಸಾದ್‌, ಕಾಂಗ್ರೆಸ್‌ ಮುಖಂಡ ವೆಂಕಟೇಶ್‌ ಹೆಗಡೆ ಸೇರಿದಂತೆ ಗ್ರಾಮದ ಮುಖಂಡರು ಅಂತ್ಯಸಂಸ್ಕಾರ ಸಂದರ್ಭದಲ್ಲಿ ಇದ್ದರು.

ಸಂಗನಕಲ್ಲು ಗ್ರಾಮದ 12 ಜನರು ಪ್ರವಾಸಕ್ಕೆಂದು ಮೈಸೂರು, ಕೊಳ್ಳೆಗಾಲದ ಕಡೆ ತೆರಳಿದ್ದರು. ಮೈಸೂರು ಜಿಲ್ಲೆಯ ಟಿ. ನರಸೀಪುರದಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ(716) ಕುರುಬೂರು ಗ್ರಾಮದ ಬಳಿ ಸೋಮವಾರ ಖಾಸಗಿ ಬಸ್‌ ಹಾಗೂ ಇನೋವಾ ಕಾರು ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಸಂಗನಕಲ್ಲು ಗ್ರಾಮದ 9 ಜನರು ಸಾವಿಗೀಡಾಗಿದ್ದರು. ಈ ಪೈಕಿ ಒಂದೇ ಕುಟುಂಬದ ನಾಲ್ವರು, ಮತ್ತೊಂದು ಕುಟುಂಬದ ಮೂವರು ಹಾಗೂ ಇನ್ನೊಂದು ಕುಟುಂಬದ ಇಬ್ಬರು ಸಾವಿಗೀಡಾಗಿದ್ದರು. ಇನ್ನು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಓರ್ವರ ಸ್ಥಿತಿ ಗಂಭೀರವಾಗಿದೆ.

Mysuru Road Accident: ಟಿ.ನರಸೀಪುರದಲ್ಲಿ ಭೀಕರ ರಸ್ತೆ ಅಪಘಾತ, ಬಳ್ಳಾರಿಯ 10 ಮಂ

ಇನ್ನೆರಡು ದಿನಗಳಲ್ಲಿ ಪರಿಹಾರ: ಡಿಸಿ

ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಹತ್ತಿರದ ಕುಟುಂಬ ಸದಸ್ಯರಿಗೆ ಇನ್ನು ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ತಿಳಿಸಿದರು. ಮೃತರ ಸಂಬಂಧಿಕರ ಬ್ಯಾಂಕ್‌ ಖಾತೆಗಳ ವಿವರ ಸಂಗ್ರಹಿಸಿ ಮುಖ್ಯಮಂತ್ರಿಗಳ ಕಚೇರಿಗೆ ಕಳಿಸಿಕೊಡಲಾಗಿದೆ. ಒಂದೆರಡು ದಿನದಲ್ಲಿ ಪರಿಹಾರ ಬರಲಿದೆ ಎಂದರು. ಮೈಸೂರಿನ ಕೆಆರ್‌ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜತೆ ಸಂಪರ್ಕದಲ್ಲಿರುವೆ. ಚಿಕಿತ್ಸೆಯಲ್ಲಿರುವ ಇಬ್ಬರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಓರ್ವರ ಸ್ಥಿತಿ ಗಂಭೀರವಾಗಿದೆ ಎಂದು ಡಿಎಚ್‌ಒ ಜನಾರ್ದನ ತಿಳಿಸಿದರು.

ರಾಜ್ಯ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಮೃತ ಕುಟುಂಬಕ್ಕೆ ಪರಿಹಾರವಾಗಿ .5 ಲಕ್ಷ ನೀಡಬೇಕು. ಕುಟುಂಬ ಸದಸ್ಯರಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಬೇಕು.

ಬಿ. ಶ್ರೀರಾಮುಲು, ಮಾಜಿ ಸಚಿವ

click me!