
ಬೆಂಗಳೂರು (ಫೆ. 05): ಅಪಾರ್ಟ್‌ಮೆಂಟ್ ನಿರ್ಮಾಣದ ಗುತ್ತಿಗೆ ವಿಚಾರವಾಗಿ ಸಿವಿಲ್ ಎಂಜಿನಿಯರ್‌ವೊಬ್ಬರನ್ನು (Civil Engineer) ಅಪಹರಿಸಿ ರೂ.33 ಲಕ್ಷಕ್ಕೆ ಒತ್ತೆಯಾಗಿಸಿಕೊಂಡಿದ್ದ ಇಬ್ಬರು ಗುತ್ತಿಗೆದಾರರು ಸೇರಿ ಆರು ಮಂದಿಯನ್ನು ಕೃತ್ಯ ನಡೆದ ಮೂರೇ ತಾಸಿನೊಳಗೆ ಸಿನಿಮೀಯ ಶೈಲಿಯಲ್ಲಿ ಯಲಹಂಕ ಠಾಣೆ ಪೊಲೀಸರು (Yelahanka Police station) ಬಂಧಿಸಿದ್ದಾರೆ.ಕೆ.ಆರ್.ಪುರದ ನಿವಾಸಿ ಗುತ್ತಿಗೆದಾರ ನಂದಗೋಪಾಲ, ಆವಲಹಳ್ಳಿಯ ಪಂಚಮುಖಿ ಲೇಔಟ್‌ನ ಸುನೀಲ್, ರಾಮಮೂರ್ತಿ ನಗರದ ಅಶೋಕ್, ವಿಘ್ನೇಶ್, ಮನೋಜ್ ಹಾಗೂ ಶಿವಾಜಿ ನಗರದ ಶಬಾಜ್ ಅಹಮ್ಮದ್ ಬಂಧಿತರಾಗಿದ್ದು, ಆರೋಪಿಗಳಿಂದ ಎರಡು ಕಾರು, ಚಿನ್ನಾಭರಣ ಹಾಗೂ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ. ಅಪಹರಣಕ್ಕೆ ಒಳಗಾಗಿದ್ದ ಒಡಿಶಾ ಮೂಲದ ಮಾನಸ್ ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಯಲಹಂಕ ಸಮೀಪ ಸಹೋದ್ಯೋಗಿ ಜತೆ ಕಾರಿನಲ್ಲಿ ಮಾನಸ್ ಹೋಗುವಾಗ ಈ ಅಪಹರಣ ಕೃತ್ಯ ನಡೆದಿತ್ತು.
ಕೆಲಸಗಾರರಿಂದಲೇ ಅಪಹರಣ: ಒಡಿಶಾ ಮೂಲದ ಮಾನಸ್ ಅವರು, ಆರ್.ಟಿ.ನಗರದಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದಾರೆ. ಸಿವಿಲ್ ಎಂಜಿನಿಯರ್ ಆಗಿರುವ ಅವರು ಟಾಸ್ಕ್ ಇವರ್ ಡಿಲೆವರಿ ಆ್ಯಂಡ್ ಸವೀರ್‍ಸ್ ಪ್ರೈಲಿ ಕಂಪನಿ ಹೊಂದಿದ್ದಾರೆ. ಈ ಕಂಪನಿ ಮೂಲಕ ನಿರ್ಮಾಣ ಹಂತದ ಕಟ್ಟಡಗಳ ಕಾಮಗಾರಿ ಉಸ್ತುವಾರಿ, ಪಾಯ ಅಗೆಯುವುದು ಸೇರಿದಂತೆ ಇತರೆ ಕೆಲಸಗಳನ್ನು ಅವರು ಗುತ್ತಿಗೆ ಪಡೆಯುತ್ತಿದ್ದರು.
ಇದನ್ನೂ ಓದಿ: ಹೆಂಡತಿಯ ತಂಗಿಯನ್ನೇ ಪ್ರೇಮದ ಬಲೆಗೆ ಬೀಳಿಸಿದ್ದ ಭಾವ: ಮದುವೆಗೆ ಒಪ್ಪದಿದ್ದಕ್ಕೆ ಕಿಡ್ನಾಪ್!
ಅಂತೆಯೇ ‘ಪ್ರಿಯಾ ಡೆವಲಪರ್ಸ್’ ಸಂಸ್ಥೆ ಬಾಣಸವಾಡಿ ಸಮೀಪ ಕಾನ್ಸೆಪ್ಟ್ ಆ್ಯಂಬಿಯನ್ಸ್ ಹೆಸರಿನಲ್ಲಿ ನಿರ್ಮಿಸುತ್ತಿದ್ದ 15 ಮಹಡಿಯ ಬೃಹತ್ ಅಪಾರ್ಟ್‌ಮೆಂಟ್‌ನ ಪಾಯ ಅಗೆಯುವ ರೂ.94 ಲಕ್ಷ ಮೊತ್ತದ ಕಾಮಗಾರಿಯನ್ನು ಮಾನಸ್ ಗುತ್ತಿಗೆ ಪಡೆದಿದ್ದರು. ನಂತರ ಈ ಕಾಮಗಾರಿಯನ್ನು ಗುತ್ತಿಗೆದಾರರಾದ ನಂದಗೋಪಾಲ್ ಮತ್ತು ಸುನೀಲ್ ಅವರಿಗೆ ರೂ.56 ಲಕ್ಷ ಹಾಗೂ ಇನ್ನುಳಿದ ರೂ.38 ಲಕ್ಷ ಗುತ್ತಿಗೆಯನ್ನು ಮಂಜುನಾಥ್ ರೆಡ್ಡಿಗೆ ನೀಡಿದ್ದರು. ಆದರೆ ಕಾಮಗಾರಿಯಲ್ಲಿ ಅವ್ಯವಹಾರ ಕಾರಣಕ್ಕೆ ನಂದಗೋಪಾಲ್ ಹಾಗೂ ಸುನೀಲ್ ಜತೆ ಮಾನಸ್ ಅವರಿಗೆ ಮನಸ್ತಾಪವಾಗಿತ್ತು.
"
ಆಗ ನೀಡಿರುವ ಗುತ್ತಿಗೆ ರದ್ದುಪಡಿಸಿ ಮಂಜುನಾಥ್ ರೆಡ್ಡಿ ಅವರಿಂದ ಇನ್ನುಳಿದ ಕಾಮಗಾರಿ ಮಾಡಿಸುತ್ತೇನೆ ಎಂದು ಮಾನಸ್ ಎಚ್ಚರಿಕೆ ನೀಡಿದ್ದರು. ಇದರಿಂದಾಗಿ ಎಂಜಿನಿಯರ್ ಮೇಲೆ ದಾದಾಗಿರಿ ನಡೆಸಿದ ಆರೋಪಿಗಳು, ಬಲವಂತವಾಗಿ ಕಾಮಗಾರಿ ನಡೆಸಿದ್ದರು. ಆದರೆ ಕಾಮಗಾರಿ ಕಳಪೆ ಗುಣಮಟ್ಟದಲ್ಲಿತ್ತು. ಆರೋಪಿಗಳಿಗೆ .3 ಲಕ್ಷವನ್ನು ಅವರು ಬಾಕಿ ಉಳಿಸಿಕೊಂಡಿದ್ದರು. ಆರೋಪಿಗಳು ಬಾಕಿ ಹಣ ಕೇಳಿದಾಗ ‘ನೀವು ಕೆಲಸ ಪೂರ್ಣಗೊಳಿಸಿಲ್ಲ. ನಾವು ಬೇರೆ ಗುತ್ತಿಗೆದಾರರಿಂದ ಕೆಲಸ ಮಾಡಿಸುತ್ತೇನೆ’ ಎಂದು ಮಾನಸ್ ಹೇಳಿದ್ದರು.
ಇದನ್ನೂ ಓದಿ: Kidnap Case: ಮುನಿಸಿಕೊಂಡ ಪ್ರಿಯತಮೆ ಓಲೈಕೆಗೆ ಅಣ್ಣನ ಕಿಡ್ನಾಪ್: ಪಾಗಲ್ ಪ್ರೇಮಿ ಅಂದರ್
ಈ ಮಾತಿನಿಂದ ಕೆರಳಿದ ಗುತ್ತಿಗೆದಾರರು, ಎಂಜಿನಿಯರ್ ಮಾನಸ್ ಅವರನ್ನು ಅಪಹರಿಸಿ ರೂ.30 ಲಕ್ಷ ಸುಲಿಗೆಗೆ ಸಂಚು ರೂಪಿಸಿದ್ದರು. ಅಪಹರಣದ ಬಳಿಕವೂ ಆರೋಪಿಗಳಿಗೆ ಹಣ ಕೊಡಲು ನಿರಾಕರಿಸಿದ್ದರಿಂದ ಮಾನಸ್ ಅವರಿಗೆ ಆರೋಪಿಗಳು ಹಲ್ಲೆ ನಡೆಸಿ ಚಿತ್ರ ಹಿಂಸೆ ಕೊಟ್ಟಿದ್ದರು. ಅಲ್ಲದೆ ಅವರು ಧರಿಸಿದ್ದ ಚಿನ್ನಾಭರಣಗಳನ್ನು ಕಸಿದುಕೊಂಡು ಹತ್ಯೆಗೈಯಲು ಮುಂದಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಾಗ ಮಾನಸ್ ಕಿಡ್ನಾಪ್: ಯಲಹಂಕ ಸಮೀಪ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ನ ಸೈಟ್ ಮ್ಯಾನೇಜರ್ ಆಗಿದ್ದ ಮಾನಸ್, ಆ ಕಾಮಗಾರಿಯ ಪರಿಶೀಲಿಸಿ ಬುಧವಾರ ಬೆಳಗ್ಗೆ 9.45ರ ಸುಮಾರಿಗೆ ಸಹೋದ್ಯೋಗಿ ಜತೆ ಮರಳುತ್ತಿದ್ದರು. ರೈತ ಸಂತೆ ಬಳಿ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಅವರು ಕಾರು ನಿಲ್ಲಿಸಿಕೊಂಡಿದ್ದ ವೇಳೆ ಅಲ್ಲಿಗೆ ಬೇರೊಂದು ಕಾರಿನಲ್ಲಿ ಬಂದ ಆರೋಪಿಗಳು, ಮಾನಸ್ ಅವರನ್ನು ಬಲವಂತವಾಗಿ ಕಾರಿನಿಂದಿಳಿಸಿ ತಮ್ಮ ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ.
ಬಳಿಕ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕೋಗಿಲಹಳ್ಳಿ ಸೇತುವೆ ಸಮೀಪದ ಬಾಯ್‌್ಸ ಗ್ಯಾರೇಜ್‌ಗೆ ಕರೆದೊಯ್ದು ಒತ್ತೆಯಾಗಿಟ್ಟಿದ್ದರು. ತಕ್ಷಣವೇ ಮಾನಸ್ ಸ್ನೇಹಿತ ಪವನ್ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ನೇತೃತ್ವದ ತಂಡ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಅಪಹರಣಕಾರರ ಬೆನ್ನಹತ್ತಿದ್ದರು. ಕೊನೆಗೆ ಕೃತ್ಯ ನಡೆದ ಮೂರು ಗಂಟೆಯಲ್ಲೇ ಕೋಲಾರ ಜಿಲ್ಲೆಯ ಕೋಗಿಲಹಳ್ಳಿ ಸೇತುವೆ ಸಮೀಪ ಅಪಹರಣಕಾರರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ