ತಂದೆ-ತಾಯಿ ಕೊಲೆ ಮಾಡಿದ ಮಗ| ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಹೃದಯ ವಿದ್ರಾವಕ ಘಟನೆ|ದಂಪತಿ ಶವದ ಮುಂದೆ ಕಣ್ಣೀರಿಟ್ಟ ಸಂಬಂಧಿಕರು| ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ|
ಕನಕಗಿರಿ(ಜೂ.03): ಕುಟುಂಬ ಕಲಹ ಹಿನ್ನೆಲೆಯಲ್ಲಿ ಮಗನೇ ತಂದೆ-ತಾಯಿಯನ್ನು ಕೊಲೆ ಮಾಡಿರುವ ದಾರುಣ ಘಟನೆ ಪಟ್ಟಣದ 9ನೇ ವಾರ್ಡಿನಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಅಕ್ಕಮ್ಮ (56), ಗಿರಿಯಪ್ಪ ಮಡಿವಾಳ (61) ಕೊಲೆಯಾದ ದಂಪತಿ. ಈ ದಂಪತಿಗಳಿಗೆ ಒಬ್ಬನೇ ಮಗ, ಒಬ್ಬಳೇ ಮಗಳು. ಮಗನಿಗೆ ನಾಲ್ಕು ವರ್ಷದ ಹಿಂದೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಪಿ.ಕೆ. ಹಳ್ಳಿಯ ತನುಜಾ ಜೊತೆ ವಿವಾಹವಾಗಿತ್ತು. ಕೌಟುಂಬಿಕ ಕಲಹದಿಂದಾಗಿ ರಮೇಶ ತನ್ನ ತಂದೆ-ತಾಯಿ ಮಲಗಿರುವಾಗ ತಲೆಗೆ ಕಬ್ಬಿಣದ ಹಾರೆಯಿಂದ ಹಲ್ಲೆ ನಡೆಸಿದ್ದಾನೆ. ಮೊದಲಿಗೆ ತಾಯಿ ಅಕ್ಕಮ್ಮ ಸ್ಥಳದಲ್ಲಿಯೇ ಪ್ರಾಣಬಿಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ತಂದೆ ಗಿರಿಯಪ್ಪ ಕೊಪ್ಪಳ ಜಿಲ್ಲಾಸ್ಪತ್ರೆಗೆ ತೆರಳುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಎಸ್‌ಪಿ ಜಿ. ಸಂಗೀತಾ ತಿಳಿಸಿದ್ದಾರೆ.
ಮಾಗಡಿ: ಆಸ್ತಿ ಆಸೆಗಾಗಿ ಪತ್ನಿಯನ್ನೇ ಕೊಂದ ಪತಿ..?
ಆರೋಪಿ ರಮೇಶ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಜವಾನ ಆಗಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ತಮ್ಮ ಮನೆಗೆ ಬಂದಿದ್ದ. ಸೋಮವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಪಾಲಕರೊಡನೆ ಜಗಳ ಮಾಡಿ, ಮಂಗಳವಾರ ಬೆಳಗಿನ ಜಾವ ಆರೋಪಿಯು ತಂದೆ-ತಾಯಿಯನ್ನು ಕೊಲೆಗೈದಿದ್ದಾನೆ.
ಸಿಪಿಐ ಸುರೇಶ ತಳವಾರ ನೇತೃತ್ವದ ತಂಡ ತನಿಖೆ ಆರಂಭಿಸಿದೆ. ಪ್ರಕರಣದ ಸತ್ಯಾಂಶ ತನಿಖೆಯ ಬಳಿಕ ಮತ್ತಷ್ಟುತಿಳಿಯಲಿದೆ. ಮಾನಸಿಕ ಅಸ್ವಸ್ಥತೆಯಿಂದ ರಮೇಶ ತನ್ನ ಪೋಷಕರನ್ನು ಕೊಲೆ ಮಾಡಿದ್ದಾನೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ದಂಪತಿ ಸಾವಿನ ಸುದ್ದಿ ತಿಳಿದ ಜನ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ, ದುಃಖತಪ್ತರಾಗಿ ಕಣ್ಣೀರಿಟ್ಟರು. ಕೊಲೆಯಾದ ದಂಪತಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪ್ರಕರಣ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.