* ಸಾಮಾಜಿಕ ಜಾಲತಾಣಗಳ ಮೂಲಕ ಐಸಿಸ್ ಉಗ್ರ ಸಂಘಟನೆಯ ಸಂಪರ್ಕ
* ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ಮಾದೇಶ
* ರಾಜ್ಯದ ಯಾವುದೇ ಸ್ಥಳದಲ್ಲಾದರೂ ವಿಧ್ವಂಸಕ ಕೃತ್ಯ ಎಸಗಲು ಅವಕಾಶ ಕೊಡಿ ಅಂತ ಕೇಳಿದ್ದ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಆ.08): ‘ದೇಶದಲ್ಲಿ ಇಸ್ಲಾಂ ಧರ್ಮಕ್ಕೆ ಭಾರಿ ತೊಂದರೆಯಾಗುತ್ತಿದೆ. ನೀವು (ಐಸಿಸ್ ಸಂಘಟನೆ ಸದಸ್ಯರು) ಬದ್ಮಾಶ್‌ಗಳು ಏನೂ ಮಾಡುತ್ತಿಲ್ಲ. ನನಗೆ ಅವಕಾಶ ಕೊಡಿ. ನಾನು ಕೆಲಸ (ವಿಧ್ವಂಸಕ ಕೃತ್ಯ) ಮಾಡಲು ಸಿದ್ಧನಾಗಿದ್ದೇನೆ’..!
undefined
ಇದು ಕರುನಾಡಿನಲ್ಲಿ ಐಸಿಸ್ ಸಂಘಟನೆ ನೇಮಕಾತಿ ಜಾಲದಲ್ಲಿ ಸಿಲುಕಿದ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಬಲೆಗೆ ಬುಧವಾರ ಬಿದ್ದ ಶಂಕಿತ ಉಗ್ರ 22 ವರ್ಷದ ಮಾದೇಶ ತನ್ನ ಐಸಿಸ್ ಸಹವರ್ತಿಗಳ ಮುಂದಿಟ್ಟ ಬೇಡಿಕೆ.
ಸಾಮಾಜಿಕ ಜಾಲತಾಣಗಳಲ್ಲಿ ಜಿಹಾದಿ ಬೋಧನೆಯಿಂದ ಪ್ರಭಾವಿತನಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಆತ, ಜಿಹಾದ್‌ಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧನಾಗಿದ್ದ. ಅದರಲ್ಲೂ ಬೆಂಗಳೂರು ಸೇರಿ ರಾಜ್ಯದ ಯಾವುದೇ ಸ್ಥಳದಲ್ಲಾದರೂ ಮಾದೇಶ ವಿಧ್ವಂಸಕ ಕೃತ್ಯವನ್ನು ಎಸಗಲು ಅಣಿಯಾಗಿದ್ದ ಎಂಬ ಆತಂಕಕಾರಿ ಸಂಗತಿಯನ್ನು ವಿಶ್ವಸನೀಯ ಉನ್ನತ ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ಹಂಚಿಕೊಂಡಿವೆ.
ಉಗ್ರ ನಂಟು; NIAಯಿಂದ ಭಟ್ಕಳದಲ್ಲಿ ಮೂವರು ವಶಕ್ಕೆ
ಐಸಿಸ್‌ನ ಭಾರತ ವಿಭಾಗದ ಸಂಘಟನೆಯಾದ ‘ಇಸ್ಲಾಮಿಕ್ ಸ್ಟೇಟ್ಸ್ ಖೋರಸನ್ ಪ್ರೊವೆನ್ಸ್’ (ಐಎಸ್‌ಕೆಪಿ)ನ ಚಟುವಟಿಕೆಗಳು ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಗೌಪ್ಯವಾಗಿ ನಡೆದಿರುವ ಮಾಹಿತಿ ಸಿಕ್ಕಿತು. ಅಂತೆಯೇ ಇದೇ ವರ್ಷದ ಮಾಚ್‌ರ್ ತಿಂಗಳಲ್ಲಿ ಕೇರಳ ಮೂಲದ ಮಹಮ್ಮದ್‌ನನ್ನು ಎನ್‌ಐಎ ಬಂಧಿಸಿತ್ತು. ಆಗ ಐಸಿಸ್‌ನ ನೇಮಕಾತಿ ಜಾಲದಲ್ಲಿ ಬೆಂಗಳೂರಿನ ಯುವಕನೊಬ್ಬ ಸಕ್ರಿಯವಾಗಿರುವ ಬಗ್ಗೆ ಸುಳಿವು ಇತ್ತು. ಈ ಮಾಹಿತಿ ಬೆನ್ನತ್ತಿದ್ದಾಗ ಮಾದೇಶ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂರು ವರ್ಷದ ಹಿಂದೆ ಮತಾಂತರ:
ಮಾದೇಶನ ಕುಟುಂಬದವರು ಮೂಲತಃ ತಮಿಳುನಾಡಿನವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನ ಮಹದೇವಪುರ ವ್ಯಾಪ್ತಿಯಲ್ಲಿ ನೆಲೆಸಿದ್ದಾರೆ. ಮಾದೇಶನ ತಂದೆ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಯ ಮೂವರು ಮಕ್ಕಳ ಪೈಕಿ ಮಾದೇಶ ಹಿರಿಯವನಾಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೊದಲ ಪತ್ನಿಯಿಂದ ಪರಿತ್ಯಕ್ತಗೊಂಡ ಅವರು, ಕ್ರೈಸ್ತ ಧರ್ಮೀಯಳ ಜತೆ ಎರಡನೇ ವಿವಾಹವಾಗಿದ್ದಾರೆ. ಧಾರ್ಮಿಕತೆ ಬಗ್ಗೆ ಮಾದೇಶನ ತಂದೆಗೆ ನಂಬಿಕೆ ಇಲ್ಲ. ಹಾಗೆ ಮಾದೇಶನ ಚಟುವಟಿಕೆಗಳ ಬಗ್ಗೆ ಆತನ ತಂದೆ ಸೇರಿ ಕುಟುಂಬದವರಿಗೆ ತಿಳಿದಿಲ್ಲ. ಕುಟುಂಬದಲ್ಲಿ ಸಾಮರಸ್ಯ ಇಲ್ಲದ ಕಾರಣ ಮಕ್ಕಳ ಜತೆ ತಂದೆಗೆ ಅನ್ಯೋನ್ಯತೆ ಇರಲಿಲ್ಲ ಎನ್ನಲಾಗಿದೆ.
ದ್ವಿತೀಯ ಪಿಯುಸಿಗೆ ಓದು ಮೊಟುಕುಗೊಳಿಸಿದ ಮಾದೇಶ, ಬಳಿಕ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಆತ, ತಂದೆಯಿಂದ ಖರ್ಚಿಗೆ ಹಣ ಪಡೆದುಕೊಳ್ಳುತ್ತಿದ್ದ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಆತನಿಗೆ ಐಸಿಸ್ ಸಂಘಟನೆ ಸದಸ್ಯರ ಪರಿಚಯವಾಗಿದೆ. ಹುಂಬುತನ ಅಷ್ಟೇ ವಿಕ್ಷಿಪ್ತ ಮನಸ್ಸಿನವನಾಗಿದ್ದ ಮಾದೇಶನಿಗೆ ಐಸಿಸ್ ನೇಮಕಾತಿ ದಳದಿಂದ ಜಿಹಾದಿ ಬೋಧನೆ ಶುರುವಾಗಿದೆ. ಐದಾರು ತಿಂಗಳ ನಿರಂತರ ಜಿಹಾದಿ ಪಾಠದಿಂದ ಪ್ರಭಾವಿತನಾದ ಆತ, ತನ್ನ 19ನೇ ವರ್ಷಕ್ಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ಅಲ್ಲಿಂದ ಗೌಪ್ಯವಾಗಿ ಐಸಿಸ್ ಚಟುವಟಿಕೆಯಲ್ಲಿ ತೊಡಗಿದ್ದ. ಆದರೆ ಮನೆಯಿಂದ ಹೊರಗೆ ಮಸೀದಿಗಳಿಗೆ ಹೋಗಿ ಪ್ರಾರ್ಥನೆ ಸೇರಿದಂತೆ ಧಾರ್ಮಿಕ ಆಚರಣೆಗಳಲ್ಲಿ ಆತನಿಗೆ ಕಾಣಿಸಿಕೊಳ್ಳದಂತೆ ಸಂಘಟನೆ ಸೂಚನೆ ಇತ್ತು ಅನಿಸುತ್ತದೆ. ಹಾಗಾಗಿ ಈ ಮೂರು ವರ್ಷಗಳ ಕಾಲ ಯಾವತ್ತೂ ಬಹಿರಂಗವಾಗಿ ಇಸ್ಲಾಂ ಧಾರ್ಮಿಕ ಆಚರಣೆ ಮಾಡಿಲ್ಲ. ಅಲ್ಲದೆ ಹೆಸರು ಸಹ ಬದಲಾಯಿಸಿರಲಿಲ್ಲ. ಪ್ರತಿ ದಿನ ಓರ್ವ ಮುಸ್ಲಿಂ ವ್ಯಕ್ತಿಯಂತೆ ನಮಾಜ್ ಅನ್ನು ತಪ್ಪದೆ ಆತ ತನ್ನ ಕೊಠಡಿಯಲ್ಲೇ ಮಾಡುತ್ತಿದ್ದ. ಮಾದೇಶ ಮತಾಂತರಗೊಂಡಿದ್ದ ಸಂಗತಿ ಆತನ ತಂದೆ, ಸೋದರಿ ಹಾಗೂ ಸೋದರನಿಗೆ ಗೊತ್ತಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.
ಮಂಗಳೂರಿನಲ್ಲಿ ಮಾಜಿ ಶಾಸಕರ ಮನೆ ಮೇಲೆ NIA ದಾಳಿ : ISIS ನಂಟು - ಓರ್ವ ಅರೆಸ್ಟ್
ವಿಧ್ವಂಸಕ ಕೃತ್ಯಕ್ಕೆ ಅಣಿಯಾದ ಮಾದೇಶ:
ಜಿಹಾದಿ ಬೋಧನೆ ಪರಿಣಾಮ ಮಾದೇಶ್ ಕಟ್ಟರ್ ಮೂಲಭೂತವಾದಿಯಾಗಿ ರೂಪಾಂತರಗೊಂಡಿದ್ದ. ಭಾರತದಲ್ಲಿ ಇಸ್ಲಾಂ ಧರ್ಮಕ್ಕೆ ಅನ್ಯಾಯವಾಗುತ್ತಿದೆ. ನೀವೆಲ್ಲ ಏನೂ ಮಾಡುತ್ತಿಲ್ಲ ಎಂದು ತನ್ನ ಐಸಿಸ್ ಸಂಗಾತಿಗಳ ಜತೆ ಸಾಮಾಜಿಕ ಜಾಲತಾಣಗಳಲ್ಲಿ ಚಾಟಿಂಗ್‌ನಲ್ಲಿ ಆತ ಕಿಡಿಕಾರುತ್ತಿದ್ದ. ನನಗೆ ಅವಕಾಶ ಕೊಡಿ. ನಾನು ಮಾಡಿ ತೋರಿಸುತ್ತೇನೆ ಎಂದೂ ಸಹ ಆತ ಹೇಳುತ್ತಿದ್ದ. ಕಳೆದ ಜುಲೈ ತಿಂಗಳ ಮೊದಲ ವಾರದಿಂದಲೇ ಮಾದೇಶನನ್ನು ನೆರಳಿನಂತೆ ಹಿಂಬಾಲಿಸಲಾಗಿತ್ತು. ಅಷ್ಟರಲ್ಲಿ ಮಂಗಳೂರು, ಕೇರಳ ಹಾಗೂ ಕಾಶ್ಮೀರದಲ್ಲಿ ಐಸಿಸ್ ಸಂಪರ್ಕದ ಕೊಂಡಿಗಳು ಸಿಕ್ಕಿತು. ಈ ಮಾಹಿತಿ ಆಧರಿಸಿ ಎನ್‌ಐಎ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.
ಶಂಕಿತ ಉಗ್ರನ ಬದಲು ತಂದೆ ಹೆಸರು ಬಹಿರಂಗ ಪಡಿಸಿದ್ದ ಅಧಿಕಾರಿಗಳು!
ಬೆಂಗಳೂರಿನಲ್ಲಿ ಬಂಧಿತನಾದ ಐಸಿಸ್ ಶಂಕಿತ ಉಗ್ರನ ಹೆಸರು ಎನ್‌ಐಎ ಅಧಿಕಾರಿಗಳ ಎಡವಟ್ಟಿನಿಂದ ತಪ್ಪಾಗಿ ಬಿಂಬಿತವಾಗಿದೆ. ಆತನ ಹೆಸರು ಮಾದೇಶ. ಆದರೆ ತಪ್ಪಾಗಿ ಶಂಕಿತ ಉಗ್ರನ ತಂದೆ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದರು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಾದೇಶ ಜತೆ ಏಳು ಮಂದಿ ನಿಕಟ ಸಂಪರ್ಕ:
ಸಾಮಾಜಿಕ ಜಾಲತಾಣಗಳ ಮೂಲಕ ಶಂಕಿತ ಉಗ್ರ ಮಾದೇಶ ಜತೆ ಏಳು ಮಂದಿ ನಿಕಟವಾಗಿ ಸಂಪರ್ಕದಲ್ಲಿದ್ದರು. ಇವರ ಪೈಕಿ ಮಾಜಿ ಶಾಸಕ ದಿ.ಇದಿನಬ್ಬ ಅವರ ಮೊಮ್ಮಗ ಸಹ ಒಬ್ಬಾತ. ಇನ್ನುಳಿದವರ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಐಸಿಸ್ ಉಗ್ರರ ನಂಟು ಶಂಕೆ: ಮಾಜಿ ಶಾಸಕನ ಮೊಮ್ಮಗ ಸೇರಿ 4 ಮಂದಿ ಅರೆಸ್ಟ್!
ತನ್ನ ಐಸಿಸ್ ಸಂಗಾತಿಗಳ ಜತೆ ಸಂವಹನಕ್ಕೆ ಎಂಟಕ್ಕೂ ಹೆಚ್ಚಿನ ಸಿಮ್‌ಗಳನ್ನು ಮಾದೇಶ ಬಳಸಿದ್ದ. ಆದರೆ ಈ ಸಿಮ್‌ಗಳಿಂದ ಒಂದೇ ಒಂದು ಕರೆ ಕೂಡ ಮಾಡಿಲ್ಲ. ಕೇವಲ ಟೆಲಿಗ್ರಾಮ್, ಯೂಟ್ಯೂಬ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಸೇರಿದಂತೆ ಕೆಲವು ಆ್ಯಪ್‌ಗಳನ್ನು ಉಪಯೋಗಿಸಿದ್ದ ಎಂದು ಮೂಲಗಳು ಹೇಳಿವೆ.
ವಿದೇಶಕ್ಕೆ ಹೋಗಲು ತಂದೆ ಬಳಿ ಹಣ ಕೇಳಿದ್ದ:
ಐಸಿಸ್ ಸಂಘಟನೆಯಲ್ಲಿ ನೇರವಾಗಿ ಕೆಲಸ ಮಾಡಲು ಉತ್ಸುಕನಾಗಿದ್ದ ಆತ, ಇದಕ್ಕಾಗಿ ಐಸಿಸ್ ಕೇಂದ್ರ ಸ್ಥಾನ ಸಿರಿಯಾಗೆ ತೆರಳಲು ಯತ್ನಿಸಿದ್ದ. ತನ್ನ ತಂದೆಗೆ ವಿದೇಶಕ್ಕೆ ಹೋಗಬೇಕು ಹಣ ಕೊಡಿ ಎಂದು ಆತ ಪೀಡಿಸುತ್ತಿದ್ದ. ಮೂರ್ನಾಲ್ಕು ತಿಂಗಳಿಂದ ಆತನ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ.