ಡೆಸ್ಕ್‌ ವಿಚಾರವಾಗಿ ಜಗಳ: ಸಹಪಾಠಿಗೆ ಚೂರಿಯಿಂದ ಇರಿದ ವಿದ್ಯಾರ್ಥಿ

By Kannadaprabha NewsFirst Published Jan 15, 2020, 8:31 AM IST
Highlights

ವಿಚಾರವಾಗಿ ಸಹಪಾಠಿಗೆ ಚಾಕುವಿನಿಂದ ಇರಿತ| ಗಾಯಗೊಂಡ ವಿದ್ಯಾರ್ಥಿ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ದಾಖಲು| ಬೆಳಗಾವಿ ಜಿಲ್ಲೆಯ ಹುಕ್ಕೇರಿ ಖಾಸಗಿ ಶಾಲೆಯಲ್ಲಿ ನಡೆದ ಘಟನೆ| ಬಾಲಕನ ಕೈ, ಬೆನ್ನು, ಹೊಟ್ಟೆ ಭಾಗದಲ್ಲಿ ಗಾಯ|

ಹುಕ್ಕೇರಿ(ಜ.15): ಕುಳಿತುಕೊಳ್ಳುವ ಡೆಸ್ಕ್‌ ವಿಚಾರಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿ ತನ್ನ ಸಹಪಾಠಿಗೆ ಚೂರಿ ಇರಿದ ಪರಿಣಾಮ, ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಖಾಸಗಿ ಪ್ರೌಢ ಶಾಲೆಯಲ್ಲಿ ಸೋಮವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಕೋರ್ಟ್‌ ಸರ್ಕಲ್‌ ಬಳಿ ಇರುವ ಖಾಸಗಿ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಡೆಸ್ಕ್‌ ವಿಚಾರವಾಗಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಚಿಕ್ಕೋಡಿ ರಸ್ತೆಯ ಉಮೇಶ ನಗರದ ಈ ವಿದ್ಯಾರ್ಥಿಗಳ ನಡುವೆ ಡೆಸ್ಕ್‌ಗೆ ಸಂಬಂಧಿಸಿದಂತೆ ಕ್ಲಾಸ್‌ನಲ್ಲಿ ಜಗಳವಾಗಿತ್ತು. ಈ ಜಗಳ ಶಾಲೆಯಲ್ಲಿ ಅಂತ್ಯವಾಗದೇ ಮನೆಗೆ ತೆರಳಿದ ನಂತರ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಈ ವೇಳೆ ಓರ್ವ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಪರಸ್ಪರ ಕಲ್ಲುಗಳಿಂದ ಬಡಿದಾಡಿಕೊಂಡಿದ್ದಾರೆ. ಆನಂತರ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಬಾಲಕನ ಕೈ, ಬೆನ್ನು, ಹೊಟ್ಟೆ ಭಾಗದಲ್ಲಿ ಗಾಯಗಳಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ಮಹಾರಾಷ್ಟ್ರದ ಗಡಹಿಂಗ್ಲಜ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಾಲಕರಿಂದ ಚಾಕುವಿನಿಂದ ಹೊಡೆದಾಟ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಘಟನೆ ಹುಕ್ಕೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ, ಮಂಗಳವಾರ ಸಂಜೆಯವರೆಗೂ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.
 

click me!