Mangaluru: ಅಯ್ಯಪ್ಪ ಮಾಲಾಧಾರಿಗೆ ವಿದ್ಯಾರ್ಥಿಗಳಿಂದ ಹಲ್ಲೆ: ಮಾಲೆ ಧರಿಸಿ ಶಾಲೆಗೆ ಬರದಂತೆ ಸೂಚಿಸಿದ್ರಂತೆ ಶಿಕ್ಷಕರು!

By Govindaraj SFirst Published Dec 21, 2022, 1:43 PM IST
Highlights

ಅಯ್ಯಪ್ಪ ಮಲಾಧಾರಿ ವಿದ್ಯಾರ್ಥಿಯೊಬ್ಬನಿಗೆ ಅನ್ಯಕೋಮಿನ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿರುವ ಗಂಭೀರ ಆರೋಪ ಮಾಡಲಾಗಿದ್ದು, ಇದೀಗ ಹಲ್ಲೆ ಪ್ರಕರಣದ ಬೆನ್ನಲ್ಲೇ ಖಾಸಗಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗೆ ಮಾಲೆ ಧರಿಸಿ ಶಾಲೆಗೆ ಬರದಂತೆ ತಡೆದಿದ್ದಾರೆ.

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ಡಿ.21): ಅಯ್ಯಪ್ಪ ಮಲಾಧಾರಿ ವಿದ್ಯಾರ್ಥಿಯೊಬ್ಬನಿಗೆ ಅನ್ಯಕೋಮಿನ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿರುವ ಗಂಭೀರ ಆರೋಪ ಮಾಡಲಾಗಿದ್ದು, ಇದೀಗ ಹಲ್ಲೆ ಪ್ರಕರಣದ ಬೆನ್ನಲ್ಲೇ ಖಾಸಗಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗೆ ಮಾಲೆ ಧರಿಸಿ ಶಾಲೆಗೆ ಬರದಂತೆ ತಡೆದಿದ್ದಾರೆ ಎಂದು ವಿದ್ಯಾರ್ಥಿ ಮತ್ತು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅಯ್ಯಪ್ಪ ವೃತಧಾರಿ ವಿದ್ಯಾರ್ಥಿಗೆ ನಾಲ್ವರು ಅನ್ಯಕೋಮಿನ ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ ಮಾಡಲಾಗಿದೆ. 

ಮಂಗಳೂರು ನಗರದ ಕಪಿತಾನಿಯೋ ಶಾಲೆಯ ವಿದ್ಯಾರ್ಥಿಗೆ ಹಲ್ಲೆ ಆರೋಪ ವ್ಯಕ್ತವಾಗಿದ್ದು, ಅದೇ ಶಾಲೆಯ ನಾಲ್ವರು ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಈ ಹಿಂದೆ ಹಲವು ಬಾರಿ ಗಲಾಟೆ ನಡೆದಿತ್ತು. ಗಲಾಟೆ ನಡೆಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೆ ಮತ್ತೆ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ಆರೋಪ ವ್ಯಕ್ತವಾಗಿದೆ. ಗಾಯಾಳು ವಿದ್ಯಾರ್ಥಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಅಪ್ರಾಪ್ತ ಬಾಲಕಿ ಜತೆ ಅಸಭ್ಯ ವರ್ತನೆ, ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಮಾಲೆ ಹಾಕಿ ಶಾಲೆಗೆ ಯಾಕೆ ಬರ್ತೀರಾ ಅಂದರಂತೆ ಸಿಸ್ಟರ್!: ಅಯ್ಯಪ್ಪ ವೃತಧಾರಿ ವಿದ್ಯಾರ್ಥಿಗೆ ಅನ್ಯ ಕೋಮಿನ ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ ಸಂಬಂಧಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹಲ್ಲೆಗೊಳಗಾದ ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ. ತರಗತಿಯ ಮಂಜುನಾಥ್ ಎಂಬ ವಿದ್ಯಾರ್ಥಿಗೆ ಹೊಡೆದ ಬಗ್ಗೆ ಶಿಕ್ಷಕರಿಗೆ ದೂರು ಕೊಡಲಾಗಿತ್ತು. ಈ ವೇಳೆ ನಮಗೆ ಕಾಲು ಅಡ್ಡ ಇಟ್ಟು ಹೊಡೆಯಲು ಬಂದಿದ್ದರು. ಮಾಲೆ ಹಾಕಿದ ಮೇಲೆ ‌ಮತ್ತು ನಂತರ ಹಲ್ಲೆಗೆ ಮುಂದಾಗಿದ್ದಾರೆ. ಶಿಕ್ಷಕರ ಮುಂದೆಯೇ ಎದೆಗೆ ಹೊಡೆದು, ಅವರ ಎದುರಲ್ಲೇ ಹಲ್ಲೆ ಮಾಡಿದ್ದಾರೆ. ಆ ಬಳಿಕ ಸಿಸ್ಟರ್ ಕರೆದು ಮಾಲೆ ಹಾಕಿ ಶಾಲೆಗೆ ಬರಬೇಡಿ ಅಂದರು. 

ಮಾಲೆ ಹಾಕಿ ಶಾಲೆಗೆ ಯಾಕೆ ಬರ್ತೀರಾ ಅಂತ ನಮಗೆ ಸಿಸ್ಟರ್ ಕೇಳಿದ್ರು. ಹಲ್ಲೆ ಮಾಡಿದವರನ್ನ ಶಾಲೆಗೆ ಬನ್ನಿ, ನಮಗೆ ಬರಬೇಡಿ ಅಂತಿದಾರೆ.‌ ಶಾಲೆಯ ಹೊರಗೂ ಬೈದು ನಮ್ಮ ಮೇಲೆ ಹಲ್ಲೆ ‌ಮಾಡಿದ್ದಾರೆ.‌ ಜನ ಸೇರಿದಾಗ ಅವರು ಬಸ್ಸು ಹತ್ತಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ‌. ಎದೆಗೆ ಹೊಡೆದು ಮಾಲೆ ಕಟ್ ಮಾಡಿ ಡ್ರೆಸ್ ಗೆ ಹಾನಿ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಲಾಗಿದೆ, ನೆಲದಲ್ಲಿ ಹಾಕಿ ಒದ್ದಿದ್ದಾರೆ. ನಾನು ಎಂಟನೇ ತರಗತಿ ವಿದ್ಯಾರ್ಥಿ, ಅವರು ಒಂಭತ್ತನೇ ತರಗತಿ ವಿದ್ಯಾರ್ಥಿ. ರಿಯಾಜ್, ನಫೀಸ್ ಮತ್ತು ಹತ್ತು ಹದಿನೈದು ಜನ ಒಡೆದಿದ್ದಾರೆ ಎಂದು ದೂರಿದ್ದಾನೆ. ಇನ್ನು ಘಟನೆ ಬಗ್ಗೆ ಅಯ್ಯಪ್ಪ ವೃತಧಾರಿ ವಿದ್ಯಾರ್ಥಿ ತಂದೆ ಹೇಳಿಕೆ ನೀಡಿದ್ದು, ನಿನ್ನೆ ಸಂಜೆ ನಾಲ್ಕು ಗಂಟೆಗೆ ನನ್ನ ಮಗನಿಗೆ ಇಲ್ಲಿ ಹೊಡೆದಿದ್ದಾರೆ. 

ವಸಂತ ಬಂಗೇರಾ ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಲಿ: ಸಿದ್ದರಾಮಯ್ಯ

ಎದೆಯ ಭಾಗ ಊದಿಕೊಂಡು ಗಂಭೀರ ಹಲ್ಲೆಯಾಗಿತ್ತು. ಶಬರಿ ಮಲೆ ಅಯ್ಯಪ್ಪ ಮಾಲೆ ಹಾಕಿದ ಕಾರಣಕ್ಕೆ ಹೊಡೆದಿದ್ದಾರೆ. ಅವರು ಶಿಕ್ಷಕರ ಬಳಿ‌ ಅನುಮತಿ ಪಡೆದೇ ಮಾಲೆ ಹಾಕಿದ್ದು. ಆದರೆ ಈಗ ಶಿಕ್ಷಕರು ಮಾಲೆ ಯಾಕೆ ಹಾಕಿದ್ದೀರಾ ಅಂತ ಕೇಳ್ತಾ ಇದ್ದಾರೆ.‌ ಮಾಲೆ ಹಾಕಿದವರು ಶಾಲೆಗೆ ಬರಬೇಡಿ ಅಂತಿದಾರೆ. ಈ ಶಾಲೆಯಲ್ಲಿ ಹಿಂದೂಗಳನ್ನ ಬಹಳ ಕೀಳಾಗಿ ನೋಡ್ತಾ ಇದಾರೆ‌. ಇವರಿಗೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ‌ಮಕ್ಕಳು ಮಾತ್ರ ಬೇಕಿದೆ. ಇವರಿಗೆ ಹಿಂದೂಗಳು ಬೇಡ, ನಾವು ಹಣ ಇಲ್ಲ ಅಂತ ನಿರ್ಲಕ್ಷ್ಯ. ಮಗನಿಗೆ ಹೊಡೆದಾಗ ಎಲ್ಲಾ ಶಿಕ್ಷಕರು ನಿಂತು ನೋಡಿದಾರೆ. ಶಾಲೆಗೆ ಕರೆ ಮಾಡಿದಾಗ ನಮಗೆ ಪುರುಸೋತ್ತಿಲ್ಲ ಅಂತಾರೆ. ನಾವು ಕಂಕನಾಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ‌. ಶಾಲಾ ಸಮಿತಿ ಎರಡು ದಿನಗಳಲ್ಲಿ ತೀರ್ಮಾನ ಮಾಡ್ತೇವೆ ಅಂದಿದ್ದಾರೆ‌. ಆ ಹೊಡೆದ ಮಕ್ಕಳನ್ನು ಡಿಬಾರ್ ಮಾಡಬೇಕು, ನಮಗೆ ನ್ಯಾಯ ಕೊಡಬೇಕು ಎಂದಿದ್ದಾರೆ.

ನಾವು ಮಕ್ಕಳನ್ನ ಅಮಾನತು ಮಾಡಲ್ಲ: ಅಯ್ಯಪ್ಪ ವೃತಧಾರಿ ವಿದ್ಯಾರ್ಥಿಗೆ ಅನ್ಯ ಕೋಮಿನ ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ ವಿಚಾರ ಸಂಬಂಧಿಸಿ ಕಪಿತಾನಿಯಾ ಶಾಲೆಯ ಹಿಂದಿ ಶಿಕ್ಷಕ ಫೆಲಿಕ್ಸ್ ಡಿಸೋಜಾ ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆಗಿದೆ. ಆಗ ಮುಖ್ಯೋಪಾಧ್ಯಾಯರು ಎರಡೂ ಕಡೆಯ ಮಕ್ಕಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಆ ಬಳಿಕ ಹೊರಗೆ ಹೋಗಿ ಮತ್ತೆ ಗಲಾಟೆ ಮಾಡಿದ್ದಾರೆ. ನಮಗೆ ಗಲಾಟೆಗೆ ನೈಜ ಕಾರಣ ಗೊತ್ತಿಲ್ಲ, ಪೊಲೀಸರು ತನಿಖೆ ಮಾಡ್ತಾ ಇದಾರೆ. ಶಾಲೆಯಲ್ಲಿ ಇಂಥ ಸಣ್ಣಪುಟ್ಟ ಸಮಸ್ಯೆ ಆಗ್ತಾನೆ ಇರುತ್ತೆ. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದವರಿಗೆ ಅವಮಾನ ಆಗಿದೆ ಅಂತಾರೆ. ಆದರೆ ನಮಗೆ ಗೊತ್ತಿದ್ದ ಹಾಗೆ ಅಂಥಹ ಯಾವುದೇ ಮಾಹಿತಿ ಇಲ್ಲ. ನಾವು ಇಲ್ಲಿ ಎಲ್ಲಾ ಧರ್ಮದವರನ್ನ ಒಂದೇ ರೀತಿಯಾಗಿ ನೋಡ್ತೇವೆ.‌ ನಿನ್ನೆ ‌ಗಲಾಟೆ ಆದಾಗಲೂ ಎರಡೂ ಕಡೆಯ ಪೋಷಕರಿಗೆ ಹೇಳಿದ್ದೇವೆ.‌ ಮತ್ತೆ ಎರಡೂ ಕಡೆಯವರನ್ನ ಕರೆದು ಮಾತನಾಡ್ತೇವೆ. ನಾವು ಅಯ್ಯಪ್ಪ ‌ಮಾಲೆ ಹಾಕಲು ಕೂಡ ಅನುಮತಿ ಕೊಟ್ಟಿದ್ದೇವೆ‌. ನಾವು ಯಾವುದೇ ಮಕ್ಕಳನ್ನು ಶಾಲೆಯಿಂದ ಅಮಾನತು ಮಾಡಲ್ಲ ಎಂದಿದ್ದಾರೆ.

click me!