ರಸ್ತೆ ಡಿವೈಡರ್ ದಾಟುವಾಗ ಲೈಟ್ ಕಂಬದ ವಿದ್ಯುತ್ ಸ್ಪರ್ಶಿಸಿ 33 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಸಾವನ್ನಪ್ಪಿದ್ದಾರೆ.
ಚೆನ್ನೈ (ಅ. 27): ರಸ್ತೆ ಡಿವೈಡರ್ ದಾಟುವಾಗ ಲೈಟ್ ಕಂಬದ ವಿದ್ಯುತ್ ಸ್ಪರ್ಶಿಸಿ 33 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಸಾವನ್ನಪ್ಪಿರುವ ಘಟನೆ ಚೆನ್ನೈನ ಪಲ್ಲಿಕರನೈನಲ್ಲಿ ನಡೆದಿದೆ. ಲೈಟ್ ಕಂಬಕ್ಕೆ ಅಳವಡಿಸಲಾಗಿದ್ದ ತಂತಿಗಳು ಸರಿಯಾಗಿ ಜೋಡಣೆಯಾಗಿರದ ಕಾರಣ ಟೆಕ್ಕಿಗೆ ವಿದ್ಯುತ್ ಸ್ಪರ್ಶಿಸಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಮನಾಥಪುರಂ ಜಿಲ್ಲೆಯ ಎಸ್ ಇಳವರಸನ್ ಮೃತ ದುರ್ದೈವಿ. ಇಳವರಸನ್ ಪಲ್ಲಿಕರನೈನಲ್ಲಿ ತಮ್ಮ ಸ್ನೇಹಿತರೊಂದಿಗೆ ವಾಸವಿದ್ದರು. ಸ್ನೇಹಿತರೊಂದಿಗೆ ವೆಬ್‌ಸೈಟ್‌ವೊಂದಕ್ಕೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ಇಳವರಸನ್ ಮತ್ತು ಅವರ ಸ್ನೇಹಿತರು ಊಟಕ್ಕೆ ಕಾರಿನಲ್ಲಿ ತೆರಳಿದ್ದರು. ನಾಲ್ವರು ಬಸ್ ನಿಲ್ದಾಣದ ಬಳಿ ಕಾರು ನಿಲ್ಲಿಸಿ ಇನ್ನೊಂದು ಬದಿಯಲ್ಲಿರುವ ರೆಸ್ಟೋರೆಂಟ್‌ಗೆ ಹೋಗಲು ರಸ್ತೆ ದಾಟಲು ಮುಂದಾಗಿದ್ದರು. ನಾಲ್ವರಲ್ಲಿ ಇಬ್ಬರು ರಸ್ತೆ ದಾಟಿ ರೆಸ್ಟೋರೆಂಟ್ ತಲುಪಿದ್ದರು. ಆದರೆ ಇಳವರಸನ್ ಮತ್ತು ಇನ್ನೊಬ್ಬ ಸ್ನೇಹಿತ ವಾಹನಗಳು ಹಾದುಹೋಗಲು ಕಾಯುತ್ತಿದ್ದರು. ಇಳವರಸನ್ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ರಸ್ತೆಯ ಡಿವೈಡರ್‌ನಲ್ಲಿದ್ದ ಲೈಟ್ ಕಂಬದ ವಿದ್ಯುತ್ ಶಾಕ್ ತಗುಲಿ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಇಳವರಸನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ನೇಹಿರು ಸಾಗಿಸಿದರು. ಆದರೆ ಅದಾಗಲೆ ಇಳವರಸನ್ ಪ್ರಾಣಪಕ್ಷಿ ಹಾರಿಹೋಗಿತ್ತು. ಸದ್ಯ ಮಡಿಪಾಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ಪ್ರಾಥಮಿಕ ತನಿಖೆಯ ನಂತರ, ದೀಪಸ್ತಂಭಕ್ಕೆ ಅಂಡರ್‌ಗ್ರೌಂಡ್ ತಂತಿ ಸರಿಯಾಗಿ ಜೋಡಣೆಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಾಹುಲ್ ಯಾತ್ರೆ ವೇಳೆ ವಿದ್ಯುತ್ ತಗುಲಿ ನಾಲ್ವರಿಗೆ ಗಾಯ: ಆಸ್ಪತ್ರೆಗೆ ದಾಖಲು
ಘಟನೆಯ ಕುರಿತು ನಗರ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಾಲಿಕೆ ಆಯುಕ್ತರು ವಿದ್ಯುತ್ ಇಲಾಖೆಯಿಂದ ವರದಿ ಕೇಳಿದ್ದಾರೆ. ನಾವು ಘಟನೆಯ ಕಾರಣವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ವರದಿಗಾಗಿ ಕಾಯುತ್ತಿದ್ದೇವೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.