ಪೊಲೀಸರನ್ನು ವಂಚಿಸಿ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿದ್ದ ಶಿವಾಜಿನಗರದ ಸರ್ಫರಾಜ್ ಬಂಧನ!

By Sathish Kumar KHFirst Published Aug 6, 2024, 1:21 PM IST
Highlights

ಬೆಂಗಳೂರು ಪೊಲೀಸರನ್ನೇ ಯಾಮಾರಿಸಿ ಲಕ್ಷ ಲಕ್ಷ ರೂಪಾಯಿ ಹಣ ಸುಲಿಗೆ ಮಾಡುತ್ತಿದ್ದ ಶಿವಾಜಿನಗರದ ಸೈಯದ್ ಸರ್ಫರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.06): ಸಾಮಾನ್ಯವಾಗಿ ಕೆಲವೆಡೆ ಸಾರ್ವಜನಿಕರು, ವ್ಯಾಪಾರಿಗಳನ್ನು ಪೊಲೀಸರೇ ಸುಲಿಗೆ ಮಾಡಿದ್ದಾರೆಂಬ ಆರೋಪಗಳನ್ನು ನಾವು ಕೇಳಿರುತ್ತೇವೆ. ಆದರೆ, ಇಲ್ಲೊಬ್ಬ ಶಿವಾಜಿನಗರ ಅಸಾಮಿ ಪೊಲೀಸರನ್ನೇ ಯಾಮಾರಿಸಿ ಬರೋಬ್ಬರಿ ಲಕ್ಷ ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರನ್ನೇ ಯಾಮಾರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹೌದು, ಪೊಲೀಸರನ್ನೇ ಸುಲಿಗೆ ಮಾಡುತ್ತಿದ್ದ ಚಾಲಾಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಶಿವಾಜಿನಗರದ ಸೈಯದ್ ಸರ್ಫರಾಜ್ ಅಹಮದ್ ಆಗಿದ್ದಾನೆ. ಈತ ಬೆಂಗಳೂರು ನಗರದ ಪೂರ್ವ ವಿಭಾಗದ ಹಲವು ಪೊಲೀಸ್ ಠಾಣೆಗಳಲ್ಲಿ ಪೊಲೀಸರಿಂದ ಹಣ ಸುಲಿಗೆ ಮಾಡುತ್ತಿದ್ದನು. ಪೊಲೀಸರನ್ನು ಮೊದಲು ಪರಿಚಯ ಮಾಡಿಕೊಂಡು ಅವರೊಂದಿಗೆ ಸೀದಾ ಪೊಲೀಸ್ ಠಾಣೆಗೆ ಹೋಗುತ್ತಿದ್ದನು. ಅಲ್ಲಿ ಪೊಲೀಸರಿಗೆ ಟೀ, ತಿಂಡಿ ಕೊಡಿಸಿದಂತೆ ಮಾಡಿ ಸೆಲ್‌ನೊಳಗೆ ಕೂಡಿ ಹಾಕಿರುತ್ತಿದ್ದ ಆರೋಪಿಗಳನ್ನು ಪರಿಚಯ ಮಾಡಿಕೊಂಡು ಆತನ ಪೂರ್ವಾಪರ ತಿಳಿದುಕೊಳ್ಳುತ್ತಿದ್ದನು. 

Latest Videos

ಬೆಂಗಳೂರು: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದ ಶಾಲಾ ಬಾಲಕಿ ತುಂಬು ಗರ್ಭಿಣಿ ಎಂದ ವೈದ್ಯರು

ಪೊಲೀಸ್ ಠಾಣೆಯ ಸೆಲ್ ಒಳಗಿನ ಆರೋಪಿಗಳನ್ನ ನೈಸ್ ಆಗಿ ಮಾತಾಡಿಸುತ್ತಿದ್ದ ಚಾಲಾಕಿ ಅವರ ಬಳಿ ತನ್ನ ಪರಿಚಯ ಮಾಡಿಕೊಂಡು ವಿಶ್ವಾಸ ಗಳಿಸುತ್ತಿದ್ದನು. ನಂತರ ಆರೋಪಿಯ ಮತ್ತು ಕೇಸಿನ ಪೂರ್ವಪರ ತಿಳಿದುಕೊಳ್ಳುತ್ತಿದ್ದನು. ಬಳಿಕ ಲಾಕ್ ಅಪ್ ಅಲ್ಲಿ ಇರುವ ಆರೋಪಿ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದನು. ನಂತರ ನೇರವಾಗಿ ರಾಜ್ಯ ಮಾನವ ಹುಕ್ಕಗಳ ಆಯೋಗಕ್ಕೆ ದೂರು ಕೊಡುತ್ತಿದ್ದನು. ಕಾನೂನು‌ ಬಾಹಿರವಾಗಿ ಪೊಲೀಸರ ಅಭಿರಕ್ಷೆಯಲ್ಲಿ ಇಟ್ಟುಕೊಂಡಿರುವುದಾಗಿ ದೂರು ದಾಖಲಿಸುತ್ತಿದ್ದನು. ಈ ಕೇಸಿನ ಆಧಾರದಲ್ಲಿ ಸಂಬಂಧಪಟ್ಟ ಠಾಣೆಯ ಪೊಲೀಸರನ್ನ ಹಣಕ್ಕಾಗಿ ಪೀಡಿಸಿ ಹಿಂಡಿ ಹಿಪ್ಪೆ ಮಾಡುತ್ತಿದ್ದನು.

ಪೊಲೀಸರ ವಿರುದ್ದ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ  ಸುಳ್ಳು ದೂರು ಕೊಡುತ್ತಿದ್ದ ಸೈಯದ್ ಸರ್ಫರಾಜ್ ಅಹಮದ್ ಸೆಲ್ ನಲ್ಲಿ ಇರುವ ಆರೋಪಿಗೂ ತನಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಆತ ತಮ್ಮ ಸಂಬಂಧಿಕನೆಂದು ಪೊಲೀಸರಿಂದ ಹಣ ಸುಲಿಗೆ ಮಾಡುತ್ತಿದ್ದನು. ಇನ್ನು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿ ಲಾಕಪ್‌ನಲ್ಲಿ ಕೆಲವು ಆರೋಪಿಗಳನ್ನು ಕೂಡಿ ಹಾಕಿರುವ ಪೊಲೀಸರು ಸೈಯದ್‌ ನೀಡಿರುವ ಮಾನವ ಹಕ್ಕುಗಳ ಆಯೋಗಕ್ಕೆ ದೂರಿಗೆ ಹೆದರಿಕೊಂಡು ಆತನಿಗೆ ಹಣವನ್ನೂ ಕೊಡುತ್ತಿದ್ದರು. ಜೊತೆಗೆ, ನಿಮ್ಮ ವಿರುದ್ಧದ ದೂರು ಹಿಂಪಡೆಯುವುದಾಗಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದನು.

ಶಿವಾಜಿನಗರ ಪೊಲೀಸ್ ಇನ್ಸ್ಪೆಕ್ಟರ್  ವಿರುದ್ದ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದನು. ಕ್ರೈ ನಂಬರ್ 82ಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ ಲಾಕಪ್‌ನಲ್ಲಿ ಇಟ್ಟಿದ್ದರಿಂದ ಈ ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ಸೈಯದ್ ಸರ್ಪರಾಜ್ ದೂರು ನೀಡಿದ್ದನು. ಬಳಿಕ ಶಿವಾಜಿನಗರ ಪೊಲೀಸ್ ಇನ್ಸ್ಪೆಕ್ಟರ್‌ಗೆ 50 ಸಾವಿರ ರೂ.ಗೆ ಡಿಮ್ಯಾಂಡ್ ಮಾಡಿದ್ದನು. ನಾನು ಕೇಸ್ ವಾಪಸ್ ಪಡೆಯಬೇಕೆಂದರೆ 50 ಸಾವಿರ ರೂ. ಕೊಡುವಂತೆ ಡಿಮ್ಯಾಂಡ್ ಮಾಡಿದ್ದನು. ಇನ್ನು ಪೊಲೀಸರು ಆತನನ್ನು ಟ್ರ್ಯಾಪ್ ಮಾಡಿ ಬಂಧಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ, ನೆರವು ಪೊಲೀಸ್ ಚೌಕಿ ಬಳಿ 25 ಸಾವಿರ ಹಣ ನೀಡಲು ಮುಂದಾಗಿದ್ದರು. ಆದರೆ, ಹಣ ಹಿಡಿದುಕೊಂಡು ಹೋಗಿದ್ದ ಪೊಲೀಸರ ಕೈಯಿಂದ ಹಣ ಕಿತ್ತುಕೊಂಡು ಸೈಯದ್ ಸರ್ಪರಾಜ್ ಎಸ್ಕೇಪ್ ಆಗಿದ್ದನು.

ತಮಿಳಿನ ಹಂಟರ್ ಸಿನೆಮಾದಲ್ಲಿ ಚಾನ್ಸ್ ಕೊಡೋದಾಗಿ ಕನ್ನಡ ರೂಪದರ್ಶಿಗೆ ಆನ್‌ಲೈನ್‌ ವಂಚನೆ!

ಪೊಲೀಸರಿಂದಲೇ ಹಣ ಸುಲಿಗೆ ಮಾಡಿ ಕಿರುಕುಳ ಕೊಡುತ್ತಿದ್ದ ಅಸಾಮಿ ಒಮ್ಮೆ ತಪ್ಪು ಮಾಡಿ ಸಿಕ್ಕಿಕೊಂಡ ನಂತರ ಪೊಲೀಸರು ಆತನನ್ನು ಯಾವ ಬಿಲದಲ್ಲಿ ಅವಿತುಕೊಂಡರೂ ಬಿಡುವುದಿಲ್ಲ. ನೆರವು ಪೊಲೀಸ್ ಚೌಕಿ ಬಳಿಯಿಂದ ಪರಾರಿ ಆಗಿದ್ದ ಸರ್ಫರಾಜ್‌ನ ಬೆನ್ನತ್ತಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 30ಕ್ಕೂ ಅಧಿಕ ಕಡೆ ಪೊಲೀಸರಿಗೆ ಬೆದರಿಕೆ ಹಣ ವಸೂಲಿ ಮಾಡಿದ್ದಾಗಿ ಹೇಳಿದ್ದಾನೆ. ಹಲವು ಪೊಲೀಸರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿರುವುದು ಬೆಳಕಿಗೆ ಬಂದಿದೆ. ಶಿವಾಜಿನಗರ ಪೊಲೀಸರು ಆರೋಪಿಯನ್ನ ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

click me!