​ಗಾಂಜಾ, ಇಸ್ಪೀಟ್‌ ಜೂಜಾಟ ತಡೆಗಟ್ಟುವಲ್ಲಿ ಪೊಲೀಸ್‌ ಇಲಾಖೆ ವಿಫಲ: ಆರೋಪ

By Kannadaprabha News  |  First Published Jun 2, 2020, 10:00 AM IST

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಗಾಂಜಾ, ಜೂಜಾಟ ಜೋರಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಸಂಪೂರ್ಣ ವಿಫಲಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಸಾಗರ(ಜೂ.01): ಗಾಂಜಾ, ಇಸ್ಪೀಟ್‌ ಜೂಜಾಟ ತಡೆಗಟ್ಟುವಲ್ಲಿ ಪೊಲೀಸ್‌ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ದೂರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚುತ್ತಿರುವ ಗಾಂಜಾ ಸೇವನೆ ಹಾಗೂ ಮಾರಾಟದ ಬಗ್ಗೆ ಪೊಲೀಸ್‌ ಹಿರಿಯ ಅ​ಧಿಕಾರಿಗಳಿಗೆ ಮಾಹಿತಿ ನೀಡಿದ್ದಾಗ್ಯೂ ಸ್ಥಳಕ್ಕೆ ಹೋಗುತ್ತಿಲ್ಲ ಎಂದರು.

ಪಟ್ಟಣ ಹೊರವಲಯ ಗಾಂಜಾ ಸೇವನೆ ಮಾಡುವವರ ಅಡ್ಡವಾಗಿ ಪರಿವರ್ತನೆಯಾಗಿದೆ. ಗಾಂಜಾ ಸೇವಿಸಿ ಅತಿವೇಗದಲ್ಲಿ ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕೂಲಿ ಕೆಲಸದ ಯುವಕರು, ವಿದ್ಯಾರ್ಥಿಗಳು ಗಾಂಜಾ ವ್ಯಸನಿಗಳಾಗಿದ್ದಾರೆ. ಇದರಿಂದ ಕುಟುಂಬದ ಸ್ವಾಸ್ಥ್ಯ ಹಾಳಾಗುತ್ತಿದೆ. ಕ್ಷೇತ್ರ ಶಾಸಕರು ಈ ಬಗ್ಗೆ ಗಮನ ಹರಿಸಬೇಕು. ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಮೇಲೆ ಒತ್ತಡ ತಂದು, ಸಾಗರ ತಾಲೂಕು ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ನಿಯಂತ್ರಣಕ್ಕೆ ವಿಶೇಷ ತಂಡ ರಚಿಸಬೇಕು ಎಂದು ಒತ್ತಾಯಿಸಿದರು.

Tap to resize

Latest Videos

ಪ್ರಗತಿಪರ ಸಂಘಟನೆಯ ಎಚ್‌.ಬಿ.ರಾಘವೇಂದ್ರ ಮಾತನಾಡಿ, ಗಾಂಜಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಾರ್ವಜನಿಕರು ಮನವಿ ಮಾಡಿದ್ದಾಗ್ಯೂ ಪೊಲೀಸ್‌ ಇಲಾಖೆ ಗಂಭೀರ ಕ್ರಮ ತೆಗೆದುಕೊಳ್ಳದೆ ಇರುವುದು ಬೇಸರದ ಸಂಗತಿ ಎಂದರು. ಸಾಗರಕ್ಕೆ ಎಲ್ಲಿಂದ ಗಾಂಜಾ ಬರುತ್ತಿದೆ. ಮಾರಾಟದ ಕಿಂಗ್‌ಪಿನ್‌ಗಳು ಯಾರು ಎನ್ನುವ ಕುರಿತು ಪೊಲೀಸ್‌ ಇಲಾಖೆ ತನಿಖೆ ನಡೆಸಬೇಕು. ಅತಿಹೆಚ್ಚು ವಿದ್ಯಾರ್ಥಿಗಳು, ಯುವಕರು ಗಾಂಜಾ ವ್ಯಸನಕ್ಕೆ ತುತ್ತಾಗುತ್ತಿರುವುದರಿಂದ ಸಮಾಜ ಅಧಃಪತನಕ್ಕೆ ಇಳಿಯುವ ಸಾಧ್ಯತೆ ಇದೆ. ಕೌಟುಂಬಿಕ ನೆಮ್ಮದಿಗೆ ಭಂಗ ತರುತ್ತಿರುವ ಈ ಚಟುವಟಿಕೆ ಬಗ್ಗೆ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ: ವಿಷ ಸೇವಿಸಿ ರೈತ ಆತ್ಮಹತ್ಯೆ

ಮುಖಂಡ ಎ.ಎ.ಶೇಟ್‌ ಮಾತನಾಡಿ, ಗಾಂಜಾ ದುಬಾರಿಯಾಗಿರುವುದರಿಂದ ಕೆಲವು ಯುವಕರು ಮೆಡಿಕಲ್‌ ಶಾಪ್‌ಗಳಲ್ಲಿ ಸಿಗುವ ಕೆಮ್ಮಿನ ಔಷಧ ಸೇವಿಸಿ ಮತ್ತು ಬರಿಸಿಕೊಳ್ಳುತ್ತಿದ್ದಾರೆ. ಮೆಡಿಕಲ್‌ ಶಾಪ್‌ನವರು ವೈದ್ಯರ ಚೀಟಿ ಇಲ್ಲದೆ ಮತ್ತು ತರಿಸುವ ಔಷ​ಧಿ ನೀಡದಂತೆ ಸಂಬಂಧಪಟ್ಟಇಲಾಖೆ ನಿಯಂತ್ರಣ ಹೇರಬೇಕು ಎಂದು ಹೇಳಿದರು.

click me!