
ಬೆಂಗಳೂರು : ತಮ್ಮ ಮನೆಗೆ ಜಾತಿ ಗಣತಿಗೆ ಬಂದ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಕೂಡಿ ಹಾಕಿ ದುಂಡಾವರ್ತನೆ ತೋರಿದ ಆರೋಪದ ಮೇರೆಗೆ ಟೀ ವ್ಯಾಪಾರಿಯೊಬ್ಬ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭದ್ರಪ್ಪ ಲೇಔಟ್ ನಿವಾಸಿ ಸಂದೀಪ್ ಬಂಧಿತನಾಗಿದ್ದು, ತಮ್ಮ ಮನೆಗೆ ಬುಧವಾರ ಗಣತಿಗೆ ಬಂದ ಶಿಕ್ಷಕಿ ಸುಶೀಲಮ್ಮ ಅವರ ಜತೆ ಆತ ಗಲಾಟೆ ಮಾಡಿದ್ದ. ಈ ಬಗ್ಗೆ ಗಣತಿದಾರರು ನೀಡಿದ ದೂರಿನ ಮೇರೆಗೆ ಸಂದೀಪ್‌ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಆರ್.ಸಂದೀಪ್, ಯಶವಂತಪುರದ ಗೊರಗುಂಟೆಪಾಳ್ಯದಲ್ಲಿ ಟೀ ಅಂಗಡಿ ಇಟ್ಟಿದ್ದಾನೆ. ತನ್ನ ಕುಟುಂಬದ ಜತೆ ಭದ್ರಪ್ಪ ಲೇಔಟ್‌ನಲ್ಲಿ ಆತ ನೆಲೆಸಿದ್ದಾನೆ. ಜಾತಿ ಗಣತಿ ಸಲುವಾಗಿ ಸಂದೀಪ್ ಮನೆಗೆ ಬುಧವಾರ ಬೆಳಗ್ಗೆ ಶಿಕ್ಷಕಿ ಸುಶೀಲಮ್ಮ ತೆರಳಿದ್ದರು. ಆಗ ನೀನು ಯಾರು ಜಾತಿ ಕೇಳಲು? ನನಗೆ ಮನೆಗೆ ಯಾಕೆ ಬಂದೆ? ಯಾರೂ ನನ್ನ ವಿಳಾಸ ಕೊಟ್ಟಿದ್ದು? ನೀನು ನಕಲಿ? ಹೀಗೆ ಬಾಯಿಗೆ ಬಂದಂತೆ ಶಿಕ್ಷಕಿಗೆ ಬೈದು ಆರೋಪಿ ಗಲಾಟೆ ಮಾಡಿದ್ದಾನೆ.
ನೀವು ಗಣತಿಗೆ ಮಾಹಿತಿ ಕೊಡದೆ ಹೋದರೆ ಪರವಾಗಿಲ್ಲ ಬಿಡಿ ಎಂದು ಹೇಳಿ ಸುಶೀಲಮ್ಮ ಹೊರಡಲು ಮುಂದಾಗಿದ್ದಾರೆ. ಈ ವೇಳೆ ತನ್ನ ಮನೆ ಗೇಟ್ ಬಂದ್ ಮಾಡಿ ಶಿಕ್ಷಕಿಯನ್ನು ಕೂಡಿ ಹಾಕಿದ ಸಂದೀಪ್, ನಿಮ್ಮ ಉಸ್ತುವಾರಿ ಅಧಿಕಾರಿ ಕರೆಸುವಂತೆ ತಾಕೀತು ಮಾಡಿದ್ದಾನೆ. ಈ ಗಲಾಟೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಬಿಎಲ್‌ಓ ಮೇಲೂ ಆತ ಪ್ರತಾಪ ತೋರಿಸಿದ್ದಾನೆ. ಕೊನೆಗೆ ಈ ಘಟನೆ ಕುರಿತು ತಿಳಿದು ಪೊಲೀಸರು ತೆರಳಿದ ನಂತರ ಪರಿಸ್ಥಿತಿ ಶಾಂತವಾಗಿದೆ. ಬಳಿಕ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಪಡಿಸಿದ ಆರೋಪದ ಮೇರೆಗೆ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ