
ಗದಗ (ಡಿ.21) : ನರಗುಂದ ತಾಲೂಕಿನ ಹದಲಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಓರ್ವ ವಿದ್ಯಾರ್ಥಿಯನ್ನು ಕೊಲೆಗೈದು, ಶಿಕ್ಷಕಿ ಮತ್ತು ಶಿಕ್ಷಕನ ಮೇಲೆ ಹಲ್ಲೆ ಮಾಡಿ ಕ್ರೌರ್ಯ ಮೆರೆದು ಪರಾರಿಯಾಗಿದ್ದ ಆರೋಪಿ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಮಂಗಳವಾರ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಶಿವಪ್ರಕಾಶ ದೇವರಾಜು, ನಮ್ಮ ವಿಶೇಷ ತಂಡ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ (35) ಬಂಧಿಸಿದ್ದು, ಈ ಘಟನೆಗೆ ಅನೈತಿಕ ಸಂಬಂಧವೇ ಕಾರಣ ಎನ್ನುವುದು ಆರೋಪಿಯ ಹೇಳಿಕೆಯಿಂದ ತಿಳಿದು ಬಂದಿದೆ ಎಂದರು.
Gadag Crime: ಶಾಲೆಯಲ್ಲಿಯೇ 4ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಅತಿಥಿ ಶಿಕ್ಷಕ
ಆರೋಪಿ ಮುತ್ತಪ್ಪ ಹಡಗಲಿ ಮತ್ತು ಅತಿಥಿ ಶಿಕ್ಷಕಿ ಗೀತಾ ಬಾರಕೇರ ಮಧ್ಯೆ ಮೊದಲಿನಿಂದಲೂ ಸಲುಗೆ ಇತ್ತು. 4-5 ತಿಂಗಳುಗಳಿಂದ ಪರಸ್ಪರ ಪೋನ್ ಕಾಲ್, ಚಾಟ್ ಕೂಡಾ ಮಾಡಿದ್ದಾರೆ. ಈಚೆಗೆ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಗೀತಾ ಬಾರಕೇರ ಅದೇ ಶಾಲೆಯ ಶಿಕ್ಷಕ ಸಂಗನಗೌಡ ಜೊತೆ ಸಲುಗೆಯಿಂದ ವರ್ತಿಸಿದ್ದಕ್ಕೆ ಮುತ್ತಪ್ಪ ಆಕ್ಷೇಪಿಸಿದ್ದ. ಆ ಆಕ್ರೋಶವೇ ಇಂಥದೊಂದು ದುರಂತಕ್ಕೆ ಕಾರಣವಾಗಿದೆ ಎನಿಸುತ್ತಿದೆ ಎಂದು ಎಸ್ಪಿ ಸಂಶಯ ವ್ಯಕ್ತಪಡಿಸಿದರು.
ಆರೋಪಿ ಮುತ್ತಪ್ಪ ಡಿ. 19 ರಂದು ಶಾಲೆಗೆ ಹೋಗಿ ಮೊದಲ ಮಹಡಿಯಲ್ಲಿನ 4ನೇ ತರಗತಿ ಓದುತ್ತಿದ್ದ ಗೀತಾ ಬಾರಕೇರ ಪುತ್ರ ಭರತ್ ಮೇಲೆ ಹಲ್ಲೆ ನಡೆಸಿದ್ದಾನೆ. ಪಿಲ್ಲರ್‌ಗೆ ಭರತನನ್ನು ದೂಡಿದ್ದರಿಂದ ತಲೆಗೆ ಗಾಯವಾಗಿದೆ. ಆದಾದ ನಂತರ ಕೆಳಗೆ ದೂಡಿದ್ದೇನೆ ಎಂದು ಆತ ಹೇಳಿಕೆ ನೀಡಿದ್ದಾನೆ. ಕಟ್ಟಡದ ಮೇಲಿಂದ ಬಂದು ಗೀತಾ ಬಾರಕೇರ ಮೇಲೆ ಕಬ್ಬಿಣ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಇದನ್ನು ತಡೆಯಲು ಬಂದ ಶಾಲೆಯ ಶಿಕ್ಷಕ ಸಂಗನಗೌಡ ಮೇಲೆಯೂ ಹಲ್ಲೆ ಮಾಡಿದ್ದ. ಘಟನೆಯಲ್ಲಿ ಗೀತಾ ಬಾರಕೇರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಅತಿಥಿ ಶಿಕ್ಷಕನ ಅಮಾನವೀಯ ದಾಳಿ, ಕಿಮ್ಸ್‌ನಲ್ಲಿರುವ ಗಾಯಾಳು ಅತಿಥಿ ಶಿಕ್ಷಕಿಯ ಆರೋಗ್ಯ ವಿಚಾರಿಸಿದ ಶಿಕ್ಷಣ ಸಚಿವ
ನರಗುಂದ ಶಾಸಕ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಮಂಗಳವಾರ ಕಿಮ್ಸ…ಗೆ ಭೇಟಿ ನೀಡಿ ಗೀತಾ ಬಾರಕೇರ ಆರೋಗ್ಯ ವಿಚಾರಿಸಿದ್ದಾರೆ. ರೈತ ಸಂಘಟನೆ, ಮಹಿಳಾ ಸಂಘಟನೆ ಸದಸ್ಯರು ಘಟನೆಯಲ್ಲಿ ಗಾಯಗೊಂಡ ಗೀತಾ ಬಾರಕೇರ ಅವರ ಚಿಕಿತ್ಸೆ ವೆಚ್ಚ ಹಾಗೂ ಪರಿಹಾರ ಕೊಡಬೇಕು ಎಂದು ವಿವಿಧ ಘಟನೆಗಳು ಆಗ್ರಹಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ