
ಪೀಣ್ಯ ದಾಸರಹಳ್ಳಿ (ಏ.16): ಮನೆಯಲ್ಲಿ ಮಲಗಿದ್ದ ಅಕ್ಕ ಹಾಗೂ ತಾಯಿ, ತಂದೆಯರ ಮೇಲೆ ಮಗನೇ ಇದ್ದಕ್ಕಿದ್ದಂತೆ ಚಾಕು ಹಿಡಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇದರಹಳ್ಳಿಯಲ್ಲಿ ನಡೆದಿದೆ.
ಮೇದರಹಳ್ಳಿಯ ವಿನಾಯಕ ಲೇಔಟ್ ನಿವಾಸಿ ಕೃಷ್ಣಮೂರ್ತಿ (51) ಪಾರ್ವತಮ್ಮ (48) ನಯನಾ (24) ಹಲ್ಲೆಗೆ ಒಳಗಾದವರು. ಹಲ್ಲೆ ನಡೆಸಿದ ಮಗ ಹರ್ಷ (22) ಇದೀಗ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಮೂವರಿಗೆ ಸಪ್ತಗಿರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನಡೆಸಲಾಗಿದೆ.
ಏ.15ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದ್ದು, ಹಲ್ಲೆ ಸಂದರ್ಭದಲ್ಲಿ ಹರ್ಷನಿಂದ ಬಚಾವಾಗಲು ಮನೆಯವರು ಕಾರದ ಪುಡಿಯನ್ನು ಎರಚಿದ್ದಾರೆ. ಆದರೂ ಬಿಡದೆ ಹರ್ಷ ಚಾಕುವಿನಿಂದ ಹಲ್ಲೆ ಮುಂದುವರೆಸಿದ್ದ. ಮನೆಯೊಳಗೆ ಕಿರುಚಾಟ ಕೇಳಿ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಸೋಲದೇವನಹಳ್ಳಿ ಪೊಲೀಸರು ಬಾಗಿಲು ಒಡೆದು ಮನೆಯವರನ್ನು ರಕ್ಷಿಸಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ; ನಾಗಪುರ ಗ್ಯಾಂಗ್ ಅರೆಸ್ಟ್!
ಎರಡು ತಿಂಗಳ ಹಿಂದೆಯಷ್ಟೇ ಮೇದರಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಬಾಲರಾಜ್ ಎನ್ನುವವರಿಗೆ ಸೇರಿದ ಮನೆಯಲ್ಲಿ ಕೃಷ್ಣಮೂರ್ತಿ ಕುಟುಂಬ ಬಾಡಿಗೆಗೆ ಇತ್ತು. ಅಕ್ಕ ನಯನಾ ಎಂಜಿನಿಯರಿಂಗ್ ಮುಗಿಸಿ ಕೆಲಸ ಹುಡುಕುತ್ತಿದ್ದು, ಆರೋಪಿ ತಮ್ಮನೂ ಎಂಜಿನಿಯರಿಂಗ್ ಓದುತ್ತಿದ್ದ.
ನಾವು ಹೊರ ಹೋಗದಂತೆ ಡೋರ್ ಲಾಕ್: ತಾಯಿ
ಕಳೆದ 2 ದಿನದ ಹಿಂದೆ ಹರ್ಷ, ಯಾಕೋ ಇತ್ತೀಚಿಗೆ ಭಯ ಆಗುತ್ತಿದೆ ಅಮ್ಮ ಅಂತ ಹೇಳಿದ್ದ. ಆಗ ಆಸ್ಪತ್ರೆಗೆ ಹೋಗುವ ಅಂತ ಕರೆದರೆ ನಿರಾಕರಿಸಿದ್ದ. ಏ.15ರ ಮುಂಜಾವು ಚಾಕು ಹಿಡಿದು ಏಕಾಏಕಿ ಗಲಾಟೆ ಮಾಡಿದ. ಆಗ ಬಚಾವ್ ಆಗಲು ಅಡುಗೆ ಮನೆಯಿಂದ ಖಾರದ ಪುಡಿ ಎರಚಿದ್ದೇವೆ. ನಾನು ಮನೆಯಿಂದ ಆಚೆ ಬರದಂತೆ ಮಗನೇ ಪೂರ್ವ ನಿಯೋಜಿತವಾಗಿ ಡೋರ್ ಲಾಕ್ ಮಾಡಿ ಕೀ ಬಿಚ್ಚಿಟ್ಟದ್ದ. ಪೊಲೀಸರು ಬರದಿದ್ದರೆ ನಮ್ಮ ಜೀವ ಉಳಿಯುತ್ತಿರಲಿಲ್ಲ ಎಂದು ತಾಯಿ ಪಾರ್ವತಮ್ಮ ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ