
ಮುಂಬೈ: ವಾಣಿಜ್ಯ ನಗರಿ ಮುಂಬೈನ ಕೊಲಾಬಾದಲ್ಲಿ 4 ವರ್ಷದ ಮಗಳನ್ನು ಕೊಂದು ಸಮುದ್ರಕ್ಕೆ ಎಸೆದಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿಯಿಂದಲೇ ನಾಲ್ಕು ವರ್ಷದ ಮಗು ಕಾಣೆಯಾಗಿತ್ತು. ಮಂಗಳವಾರ ಬೆಳಗ್ಗೆ ಸಮುದ್ರದ ದಡದಲ್ಲಿ ಪತ್ತೆಯಾಗಿದೆ. ಮಂಗಳವಾರ ಬೆಳಗ್ಗೆ ಶವ ನೋಡಿದ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಸಾರ್ವಜನಿಕ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಮಗುವಿನ ಕೊಲೆ ಮಾಡಿ ನಂತರ ಸಮುದ್ರಕ್ಕೆ ಎಸೆದಿರೋದು ಪ್ರಾಥಮಿಕ ತನಿಖೆಯಲ್ಲಿಯೇ ಗೊತ್ತಾಗಿದೆ. ಸಮುದ್ರದಲ್ಲಿ ಹೆಚ್ಚು ಎತ್ತರದ ಅಲೆಗಳು ಉಂಟಾಗಿದ್ದರಿಂದ ಶವ ದಡಕ್ಕೆ ಬಂದಿದೆ.
ಮೃತ ಬಾಲಕಿ ಕೊಲಬಾದ ಅಂಟೋಪ್ ಹಿಲ್ ನಿವಾಸಿಯಾಗಿದ್ದಳು. ಈಕೆಯ ಮಲತಂದೆ ಸೋಮವಾರ ರಾತ್ರಿ 12.45ಕ್ಕೆ ಮಗಳು ಕಾಣಿಸುತ್ತಿಲ್ಲ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಪೊಲೀಸರು ದೂರಿನ ಅನ್ವಯ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದರು.
ದೂರು ದಾಖಲಿಸಿ ಪರಾರಿಯಾದ ಇಮ್ರಾನ್ ಶೇಖ್
ಪೊಲೀಸರಿಗೆ ತನಿಖೆ ಆರಂಭಿಸಿದ ಸ್ವಲ್ಪ ಸಮಯದಲ್ಲಿಯೇ ದೂರು ದಾಖಲಿಸಿದ ವ್ಯಕ್ತಿ ಬಾಲಕಿಗೆ ಮಲತಂದೆ ಎಂಬ ವಿಷಯ ಗೊತ್ತಾಗಿತ್ತು. ತನಿಖೆ ಆರಂಭದಿಂದಲೇ ಮಲತಂದೆ ಮೇಲೆಯೇ ಅನುಮಾನ ಮೂಡಿತ್ತು. ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆಗೆ ಮುಂದಾಗುತ್ತಿದ್ದಂತೆ ದೂರು ದಾಖಲಿಸಿದ್ದ ಮಲತಂದೆ ಇಮ್ರಾನ್ ಶೇಖ್ ಪರಾರಿಯಾಗಿದ್ದನು.
ಸಿಸಿಟಿವಿ ಪರಿಶೀಲನೆ ನಡೆಸಿದಾಗ ಮಗು ಕೊನೆಯ ಬಾರಿಗೆ ಮಲತಂದೆ ಇಮ್ರಾನ್ ಶೇಖ್ ಜೊತೆಯಲ್ಲಿ ಕಾಣಿಸಿಕೊಂಡಿದ್ದಳು. ಮಗುವಿನ ಕತ್ತು ಹಿಸುಕಿ ಕೊಂದ ಇಮ್ರಾನ್ ಶೇಖ್, ಶವವನ್ನು ಉಪಾಯವಾಗಿ ಯಾರಿಗೂ ತಿಳಿಯದಂತೆ ಸಮುದ್ರದಲ್ಲಿ ಎಸೆದಿದ್ದನು. ನಂತರ ತನ್ನ ಮೇಲೆ ಅನುಮಾನ ಬರದಿರಲಿ ಎಂದು ಠಾಣೆಗೆ ತೆರಳು ಮಗಳು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದನು. ಇದೀಗ ವರ್ಲಿಯಲ್ಲಿ ಅಡಗಿದ್ದ ಇಮ್ರಾನ್ ಶೇಖ್‌ನನ್ನು ಬಂಧಿಸಿದ್ದಾರೆ.
ಅಪ್ಪಾ ಎಂದು ಕರೆದಿದ್ದಕ್ಕೆ ಕೋಪ
ಸದ್ಯದ ವರದಿಗಳ ಪ್ರಕಾರ, ಮಗು ಇಮ್ರಾನ್ ಶೇಖ್‌ನನ್ನು ಅಪ್ಪಾ ಎಂದು ಕರೆಯುತ್ತಿತ್ತು ಮತ್ತು ಆತನೊಂದಿಗೆ ಆಟವಾಡಲು ಪ್ರಯತ್ನಿಸುತ್ತಿತ್ತು. ಇಡೀ ದಿನ ತಾಯಿಯೊಂದಿಗೆ ಸಮಯ ಕಳೆಯುತ್ತಿತ್ತು. ಇದು ಇಮ್ರಾನ್ ಶೇಖ್ ಕೋಪಕ್ಕೆ ಕಾರಣವಾಗಿತ್ತು. ಇಮ್ರಾನ್ ಶೇಖ್ ಮಗುವಿಗೆ ಮಲತಂದೆ ಆಗಿದ್ದರಿಂದ ಅದು ಅಪ್ಪಾ ಎಂದು ಕರೆದಾಗ ಆತನಿಗೆ ಕೋಪ ಬರುತ್ತಿತ್ತು. ಅಪ್ಪಾ ಎಂದು ಕರೆದಿದ್ದಕ್ಕೆ ಮಗುವಿನ ಉಸಿರನ್ನೇ ನಿಲ್ಲಿಸಿದ್ದಾನೆ.
ಎರಡನೇ ಮದುವೆಯಾಗಿ ಮಗಳನ್ನ ಕಳೆದುಕೊಂಡ ತಾಯಿ
ಮಗುವಿನ ತಾಯಿ ಇಮ್ರಾನ್ ಶೇಖ್ ಜೊತೆ ಎರಡನೇ ಮದುವೆಯಾಗಿದ್ದರು. ಇದೀಗ ಅಂಟೋಪ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ಮುಂದೆ ಆರೋಪಿ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಗಳ ಆತ್ಮಹತ್ಯೆಯ ನೋವು ಸಹಿಸದೇ ಅಮ್ಮ ಕೂಡ ನೇಣಿಗೆ ಶರಣು, ಒಂದೇ ದಿನ ಮನೆಯಲ್ಲಿ ಎರಡು ಶವ ಕಂಡ ಗಂಡ ಶಾಕ್!
ವಿಷ ಸೇವಿಸಿ ರೈತ ಆತ್ಮಹ*ತ್ಯೆ!
ಸಾಲಬಾಧೆಯಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಿರುಗಾವಲು ಹೋಬಳಿಯ ದೇವಿಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಜರುಗಿದೆ. ಗ್ರಾಮದ ರೈತ ಚಿಕ್ಕಣ್ಣ (65) ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ತರಕಾರಿ ಮತ್ತು ಕಬ್ಬು ಬೆಳೆ ಬೆಳೆಯುತ್ತಿದ್ದ ರೈತ ಚಿಕ್ಕಣ್ಣ ಬೆಳೆಗಳಿಗೆ ಸರಿಯಾದ ಬೆಲೆ ಸಿಗದ ಹಿನ್ನೆಲೆಯಲ್ಲಿ ನೊಂದಿದ್ದರು.
ಸಹಕಾರ ಸಂಘ, ಕೆನರಾ ಬ್ಯಾಂಕ್ ಹಾಗೂ ಕೈಸಾಲ ಸೇರಿದಂತೆ ವಿವಿಧೆಡೆ ಸುಮಾರು 6 ಲಕ್ಷ ರು. ಸಾಲ ಮಾಡಿದ್ದ ಅವರು ಸಾಲ ತೀರಿಸಲಾಗದೇ ಮಂಗಳವಾರ ರಾತ್ರಿ ಮೇಕೆಗಳನ್ನು ಕಟ್ಟಿ ಹಾಕುವ ಕೊಟ್ಟಿಗೆಯಲ್ಲಿ ವಿಷ ಸೇವಿಸಿದ್ದರು. ಸ್ಪಲ್ಪ ಸಮಯದ ನಂತರ ಗಮನಿಸಿದ ಸಂಬಂಧಿಕರು ಕೂಡಲೇ ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ