ರೌಡಿಗಳ ಹೆಡೆಮುರಿ ಕಟ್ಟಲು ಗೂಂಡಾ ಕಾಯ್ದೆ ಪ್ರಯೋಗ

By Kannadaprabha NewsFirst Published Oct 2, 2020, 9:43 AM IST
Highlights

ಒಂದೇ ತಿಂಗಳಲ್ಲಿ ಗೂಂಡಾ ಕಾಯ್ದೆಯಡಿ 7 ರೌಡಿಗಳು ಅರೆಸ್ಟ್| ಬೆಂಗಳೂರಲ್ಲಿ ರೌಡಿಗಳು ತಲೆ ಎತ್ತದಂತೆ ಗೂಂಡಾ ಕಾಯ್ದೆಯಡಿ ಕ್ರಮ| ಕೇಂದ್ರ, ಪೂರ್ವ, ಉತ್ತರ ಹಾಗೂ ದಕ್ಷಿಣ ವಿಭಾಗಗಳ ಏಳು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು| 

ಬೆಂಗಳೂರು(ಅ.02): ರಾಜಧಾನಿಯಲ್ಲಿ ರೌಡಿಗಳನ್ನು ಬಗ್ಗು ಬಡಿಯಲು ಪೊಲೀಸರು ಒಂದೇ ತಿಂಗಳಲ್ಲಿ ಏಳು ಮಂದಿ ಕುಖ್ಯಾತ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ನಗರದಲ್ಲಿ ರೌಡಿಗಳು ತಲೆ ಎತ್ತದಂತೆ ಗೂಂಡಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈಗ ಕೇಂದ್ರ, ಪೂರ್ವ, ಉತ್ತರ ಹಾಗೂ ದಕ್ಷಿಣ ವಿಭಾಗಗಳ ಏಳು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ರೌಡಿಗಳ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ, ಹಲ್ಲೆ, ಅಪಹರಣ, ಸಾಕ್ಷಿಗಳಿಗೆ ಬೆದರಿಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಸಹ ಮತ್ತಷ್ಟುರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಅಕ್ರಮ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಗೂಂಡಾ ಕಾಯ್ದೆಯಡಿ ಬಂಧಿತರು:

ವಿನಯ್‌ ಕುಮಾರ್‌ ಅಲಿಯಾಸ ಮಿಂಡ- 10 ವರ್ಷಗಳಿಂದ ಮಹಾಲಕ್ಷ್ಮೇ ಲೇಔಟ್‌, ರಾಜಗೋಪಾಲ ನಗರ, ನಂದಿನಿಲೇಔಟ್‌ ಠಾಣೆಗಳ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ, ಹಲ್ಲೆ, ಕೊಲೆ ಯತ್ನ ಸೇರಿದಂತೆ 17 ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. 2015ರಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಿ ಬಳಿಕ ಒಂದು ವರ್ಷದ ನಂತರ ಬಿಡುಗಡೆಯಾಗಿದ್ದ. ಮೂರು ವರ್ಷಗಳ ಅವಧಿಯಲ್ಲಿ ಮತ್ತೆ ಆರು ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ.

ಕಲಬುರಗಿ: ದಾರಿ ಹೋಕನಿಗೆ ಚಾಕುವಿನಿಂದ ಮನಬಂದಂತೆ ಇರಿದ ರೌಡಿಶೀಟರ್‌

ದಯಾನಂದ ಅಲಿಯಾಸ್‌ ನಂದ- ಏಳು ವರ್ಷಗಳಿಂದ ಅಶೋಕನಗರ ಮತ್ತು ಕೋರಮಂಗಲ ಠಾಣೆಗಳ ಪಾತಕ ಕೃತ್ಯಗಳಲ್ಲಿ ನಿರತನಾಗಿದ್ದಾನೆ. ಸುಲಿಗೆ, ಕೊಲೆ ಯತ್ನ, ಗಾಂಜಾ ಮಾರಾಟ ಸೇರಿ 13 ಪ್ರಕರಣಗಳು ದಾಖಲಾಗಿವೆ.
ಶ್ರೀಕಾಂತ ಅಲಿಯಾಸ್‌ ಊಸ -ಎಂಟು ವರ್ಷಗಳಿಂದ ವೈಯಾಲಿಕಾವಲ್‌, ಮಲ್ಲೇಶ್ವರ, ಸುಬ್ರಹ್ಮಣ್ಯನಗರ, ಜ್ಞಾನಭಾರತಿ ಹಾಗೂ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾನೆ‡. ಕೊಲೆ, ಸುಲಿಗೆ, ಅಪಹರಣ, ಹಲ್ಲೆ, ಕೊಲೆ ಯತ್ನ ಸೇರಿದಂತೆ 15 ಪ್ರಕರಣಗಳು ದಾಖಲಾಗಿವೆ.

ಖಲೀಲ್‌ ಅಹಮ್ಮದ್‌ ಅಲಿಯಾಸ್‌ ಡೈನಮೈಟ್‌ ಖಲೀಲ್‌- ಹದಿನಾಲ್ಕು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ. ಕೆ.ಜಿ.ಹಳ್ಳಿ, ಮೈಸೂರು ನಗರ ಠಾಣೆಗಳಲ್ಲಿ ಕೊಲೆ ಯತ್ನ, ಅಪಹರಣ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳು ದಾಖಲಾಗಿವೆ.

ಸುಹೇಲ್‌ ಅಲಿಯಾಸ್‌ ಗಾರ್ಡನ್‌- ಐದಾರು ವರ್ಷಗಳಿಂದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದುಷ್ಕೃತ್ಯಗಳಲ್ಲಿ ಭಾಗಿದಾರನಾಗಿದ್ದಾನೆ. ಕೊಲೆ ಯತ್ನ, ಸುಲಿಗೆ, ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಸೇರಿದಂತೆ 7 ಪ್ರಕರಣಗಳು ದಾಖಲಾಗಿವೆ.

ರಿಜ್ವಾನ್‌ ಅಲಿಯಾಸ್‌ ಕುಳ್ಳ ರಿಜ್ವಾನ್‌- ಹದಿನಾರು ವರ್ಷಗಳಿಂದ ಗೂಂಡಾಗಿರಿಯಲ್ಲಿ ತೊಡಗಿದ್ದಾನೆ. ಕೊಲೆ, ಸುಲಿಗೆ, ಕೊಲೆ ಯತ್ನ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಧಕ್ಕೆ ಸೇರಿದಂತೆ 14 ಪ್ರಕರಣಗಳು ದಾಖಲಾಗಿವೆ. ಅನೀಸ್‌ ಅಹಮದ್‌ ಅಲಿಯಾಸ್‌ ತ್ರಿಬಲ್‌ ಎಕ್ಸ್‌- ಹತ್ತು ವರ್ಷಗಳಿಂದ ಪಾತಕ ಲೋಕದಲ್ಲಿ ಸಕ್ರಿಯವಾಗಿದ್ದಾನೆ. ಕೊಲೆ, ದರೋಡೆ, ಅಪಹರಣ, ಹಲ್ಲೆ, ಕೊಲೆ ಯತ್ನ, ಸುಲಿಗೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸೇರಿದಂತೆ 16 ಪ್ರಕರಣಗಳು ದಾಖಲಾಗಿವೆ.
 

click me!