Mangaluru Crime: ಲೈಂಗಿಕ ಕಿರುಕುಳ: ಯುವಕನ ವಿರುದ್ಧ ಪ್ರತ್ಯೇಕ ಕೇಸು

By Kannadaprabha NewsFirst Published Jan 8, 2023, 2:25 PM IST
Highlights

ವಿದ್ಯಾರ್ಥಿನಿಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಮತ್ತು ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ಯುವತಿಗೆ ಕಿರುಕುಳ ನೀಡಿ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಮತ್ತು ಬೆದರಿಕೆಯ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಪುತ್ತೂರು (ಜ.8): ವಿದ್ಯಾರ್ಥಿನಿಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಮತ್ತು ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ಯುವತಿಗೆ ಕಿರುಕುಳ ನೀಡಿ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಮತ್ತು ಬೆದರಿಕೆಯ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ನಿತೀಶ್‌ ರೈ ಆರೋಪಿ.

ಈತ, 2020 ರ ಜನವರಿಯಲ್ಲಿ ಬಾಲಕಿಯೊಬ್ಬಳನ್ನು ಪ್ರೀತಿ ಮಾಡುವಂತೆ ಒತ್ತಾಯಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದು, ಪದೇ ಪದೇ ಆಕೆಗೆ ಮೊಬೈಲ್‌ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಲ್ಲದೆ, ಬ್ಲಾಕ್‌ಮೇಲ್‌ ಮಾಡಿದ್ದಾನೆ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಕಿರುಕುಳ ನೀಡಿದ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದ ಬಾಲಕಿ ಇದೀಗ ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ತಡವಾಗಿ ದೂರು ನೀಡಿದ್ದಾರೆ. ಪೊಲೀಸರು ಆಕೆಯ ದೂರಿನಂತೆ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Shivamogga: ಬಾಲಕಿಗೆ ಲೈಂಗಿಕ ಕಿರುಕುಳ: ಯುವಕನಿಗೆ 20 ವರ್ಷ ಜೈಲು ಶಿಕ್ಷೆ

ಆರೋಪಿ ನಿತೀಶ್‌ ರೈ ವಿರುದ್ಧ ಯುವತಿಯೊಬ್ಬರಿಂದ ಮತ್ತೊಂದು ಬೆದರಿಕೆ ಪ್ರಕರಣವೂ ದಾಖಲಾಗಿದೆ. ಪುತ್ತೂರಿನ ಕಾಲೇಜೊಂದರಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿನಿಯ ಮೊಬೈಲ್‌ಗೆ ಕರೆ ಮಾಡಿ ಪದೇ ಪದೇ ಪ್ರೀತಿಸುವಂತೆ ಒತ್ತಾಯ ಮಾಡುತ್ತಿರುವುದಲ್ಲದೆ, ಕಳೆದ ಡಿ.29ರಂದು ವಿದ್ಯಾರ್ಥಿನಿಯ ಮನೆಯ ಬಳಿಗೆ ಬಂದು ಬೆದರಿಕೆಯೊಡ್ಡಿರುವ ಕುರಿತು ಆಕೆ ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ. ಸಂಪ್ಯ ಪೊಲೀಸರು ಆರೋಪಿಯ ವಿರುದ್ಧ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಇನ್ನೊಬ್ಬನ ಯುವಕನ ವಿರುದ್ದವೂ ಕೇಸು

ನಿತೇಶ್‌ ರೈ ವಿರುದ್ಧ ದೂರು ನೀಡಿರುವವ ಪೈಕಿ, ಪ್ರಕರಣದ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದ ಬಾಲಕಿ ಮತ್ತೊಬ್ಬ ಯುವಕನ ವಿರುದ್ಧವೂ ದೂರು ನೀಡಿದ್ದಾರೆ. ಪ್ರಸ್ತುತ ಪ್ರಾಪ್ತ ವಯಸ್ಕಳಾಗಿರುವ ಆಕೆ ನೀಡಿದ ದೂರಿನಂತೆ ಪುತ್ತೂರು ತಾಲೂಕಿನ ಕೋಡಿಯಡ್ಕ ನಿವಾಸಿ ಬೆಳಿಯಪ್ಪ ಗೌಡ ಅವರ ಪುತ್ರ, ಪುತ್ತೂರಿನ ಪರ್ಲಡ್ಕದಲ್ಲಿ ಕೋಳಿ ಫಾಮ್‌ರ್‍ ಹೊಂದಿರುವ ರಾಹುಲ್‌ ಎಂಬಾತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ದೂರು ನೀಡಿರುವ ವಿದ್ಯಾರ್ಥಿನಿ ಅಪ್ರಾಪ್ತ ವಯಸ್ಸಿನವಳಾಗಿದ್ದ ಸಂದರ್ಭದಲ್ಲಿ ಆರೋಪಿ ರಾಹುಲ್‌ ಆಕೆಗೆ ಕೋಳಿ ಫಾಮ್‌ರ್‍ನಲ್ಲಿ ಲೈಂಗಿಕ ಕಿರುಕುಳ ನೀಡಿ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿದ್ದಾರೆ.

ಹೆತ್ತವರು ಬೈದರೆಂದು ಮನೆಬಿಟ್ಟು ಉಡುಪಿಗೆ ಬಂದ ಗದಗಿನ ಬಾಲಕ

ಉಡುಪಿ: ಹೆತ್ತವರ ಮೇಲೆ ಮುನಿಸಿಕೊಂಡು ಮನೆ ಬಿಟ್ಟು ಬಂದ ಗದಗ ಜಿಲ್ಲೆಯ ವಿದ್ಯಾರ್ಥಿಯೊಬ್ಬನನ್ನು ಸಮಾಜ ಸೇವಕ ವಿಶು ಶೆಟ್ಟಿಅಂಬಲಪಾಡಿ ರಕ್ಷಿಸಿ, ಹೆತ್ತವರೊಂದಿಗೆ ಸೇರಿಸಿದ್ದಾರೆ. ಶನಿವಾರ ಮುಂಜಾನೆ 3 ಗಂಟೆಗೆ ಸಮವಸ್ತ್ರ ಮತ್ತು ಬೆನ್ನುಚೀಲ ಧರಿಸಿದ 14 ವರ್ಷದ ಈ ಬಾಲಕ ನಗರದಲ್ಲಿ ಸುತ್ತುತ್ತಿದ್ದ ಬಗ್ಗೆ ಆಟೋ ಚಾಲಕರೊಬ್ಬರು ವಿಶು ಶೆಟ್ಟಿಅವರಿಗೆ ಮಾಹಿತಿ ನೀಡಿದರು. ಅವರು ಹುಡುಗನನ್ನು ಪತ್ತೆ ಮಾಡಿ ವಿಚಾರಿಸಿದಾಗ ಆತ ಕೆಲಸ ಹುಡುಕಿಕೊಂಡು ಬಂದಿದ್ದೇನೆ ಎಂದು ಹೇಳಿದ.

ಸ್ವಲ್ಪ ಮನವೊಲಿಸಿ ವಿಚಾರಿಸಿದಾಗ ಹೆತ್ತವರು ಬೈದರು ಅದಕ್ಕೆ ಸಿಟ್ಟಿನಿಂದ ಮನೆ ಬಿಟ್ಟು ಬಂದಿರುವುದಾಗಿ ಬಾಯಿಬಿಟ್ಟಿದ್ದಾನೆ. ನಂತರ ಆತನಿಗೆ ತಿಳುವಳಿಕೆ ನೀಡಿ, ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ. ಆತನ ಮನೆಯವರನ್ನು ಸಂಪರ್ಕಿಸಿದ್ದು, ಅವರು ಉಡುಪಿಗೆ ಬರುತ್ತಿದ್ದಾರೆ ಎಂದು ವಿಶು ಶೆಟ್ಟಿತಿಳಿಸಿದ್ದಾರೆ.

ಮಗನ ಕಾಲಿಗೆ ಬೀಳುತ್ತೇನೆಂದ ತಾಯಿ...

ವಿಶು ಶೆಟ್ಟಿಅವರು ಬಾಲಕನಿಂದ ಮೊಬೈಲ್‌ ನಂಬರ್‌ ಪಡೆದು, ಆತನ ಹೆತ್ತವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಆಗ ಆತನ ತಾಯಿ ಫೋನಿನಲ್ಲಿ ದೈನ್ಯವಾಗಿ ತಮ್ಮ ಏಕೈಕ ಮಗನನ್ನು ರಕ್ಷಿಸುವಂತೆ ಬೇಡುತಿದ್ದರು. ಮಗನಿಗೂ ಕರೆ ಮಾಡಿ, ತಮ್ಮದು ತಪ್ಪಾಯಿತು, ನಿನ್ನ ಕಾಲಿಗೆ ಬೀಳುತ್ತೇವೆ, ಇನ್ನೊಮ್ಮೆ ಬೈಯ್ಯುವುದಿಲ್ಲ, ಕರೆದುಕೊಂಡು ಹೋಗುವುದಕ್ಕೆ ಬರುತ್ತೇವೆ, ಮನೆಗೆ ಬಾ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರು ಎಂದು ವಿಶು ಶೆಟ್ಟಿಹೇಳಿದ್ದಾರೆ.

ತಾತ್ಕಾಲಿಕ ಪುನರ್ವಸತಿ ಕೇಂದ್ರ ಬೇಕು

ಮಕ್ಕಳು ಮನೆ ಬಿಟ್ಟು ಬರುವ ಘಟನೆಗಳು ಅಗಾಗ್ಗೆ ಪತ್ತೆಯಾಗುತ್ತಲೇ ಇವೆ, ಅಂತಹ ಮಕ್ಕಳಿಗೆ ರಕ್ಷಣೆ ನೀಡುವುದಕ್ಕೆ, ಜಿಲ್ಲೆ ರಚನೆಯಾಗಿ 25 ವರ್ಷ ಕಳೆದರೂ ಉಡುಪಿಯಲ್ಲಿ ಇನ್ನೂ ತಾತ್ಕಾಲಿಕ ಪುನರ್ವಸತಿ ಕೇಂದ್ರ ಸ್ಥಾಪನೆಯಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಸ್ಪಂದನೆ ತೋರಿಸುತ್ತಿಲ್ಲ. ಮನೆ ಬಿಟ್ಟು ಬರುವ ಹುಡುಗರು ಅಥವಾ ಹುಡುಗಿಯ ರು ತಪ್ಪು ಕೈಗಳಿಗೆ ಸಿಕ್ಕಿ ದಾರಿತಪ್ಪುವ, ಅನಾಹುತಗಳಾಗುವ ಸಾಧ್ಯತೆಗಳಿರುವುದರಿಂದ ತಕ್ಷಣ ಜಿಲ್ಲೆಯಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ಸ್ಥಾಪಿಸುವಂತೆ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

ಅಂತರ್‌ ರಾಜ್ಯ ಚೋರರಿಬ್ಬರ ಬಂಧನ

ಕೋಟೇಶ್ವರದಲ್ಲಿ 300 ಗ್ರಾಂ ಚಿನ್ನ1481 ಗ್ರಾಂ ಬೆಳ್ಳಿಯ ಆಭರಣ ಕದ್ದ ಖದೀಮರು ಕುಂದಾಪುರ: ಇಲ್ಲಿನ ಕೋಟೇಶ್ವರದಲ್ಲಿ ಮನೆಯೊಂದರಿಂದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಇಬ್ಬರು ಅಂತರ್‌ ರಾಜ್ಯ ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಾಸರಗೋಡು ಜಿಲ್ಲೆಯ ಪೆರಿಯಾಟಡುಕಂನ ಹಾಶಿಂ ಎ.ಎಚ್‌. (42) ಮತ್ತು ಕುಂಬಳೆಯ ಅಬೂಬಕ್ಕರ್‌ ಸಿದ್ದೀಕ್‌ (48) ಎಂದು ಗುರುತಿಸಲಾಗಿದೆ.

ಸೆ.17ರಂದು ರಾತ್ರಿ ಕೋಟೆಶ್ವರ ಪ್ರಸನ್ನ ನಾರಾಯಣ ಆಚಾರ್ಯ (47) ಎಂಬವರ ಮನೆಯ ಮುಂಬಾಗಿಲಿನ ಬೀಗ ಮುರಿದು 15 ಲಕ್ಷ ರು. ಮೌಲ್ಯದ 300 ಗ್ರಾಂ ಚಿನ್ನ ಹಾಗೂ 1 ಲಕ್ಷ ರು. ಮೌಲ್ಯದ ಒಟ್ಟು 1481 ಗ್ರಾಂ ಬೆಳ್ಳಿ ಸೇರಿ ಒಟ್ಟು 16 ಲಕ್ಷ ರು. ಮೌಲ್ಯ ಸೊತ್ತುಗಳನ್ನು ಕಳವು ಮಾಡಿದ್ದರು. ಈ ಪ್ರಕರಣದ ಬಗ್ಗೆ ಕುಂದಾಪುರ ಎಸ್‌.ಐ. ಸದಾಶಿವ ಗವರೋಜಿ ಮತ್ತು ಪಿಎಸ್‌ಐ ಪ್ರಸಾದ್‌ ಕಲಹಾಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿಲಾಗಿದೆ.

Flight Journey: ವಿಮಾನದಲ್ಲಿ ದೌರ್ಜನ್ಯವಾದರೆ ಫೈಟ್ ಮಾಡೋದು ಹೇಗೆ?

ಅಂತರ್‌ ರಾಜ್ಯ ಚೋರರಾಗಿರುವ ಈ ಆರೋಪಿಗಳು ಉಡುಪಿ ನಗರ ಠಾಣೆ, ಮಲ್ಪೆ, ಕುಂದಾಪುರ ಠಾಣೆಗಳಲ್ಲದೇ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಳ್ಳತನ ಹಾಗೂ ಇತರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ.

click me!