
ಬೆಂಗಳೂರು (ಅ.10): ಬೆಂಗಳೂರು ಉತ್ತರ ತಾಲೂಕು, ಯಶವಂತಪುರ ಹೋಬಳಿಯ ಕೊಡಿಗೇಹಳ್ಳಿ ಗ್ರಾಮದಲ್ಲಿ ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಕೆಐಎಡಿಬಿಯಿಂದ ಮಂಜೂರಾಗಿರುವ, ಹಾಲಿ ಬಳಕೆಯಲ್ಲಿಲ್ಲದ ಸುಮಾರು 350 ಕೋಟಿ ರು. ಬೆಲೆ ಬಾಳುವ 14 ಎಕರೆ ಸರ್ಕಾರಿ ಜಮೀನಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕಬಳಿಸುವ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.
ನಕಲಿ ಸಾಗುವಳಿ ಚೀಟಿ ಮತ್ತು ಭೂ ಮಂಜೂರಾತಿ ದಾಖಲೆಗಳನ್ನು ಸಲ್ಲಿಸಿದ್ದ ಪುಟ್ಟಮ್ಮ, ಎಚ್.ಬಿ. ಶ್ರೀಧರ್, ಕೆ.ವಿ. ಚಂದ್ರನ್ ಮತ್ತು ಪುಟ್ಟಗೌರಮ್ಮ ಎಂಬುವರ ಹೆಸರಿಗೆ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ ವಾಸಂತಿ ಅಮರ್ ಅವರು ಜಮೀನು ಪರಭಾರೆ ಮಾಡಿ 2025ರ ಮೇ ತಿಂಗಳಲ್ಲಿ ಆದೇಶ ಹೊರಡಿಸಿದ್ದಾರೆ. ಜಮೀನಿನ ಮಾಲೀಕತ್ವದ ಹಕ್ಕು ಸಾಧಿಸುತ್ತಿರುವವರ ಪೈಕಿ ಒಬ್ಬರು ನ್ಯಾಯಾಲಯಕ್ಕೂ ನಕಲಿ ಆಧಾರ್ ದಾಖಲೆ ಸಲ್ಲಿಸಿ ವಂಚಿಸಿದ್ದಾರೆ ಎಂದು ನೈಸ್ ಸಂಸ್ಥೆಯ ಫೀಲ್ಡ್ ಸೆಕ್ಯುರಿಟಿ ಆಫೀಸರ್ ಸಿದ್ದಲಿಂಗಯ್ಯ ಆರೋಪಿಸಿದ್ದಾರೆ.
ಇದನ್ನೂ ಓದಿ: ಐಷಾರಾಮಿ ಕಾರಿನ ತೆರಿಗೆ ವಂಚನೆ: ಮಂಗಳೂರು RTO ಅಧಿಕಾರಿಯ ಕರಾಳ ಮುಖ ಬಯಲು
ಪ್ರಕರಣದ ಹಿನ್ನೆಲೆ: ಕೊಡಿಗೇಹಳ್ಳಿ ಗ್ರಾಮದ ಹಳೇ ಸರ್ವೇ ನಂಬರ್ 86ರಲ್ಲಿನ ಗೋಮಾಳ ಎಂದು ಘೋಷಿಸಿದ್ದ ಜಮೀನನ್ನು ನೈಸ್ ಯೋಜನೆಗಾಗಿ ಕೆಐಎಡಿಬಿ ಮೂಲಕ ನೈಸ್‌ಗೆ ಹಸ್ತಾಂತರಿಸಿ 1998ರ ಅಕ್ಟೋಬರ್‌ನಲ್ಲಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ನೈಸ್ ಯೋಜನೆ ಅಪೂರ್ಣವಾಗಿರುವ ಕಾರಣ ಜಾಗ ಈಗಲೂ ಖಾಲಿ ಇದೆ.
ಈ ನಡುವೆ ಪುಟ್ಟಮ್ಮ, ಎಚ್.ಬಿ. ಶ್ರೀಧರ್, ಕೆ.ವಿ. ಚಂದ್ರನ್ ಮತ್ತು ಪುಟ್ಟಗೌರಮ್ಮ ಎಂಬುವರು ಕೊಡಿಗೇಹಳ್ಳಿ ಗ್ರಾಮದಲ್ಲಿನ 14 ಎಕರೆ ಜಮೀನು 1954ರಲ್ಲಿ ಗ್ರೋ ಮೋರ್ ಫುಡ್ ಸ್ಕೀಮ್ ಅಡಿ ತಮಗೆ ಸರ್ಕಾರದಿಂದ ಮಂಜೂರಾಗಿದೆ. ಈ ಜಮೀನುಗಳ ಖಾತಾಗಳನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಬೆಂಗಳೂರು ಉತ್ತರ ತಹಸೀಲ್ದಾರ್‌ಗೆ ನಿರ್ದೇಶನ ನೀಡುವಂತೆ ಕೋರಿ 2009ರಲ್ಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಹೈಕೋರ್ಟ್, ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.
ಹೈಕೋರ್ಟ್ ಆದೇಶದಂತೆ ಅಂದಿನ ಜಿಲ್ಲಾಧಿಕಾರಿ ಎಚ್. ರಾಮಾಂಜನೇಯ ಅವರು, ಈ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದರು. ಪರಿಶೀಲನೆ ವೇಳೆ ನಾಲ್ವರು ಅರ್ಜಿದಾರರ ಸಾಗುವಳಿ ಚೀಟಿ ರಿಜಿಸ್ಟಾರ್ ಅನ್ನು ಪರಿಶೀಲಿಸಿದಾಗ, ಸಂಶಯಾಸ್ಪದ ರೀತಿಯಲ್ಲಿ ಸೇರಿಸಿರುವುದು ಕಂಡು ಬಂದಿದೆ. ದಾಖಲೆಗಳನ್ನು ತಿದ್ದಿರುವುದು, ಹಸ್ತಾಕ್ಷರದಲ್ಲಿ ವ್ಯತ್ಯಾಸಗಳಿದ್ದು, ಸಾಗುವಳಿ ಚೀಟಿಗಳನ್ನು ಸೃಷ್ಟಿಸಲಾಗಿದೆ. ನಾಲ್ವರ ಹೆಸರಿಗೆ ಭೂ ಮಂಜೂರಾತಿ ಆಗಿರುವ ದಾಖಲೆಗಳು ತಾಲೂಕು ಕಚೇರಿಯಲ್ಲಿ ಲಭ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ನಡೆದಿರುವ ಪೋಡಿ ದುರಸ್ತಿ ಪ್ರಕ್ರಿಯೆಗಳು ಕಾನೂನುಬದ್ಧವಲ್ಲ ಎಂದು ಜಿಲ್ಲಾಧಿಕಾರಿಗೆ ತಹಸೀಲ್ದಾರ್ ವರದಿ ನೀಡಿದ್ದರು.
ವರದಿ ಆಧರಿಸಿ, ಭೂ ದಾಖಲೆಗಳಲ್ಲಿ ನಾಲ್ವರ ಹೆಸರುಗಳನ್ನು ತೆಗೆದು ಹಾಕುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದ ಜಿಲ್ಲಾಧಿಕಾರಿಯವರು, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸಲು ನೆರವಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ನಿರ್ದೇಶನ ನೀಡಿದ್ದರು.
5 ವರ್ಷಗಳ ಬಳಿಕ ಮರುಜೀವ:
ಜಮೀನಿನ ಮೇಲೆ ಹಕ್ಕು ಕೋರಿ ಮತ್ತೆ ಈ ನಾಲ್ವರು, ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಯ ಸೂಚನೆಯಂತೆ ಉತ್ತರ ತಹಸೀಲ್ದಾರ್ ಮತ್ತೊಮ್ಮೆ ಪರಿಶೀಲಿಸಿದಾಗ, ನಾಲ್ವರ ಹೆಸರಿಗೆ ಭೂ ಮಂಜೂರಾತಿಯ ದಾಖಲೆಗಳು ಲಭ್ಯವಿಲ್ಲ. ಇನ್ನು ನೈಸ್‌ಗೆ ಜಮೀನು ಹಸ್ತಾಂತರಿಸಲಾಗಿದೆ. ಆದರೆ, ಸರ್ವೇ ನಂಬರ್‌ನಲ್ಲಿನ ಹಿಸ್ಸಾ ಸಂಖ್ಯೆಯ ವಿವರಗಳನ್ನು ಜಮೀನು ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸಿಲ್ಲ ಎಂದು ವರದಿ ನೀಡಿದ್ದರು.
ಹಿಸ್ಸಾ ಸಂಖ್ಯೆ ನಮೂದಿಸದ ಕಾರಣ ಪುಟ್ಟಮ್ಮ, ಎಚ್.ಬಿ. ಶ್ರೀಧರ್, ಕೆ.ವಿ. ಚಂದ್ರನ್ ಮತ್ತು ಪುಟ್ಟಗೌರಮ್ಮ ಅವರಿಗೆ 14 ಎಕರೆ ಜಮೀನು ಪರಭಾರೆ ಮಾಡಿ ವಿಶೇಷ ಜಿಲ್ಲಾಧಿಕಾರಿ ವಾಸಂತಿ ಅಮರ್ ಅವರು ಅರೆನ್ಯಾಯಿಕ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ನೈಸ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ ಹೈಕೋರ್ಟ್ ಮತ್ತೆ ಜಿಲ್ಲಾಧಿಕಾರಿಗೆ ಪರಿಶೀಲಿಸಲು ಸೂಚಿಸಿತ್ತು.
ಆಗಲೂ ಜಿಲ್ಲಾಧಿಕಾರಿ ವಾಸಂತಿ ಅಮರ್ ಅವರು ನಾಲ್ವರ ಹೆಸರನ್ನು ಖಾತಾ ದಾಖಲೆಗಳಲ್ಲಿ ಸೇರಿಸುವಂತೆ 2025ರ ಮೇ ತಿಂಗಳಲ್ಲಿ ಆದೇಶಿಸಿದ್ದರು. ಈ ಮೂಲಕ ಸರ್ಕಾರದ ಜಮೀನು ಕಬಳಿಸಲು ಅಧಿಕಾರಿಗಳೇ ಭೂಗಳ್ಳರ ಜೊತೆ ಕೈಜೋಡಿಸಿದ್ದಾರೆ ಎಂದು ನೈಸ್ ಸಂಸ್ಥೆಯ ಫಿಲ್ಡ್ ಸೆಕ್ಯುರಿಟಿ ಆಫೀಸರ್ ಸಿದ್ದಲಿಂಗಯ್ಯ ಆರೋಪಿಸಿದ್ದಾರೆ.
ಇದನ್ನೂ ಓದಿ: ಸರ್ಕಾರ ಉರುಳಿಸಲು ಎಚ್‌ಡಿಕೆ ಪಿತೂರಿ: ಯಾವ ಶಾಸಕರಿಗೆ ಗಾಳ ಅಂತ ಗೊತ್ತಿದೆ -ಡಿಕೆಶಿ
ವಿಶೇಷ ಡಿಸಿ ಮೇಲೆ ಲೋಕಾಯುಕ್ತ ದಾಳಿ:
ಇದೇ ಜುಲೈ ತಿಂಗಳಲ್ಲಿ ಕೆ-ರೈಡ್‌ನ ವಿಶೇಷ ಜಿಲ್ಲಾಧಿಕಾರಿ ವಾಸಂತಿ ಅಮರ್ ಅವರಿಗೆ ಸೇರಿದ ಸ್ಥಳಗಳ ಮೇಲೆ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆಸಲಾಗಿದೆ.
ಹೆಸರು ಉಲ್ಲೇಖಿಸದ ಪೊಲೀಸರು: ಆರೋಪ:
ಜಮೀನು ಪರಭಾರೆ ಕುರಿತು ಜಿಲ್ಲಾಧಿಕಾರಿಯವರ ಆದೇಶ ಆಧರಿಸಿ ವಿವಾದಿತ ಜಮೀನನ್ನು ಖಾಸಗಿ ಬಿಲ್ಡರ್ ಟ್ರಿಂಕೋ ಕಂಪನಿಗೆ ಮಾರಾಟ ಮಾಡಲು ಕೆ.ವಿ. ಚಂದ್ರನ್ ಸೇರಿದಂತೆ ಇನ್ನಿತರರು ಕರಾರು ಒಪ್ಪಂದ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಟ್ರಿಂಕೋ ಕಂಪನಿಯ ಪ್ರಸಾದ್, ದೇವರಾಜ್, ದಿವ್ಯಾ ಹಾಗೂ ಕೃಷ್ಣೇಗೌಡ ಎಂಬುವರು ಆ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿದ್ದಾರೆ. ಈ ಕುರಿತು ಕೆ.ವಿ. ಚಂದ್ರನ್ ಹಾಗೂ ಟ್ರಿಂಕೋ ಕಂಪನಿಯ ನಾಲ್ವರ ವಿರುದ್ಧ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದೇವು. ಆದರೆ, ಕೆ.ವಿ ಚಂದ್ರನ್ ಹೆಸರು ಮಾತ್ರ ಎಫ್‌ಐಆರ್‌ನಲ್ಲಿ ನಮೂದಿಸಿರುವ ಪೊಲೀಸರು, ಉಳಿದ ನಾಲ್ವರು ಹೆಸರನ್ನು ಸೇರಿಸಿಲ್ಲ ಎಂದು ನೈಸ್ ಸಂಸ್ಥೆಯ ಪ್ರತಿನಿಧಿ ಆರೋಪಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ