ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡಿದವನಿಗೆ ಸಿಕ್ಕಿದ್ದು ಬರೀ 3000..!

Kannadaprabha News   | Asianet News
Published : Sep 22, 2021, 07:49 AM IST
ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡಿದವನಿಗೆ ಸಿಕ್ಕಿದ್ದು ಬರೀ 3000..!

ಸಾರಾಂಶ

*  ಕೇವಲ 3 ಸಾವಿರಕ್ಕೆ ಪಾಕ್‌ಗೆ ರಹಸ್ಯ ಮಾಹಿತಿ  *  ಬೆಂಗಳೂರಲ್ಲಿ ಸಿಕ್ಕಿಬಿದ್ದ ಪಾಕ್‌ ಗೂಢಚಾರಿ ಕರಾಚಿಯಿಂದ ಹಣ *  ಆನ್‌ಲೈನ್‌ ಮೂಲಕ ಜಿನೇಂದ್ರ ಖಾತೆಗೆ ಹಣ ಜಮೆ  

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಸೆ.22):  ಭಾರತೀಯ ಸೇನಾ ನೆಲೆಗಳ ಕುರಿತು ಫೋಟೋ ಸಹಿತ ಮಾಹಿತಿ ನೀಡಿದ್ದ ರಾಜಸ್ಥಾನ ಮೂಲದ ತನ್ನ ‘ಗೂಢಚಾರಿ’ ಜಿನೇಂದ್ರ ಸಿಂಗ್‌ನಿಗೆ ಪಾಕಿಸ್ತಾನದ ಇಂಟರ್‌ ಸರ್ವೀಸಸ್‌ ಇಂಟೆಲಿಜೆನ್ಸಿ (ಐಎಸ್‌ಐ) ನೀಡಿದ್ದು ಕೇವಲ ಮೂರು ಸಾವಿರ ರು. ಮಾತ್ರ ಎಂಬ ಕುತೂಹಲಕಾರಿ ಸಂಗತಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತನಿಖೆಯಲ್ಲಿ ಬಯಲಾಗಿದೆ.

ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ ಪ್ರಕರಣದ ಆರೋಪಿ ಜಿನೇಂದ್ರ ಸಿಂಗ್‌ನ ಖಾತೆಗೆ ಆನ್‌ಲೈನ್‌ ಮೂಲಕ ಮೂರು ಸಾವಿರ ರು. ಸಂದಾಯವಾಗಿದೆ. ಈ ಹಣ ವರ್ಗಾವಣೆ ಬಗ್ಗೆ ಪರಿಶೀಲಿಸಿದಾಗ ಆ ಮೊತ್ತವು ಪಾಕಿಸ್ತಾನದ ಕರಾಚಿ ವ್ಯಕ್ತಿಯಿಂದ ಜಮೆಯಾಗಿರುವುದು ಗೊತ್ತಾಗಿದೆ ಎಂದು ವಿಶ್ವಸನೀಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ತನ್ನ ಹನಿಟ್ರ್ಯಾಪ್‌ ಬಲೆಗೆ ಬಿದ್ದ ಜಿನೇಂದ್ರ ಸಿಂಗ್‌ನನ್ನು ಭಾರತೀಯ ಸೇನಾಧಿಕಾರಿಯೆಂದೇ ಆರಂಭದಲ್ಲಿ ಐಎಸ್‌ಐ ಭಾವಿಸಿದೆ. ಹೀಗಾಗಿ ಆತನಿಂದ ಭಾರಿ ಮಾಹಿತಿ ಸಿಗುವ ನಿರೀಕ್ಷೆ ಹೊಂದಿದ್ದ ಐಎಸ್‌ಐ ಏಜೆಂಟ್‌ಗಳು, ಜಿನೇಂದ್ರನಿಗೆ ಆತನ ‘ಫೇಸ್‌ಬುಕ್‌ ಸುಂದರಿ’ ಮೂಲಕ ಹಣದಾಸೆ ತೋರಿಸಿ ಪುಸಲಾಯಿಸಿದ್ದಾರೆ. ಅಂತೆಯೇ ರಾಜಸ್ಥಾನದಲ್ಲಿರುವ ಸೇನಾ ನೆಲೆಯೊಂದರ ಭಾವಚಿತ್ರವನ್ನು ‘ಫೇಸ್‌ಬುಕ್‌ ಸುಂದರಿ’ ಜತೆ ಹಂಚಿಕೊಂಡಿದ್ದಕ್ಕೆ ಪ್ರತಿಯಾಗಿ ಆತನ ಖಾತೆಗೆ ಹಣ ಜಮೆಯಾಗಿದೆ ಎಂದು ಮೂಲಗಳು ಹೇಳಿವೆ.

ಫೇಸ್‌ಬುಕ್‌ ಯುವತಿ ಬಲೆಗೆ ಬಿದ್ದ ಬಟ್ಟೆ ವ್ಯಾಪಾರಿ, ಪಾಕ್‌ ಗೂಢಚರನಾದ ಕತೆ!

ಈ ಭಾವಚಿತ್ರಗಳು ರವಾನೆಯಾದ ಬಳಿಕ ಸೇನಾ ನೆಲೆಯೊಳಗಿನ ವ್ಯವಸ್ಥೆ ಬಗ್ಗೆ ಐಎಸ್‌ಐ ಮಾಹಿತಿ ಕೋರಿದೆ. ಪದೇ ಪದೇ ಕೇಳಿದರೂ ಜಿನೇಂದ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅನುಮಾನಗೊಂಡ ಐಎಸ್‌ಐ, ಜಿನೇಂದ್ರನ ಪೂರ್ವಾಪರ ವಿಚಾರಿಸಿದಾಗ ಆತನ ನಿಜ ಬಣ್ಣ ಗೊತ್ತಾಗಿದೆ. ಇದಾದ ಬಳಿಕ ಆತನೊಂದಿಗೆ ಹಣಕಾಸು ವ್ಯವಹಾರ ಮುಂದುವರೆದಿಲ್ಲ. ಬೆಂಗಳೂರು ಹಾಗೂ ರಾಜಸ್ಥಾನದ ಸೇನಾ ನೆಲೆಗಳ ಭಾವಚಿತ್ರವನ್ನು ಎರಡ್ಮೂರು ಬಾರಿ ಕಳುಹಿಸಿದರೂ ಹಣ ಮಾತ್ರ ಸಿಕ್ಕಿಲ್ಲವೆಂದು ತಿಳಿದು ಬಂದಿದೆ.

ಕರಾಚಿ ನಂಟು ಪಕ್ಕಾ:

ಗೂಢಚಾರಿಕೆ ಸಂಬಂಧ ಜಿನೇಂದ್ರನನ್ನು ಪಾಕಿಸ್ತಾನದ ಕರಾಚಿಯಿಂದಲೇ ನೇರವಾಗಿ ಐಎಸ್‌ಐ ನಿರ್ವಹಿಸಿದೆ ಎಂಬುದಕ್ಕೆ ಹಣ ಜಮೆ ಪುರಾವೆಯಾಗಿದೆ. ಸೇನಾ ನೆಲೆಯ ಫೋಟೋ ರವಾನೆಯಾದ ಕೂಡಲೇ ಆತನ ಖಾತೆಗೆ ಹಣ ಬಂದಿದೆ. ಹೀಗಾಗಿ ಆರೋಪಿಗೆ ಪಾಕಿಸ್ತಾನ ಕರಾಚಿ ನಂಟು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿ, ಆಂಧ್ರ ಬಳಿಕ ಬೆಂಗಳೂರು

ಭಾರತೀಯ ಸೇನೆಯ ಕುರಿತು ಮಾಹಿತಿ ಪಡೆಯಲು ದುಷ್ಟಐಎಸ್‌ಐ, ಈಗ ಭಾರತೀಯ ಸೇನೆಯ ಅಧಿಕಾರಿಗಳು ಹಾಗೂ ಸೈನಿಕರಿಗೆ ಗಾಳ ಹಾಕಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಸಕ್ರಿಯ’ವಾಗಿರುವ ಸೈನಿಕರಿಗೆ ಸುಂದರ ಯುವತಿಯರ ಸೋಗಿನಲ್ಲಿ ಐಎಸ್‌ಐ ‘ಹನಿಟ್ರ್ಯಾಪ್‌’ ಮಾಡುತ್ತಿದೆ. ಇದೇ ಜೂನ್‌ನಲ್ಲಿ ದೆಹಲಿಯಲ್ಲಿ ಓರ್ವ ಸಿಕ್ಕಿಬಿದ್ದರೆ, ಆಂಧ್ರಪ್ರದೇಶದಲ್ಲಿ ವಾಯು ಸೇನೆಯ ಸೈನಿಕರ ಮೇಲೆ ಆರೋಪ ಕೇಳಿ ಬಂದಿದೆ. ಈ ಎರಡು ಪ್ರಕರಣಗಳು ಬಳಿಕ ಎಚ್ಚೆತ್ತ ಸೇನೆಯ ಗುಪ್ತದಳವು, ಐಎಸ್‌ಐ ಹೊಸೆದಿರುವ ಮೋಹದ ಬಲೆಗೆ ಬಿದ್ದಿರುವ ಸೈನಿಕರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡಿತು. ಆಗ ಬೆಂಗಳೂರಿನಲ್ಲಿ ನೆಲೆಸಿದ್ದ ಜಿನೇಂದ್ರನ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ : ಬೆಂಗಳೂರಲ್ಲಿ ವ್ಯಕ್ತಿ ಅರೆಸ್ಟ್

ತಕ್ಷಣವೇ ಬೆಂಗಳೂರಿನ ಪಾಕಿಸ್ತಾನದ ಗೂಢಚಾರನ ಬಗ್ಗೆ ಸಿಸಿಬಿಗೆ ಗುಪ್ತದಳ ಮಾಹಿತಿ ನೀಡಿದೆ. ಈ ಸುಳಿವು ಲಭ್ಯವಾದ ಕೂಡಲೇ ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಅವರು, ವಿಶೇಷ ತಂಡ ರಚಿಸಿ ಜಿನೇಂದ್ರನ ಪತ್ತೆಗೆ ಕಾರ್ಯಾಚರಣೆ ನಡೆಸಿದೆ. ಕಾಟನ್‌ಪೇಟೆ ಮೊಹಲ್ಲಾದಲ್ಲಿ ಸಿಕ್ಕಿಬಿದ್ದ ಆತನನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಆತ ಸೇನಾಧಿಕಾರಿಯಲ್ಲ. ಶೋಕಿಗೆ ಸೇನಾಧಿಕಾರಿ ಉಡುಪು ಧರಿಸಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಎಂಬುದು ಗೊತ್ತಾಗಿದೆ.

ನೆಲೆಗಳ ಹೊರಗಿನ ಫೋಟೋ

ಬೆಂಗಳೂರು ಹಾಗೂ ರಾಜಸ್ಥಾನದಲ್ಲಿರುವ ಭಾರತೀಯ ಸೇನಾ ನೆಲೆಗಳ ಹೊರಗಿನವ ಭಾವಚಿತ್ರಗಳು ಮಾತ್ರ ಆರೋಪಿ ಜಿನೇಂದ್ರ ಸಿಂಗ್‌ ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಸೇನಾಧಿಕಾರಿ ಅಲ್ಲದ ಕಾರಣಕ್ಕೆ ಆತನಿಗೆ ಸೇನೆಯ ನೆಲೆಯೊಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜತೆ ನೆಲೆಸಿದ್ದವರಿಗೆ ನಂಟಿಲ್ಲ: 

ಕಾಟನ್‌ಪೇಟೆಯಲ್ಲಿ ಜಿನೇಂದ್ರನ ಜತೆ ನಾಲ್ವರು ನೆಲೆಸಿದ್ದರು. ಆದರೆ ಈ ಗೂಢಚಾರಿಕೆ ಕೃತ್ಯದಲ್ಲಿ ಆ ನಾಲ್ವರಿಗೆ ಯಾವುದೇ ಸಂಬಂಧವಿಲ್ಲ. ಅವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!