ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು! ತಕರಾರಿನಲ್ಲಿದ್ದ ಜಮೀನು ಖರೀದಿ, ಒಂದೇ ಕುಟುಂಬದ 6 ಜನರ ಕೊಲೆ!

Kannadaprabha News   | Kannada Prabha
Published : May 30, 2026, 08:22 AM IST
Six shot dead near chadchan vijayapur over property dispute rav

ಸಾರಾಂಶ

ವಿಜಯಪುರದ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಆರು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 15 ವರ್ಷಗಳ ಹಿಂದಿನ ಹಗೆತನಕ್ಕೆ ಕಾರಣವಾಗಿದ್ದ ವಿವಾದಿತ ಜಮೀನನ್ನು ಖರೀದಿಸಿದ್ದೇ ಈ ಘಟನೆಗೆ ಕಾರಣವೆಂದು ಶಂಕಿಸಲಾಗಿದೆ.

ಶಶಿಕಾಂತ ಮೆಂಡೆಗಾರ

ವಿಜಯಪುರ (ಮೇ.30): ಹೆಣ್ಣು, ಹೊನ್ನು, ಮಣ್ಣಿಗಾಗಿ ಹಗೆತನಕ್ಕೆ ಬಿದ್ದ ಅದೆಷ್ಟೋ ಪ್ರತಿಷ್ಠಿತ ಮನೆತನಗಳೇ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಅದರಂತೆ ಜಮೀನಿನ ಬದುವೊಂದರ ವಿಚಾರವಾಗಿ ಕಳೆದ 4 ದಶಕಗಳ ಹಿಂದೆ ಭೀಮಾತೀರದಲ್ಲಿನ ಚಡಚಣದಲ್ಲಿ ಭೈರಗೊಂಡ-ಚಡಚಣ ಕುಟುಂಬಗಳ ಮದ್ಯೆ ಶುರುವಾಗಿದ್ದ ಹತ್ಯಾಕಾಂಡಗಳು ಸಾಲು, ಸಾಲು ಹೆಣಗಳು ಬಿದ್ದರೂ ಇನ್ನೂ ನಿಂತಿಲ್ಲ. ಈ ಎರಡು ಕುಟುಂಬಗಳ ಮಧ್ಯ ಶುರುವಾದ ವ್ಯಾಜ್ಯ ದಿನಗಳುರಿಳಿದಂತೆ ತಲೆಗಳುರುಳಿ ಅನೇಕ ಕುಟುಂಬಗಳ ಸಮಾಧಿಯನ್ನೇ ಕಟ್ಟಿವೆ. ಈ ಹಿಂದೆ ಅಲೋಕಕುಮಾರ ಅವರು ಉತ್ತರ ವಲಯ ಐಜಿಪಿ ಇದ್ದಾಗ ಇದೆಲ್ಲವೂ ಇಲ್ಲಿಗೆ ನಿಲ್ಲಬೇಕೆಂದು ಹಗೆತನದ ಕುಟುಂಬಳನ್ನೆಲ್ಲ ಒಂದುಗೂಡಿಸುವ ಪ್ರಯತ್ನ ಮಾಡಿದರೂ ಅಷ್ಟೆನೂ ಸಫಲತೆ ಕಂಡಿಲ್ಲ. ಆದರೆ, ಇಂದು ನಡೆದ ಭಯಾಕನ 6 ಜನರ ಹತ್ಯೆಯ ಘಟನೆ ಮತ್ತೆ ಭೀಮಾತೀರದ ಕ್ರೌರ್ಯ ಮೆರೆದಿದೆ.

ಬೆಚ್ಚಿ ಬೀಳಿಸಿದ ಕೊಲೆ:

ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ಭೀಕರ ಕೊಲೆ ನಡೆದಿದ್ದು, ಆರು ಜನರು ಕೊಲೆಯಾಗಿದ್ದಾರೆ. ದುಂಡಪ್ಪ ನಿರಾಳೆ (65), ಸಹೋದರರಾದ ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ(55) ಶಿವಪುತ್ರನ ಮಕ್ಕಳಾದ ರಾಹುಲ ನಿರಾಳೆ(25), ಸಮರ್ಥ ನಿರಾಳೆ(23)ಶಿವರ ಸಹಚರ ಶಬ್ಬೀರ ಅತ್ತಾರ(45) ಕೊಲೆಯಾಗಿದ್ದಾರೆ. ಇವರ ಜೊತೆಯಲ್ಲಿದ್ದ ಅರವಿಂದ ಕಟಗೆ ಹಾಗೂ ಜೆಸಿಬಿ ಆಪರೇಟರ್ ಸಂದೀಪ ಮಾನೆ ಗಾಯಗೊಂಡಿದ್ದು, ವಿಜಯಪುರ ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಚಡಚಣ ಜಮೀನು ವಿವಾದ, ಕೊಲೆ ಘಟನೆ ಹಿನ್ನೆಲೆ:

ಈ ಹಿಂದೆ 2015ರಲ್ಲಿ ಚಡಚಣ ತಾಲೂಕಿನ ಗೋವಿಂದಪುರದ ನಿವಾಸಿ ಶಿವಾನಂದ ತಳವಾರ ಎಂಬಾತ ತೇಲಿ ಮನೆತನದ ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದ. ಇದರಿಂದ ಕುಪಿತಗೊಂಡ ತೇಲಿ ಮನೆತನದ ಶಶಿಕಾಂತ ತೇಲಿ, ಪ್ರಶಾಂತ ತೇಲಿ, ಕಾಮನಿಂಗ ತೇಲಿ, ಮಹಾದೇವ ತೇಲಿ ಸೇರಿಕೊಂಡು ಶಿವಾನಂದ ತಳವಾರ ಎಂಬಾತನನ್ನು ಕೊಲೆ ಮಾಡಿದ್ದು, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಈ ಸಮಯದಲ್ಲಿ ತೇಲಿ ಮನೆತನದವರು ಗೋವಿಂದಪೂರದಲ್ಲಿನ ಜಮೀನು ಬಿಟ್ಟು ಬೇರೆಡೆ ನೆಲೆಸಿದ್ದು, ಅಂದಿನಿಂದ ಈ ಜಮೀನು ಖಾಲಿ ಬಿದ್ದಿತ್ತು. ಸದರಿಯವರಿಗೆ ಸೇರಿದ ಜಮೀನು ಉಳಿಮೆ ಇಲ್ಲದೇ ಹಾಗೇ ಉಳಿದಿತ್ತು.

ಜಮೀನು ಖರೀದಿಸಿ ಕೊಲೆಯಾದರಾ?

ಕಳೆದ 15 ವರ್ಷಗಳ ಹಿಂದೆ ಹೆಣ್ಣೊಂದರ ವಿಚಾರದಲ್ಲಿ ತೇಲಿ ಹಾಗೂ ತಳವಾರ ಕುಟುಂಬಗಳ ಮಧ್ಯ ಮೂಡಿದ್ದ ವೈಷ್ಯಮ್ಯ ಇಂದು ಸ್ಫೋಟಗೊಂಡಿದೆ. ಜಮೀನಿನ ಕುರಿತು ತಕರಾರು ಇದೆಂದು ಹೇಳಿದ್ದರೂ ಅದೇ ಜಮೀನು ಖರೀದಿಸಿ ಉಳುಮೆಗೆ ಮುಂದಾಗಿದ್ದರಿಂದ ತಳವಾರ ಕುಟುಂಬದವರು ಕುಪಿತಗೊಂಡು ಅವರ ಕಡೆಯವರೇ ಕೊಲೆ ಮಾಡಿಸಿರಬಹುದು ಎಂದು ಶಂಕಿಸಲಾಗಿದೆ. 15 ವರ್ಷಗಳ ಹಿಂದೆ ನಡೆದ ಘಟನೆಯಿಂದ ಬೀಳು ಬಿದ್ದಿದ್ದ ಜಮೀನು ಖರೀದಿಸಿದ ನಿರಾಳೆ ಕುಟುಂದವರು ಉಸಿರು ಚೆಲ್ಲಿದ್ದಾರೆ. ಸುಮಾರು 15 ವರ್ಷಗಳಿಂದ ಉಳುಮೆ ಮಾಡದೆ ತಕರಾರಿನಲ್ಲೇ ಇದ್ದ ಈ 15 ಎಕರೆ ಜಮೀನನ್ನು ನಿರಾಳೆ ಕುಟುಂಬಸ್ಥರು ಖರೀದಿ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ತಕರಾರು ತೆಗೆದಿದ್ದ ಕುಟುಂಬಸ್ಥರೇ ಹಗೆತನ ಸಾಧಿಸಿ ಈ ಆರು ಜನರನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳ ಬಂಧನವಾದ ಬಳಿಕಷ್ಟೆ ನಿಖರ ಮಾಹಿತಿ ದೊರೆಯಲಿದೆ.

ಪೊಲೀಸ್ ಬಂದೋಬಸ್ತ್: ಕೊಲೆಯಾದ ಘಟನಾ ಸ್ಥಳಕ್ಕೆ ಸೋಕೋ ತಂಡ, ಬೆರಳು ಮುದ್ರೆ ತಂಡ ಭೇಟಿ ನೀಡಿ, ಪರಿಶೀಲನೆ ಕೈಕೊಂಡಿದ್ಧಾರೆ. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಹಿರಿಯ ಅಧಿಕಾರಿಗಳು, ಚಡಚಣ ಠಾಣೆ ಪೊಲೀಸರು ಹಾಗೂ ಮೂರು ಡಿಎಆರ್‌ ತಂಡಗಳು ಹಾಗೂ 4 ಕೆಎಸ್‌ಆರ್‌ಪಿ ತಂಡಗಳನ್ನು ನಿಯೋಜಿಸಲಾಗಿದೆ.

ಪ್ರಾಥಮಿಕ ಮಾಹಿತಿಯಂತೆ ಸದರಿ ಘಟನೆಯಲ್ಲಿ ಈ ಹಿಂದೆ ನಡೆದ ಚಡಚಣ ಠಾಣೆಯ ಕ್ರೈಂ ಸಂಖ್ಯೆ: 156/2015 ಯು/ಎಸ್‌ 302 ಐಪಿಸಿ ಪ್ರಕರಣದಲ್ಲಿನ ಗೋವಿಂದಪುರ ನಿವಾಸಿ, ದೂರುದಾರ ಕಲ್ಲನಗೌಡ ತಂ.ಈಶ್ವರಗೌಡ ಪಾಟೀಲನ ಈತನ ಕಡೆಯವರು ಇರಬಹುದೆಂದು ಶಂಕಿಸಲಾಗಿದೆ. ಘಟನೆ ಕುರಿತು ತನಿಖೆ ಮುಂದುವರೆದಿದೆ.

-ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಹೀರಾತು ಶೂಟಿಂಗ್​ಗೆ ಹೋಗಿದ್ದ ಖ್ಯಾತ ಮಾಡೆಲ್​ ದುರಂತ ಸಾವು: ಆಯ ತಪ್ಪಿ ಕ್ವಾರಿಯಲ್ಲಿ ಬಿದ್ದು ಘಟನೆ
ಭೀಮಾತೀರದಲ್ಲಿ ರಕ್ತದೋಕುಳಿ: ವಿಜಯಪುರದಲ್ಲಿ ಆಸ್ತಿ ವಿವಾದಕ್ಕೆ 6 ಜನರ ಭೀಕರ ಹ*ತ್ಯೆ!