11 ರೇಪುಗಳು ; ಹತ್ತಾರು ಅನುಮಾನಗಳು/ ಉತ್ತರ ಪ್ರದೇಶದ ಪೊಲೀಸರ ಎಡವಟ್ಟು/ ದೇಶಾದ್ಯಂತ ಪ್ರಶ್ನೆಗಳ ಸುರಿಮಳೆ/ ಅಖಾಡಕ್ಕೆ ಇಳಿದ ಕಾಂಗ್ರೆಸ್
ಡೆಲ್ಲಿ ಮಂಜು
ನವದೆಹಲಿ(ಅ.01): ದಿನಕ್ಕೆ 11 ಮಂದಿ ಮಹಿಳೆಯರು, ಯುವತಿಯರ ಮೇಲೆ ನಡೆಯುತ್ತಿದೆ ಅತ್ಯಾಚಾರ! ಕಳೆದ ನಾಲ್ಕು ವರ್ಷಗಳ ಅವಧಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಶೇ.20 ರಷ್ಟು ಹೆಚ್ಚಾಗಿವೆ. (ಎನ್ ಸಿ ಆರ್ ಬಿ ಅಂಕಿ-ಅಂಶಗಳು) ಇದುವೇ ನೋಡಿ ಉತ್ತರ ಪ್ರದೇಶದ ರೇಪ್ ರಿಪೋರ್ಟ್..!
ಒಂದು ವರ್ಷದ ಹಿಂದೆ ಇದೇ ದಿನಗಳಲ್ಲಿ ಉನ್ನಾವೊದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದು ದೇಶಾದ್ಯಂತ ಚರ್ಚೆಯಾಗಿತ್ತು. ಆ ಘಟನೆ ಮಾಸುವ ಮುನ್ನವೇ ದೆಹಲಿಗೆ 200 ಕಿಲೋಮೀಟರ್ ದೂರದಲ್ಲಿರುವ ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ದೌರ್ಜನ್ಯ ನಡೆದು ಹೋಗಿದೆ.
ದೌರ್ಜನ್ಯದ ಪರಮಾವಧಿ ಜೊತೆಗೆ ಪೊಲೀಸರ ಹೃದಯಹೀನತೆಯ ಕೆಲಸ ಉತ್ತರ ಪ್ರದೇಶ ಸರ್ಕಾರವನ್ನು ಕೆಂಡದ ಮೇಲೆ ಮಲಗುವಂತೆ ಮಾಡಿದೆ.
ನಡೆದಿದ್ದ ದೌರ್ಜನ್ಯ ಗಾಯದ ಮೇಲೆ ಉಪ್ಪು ಸವರಿದಂತೆ ಉತ್ತರ ಪ್ರದೇಶದ ಪೊಲೀಸರು ನಡೆದುಕೊಂಡಿದ್ದಾರೆ. ಒಂದು ಕುಟುಂಬ ಅದೆಷ್ಟು ಸಾರಿ ದೌರ್ಜನ್ಯ ಸಹಿಸಿಕೊಳ್ಳುತ್ತೆ ಅನ್ನೋದು ಗೊತ್ತಾಗದಂತಾಗಿದೆ. ಕೊನೆಯ ಬಾರಿಗೆ ಮಗಳ ಮುಖ ನೋಡದಂತೆ ಪೊಲೀಸರೇ ಯುವತಿಯ ಶವ ಸುಟ್ಟಿದ್ದು ಇದೀಗ ಹತ್ತಾರು ಪ್ರಶ್ನೆಗಳು, ಅನುಮಾನಗಳನ್ನು ಹುಟ್ಟು ಹಾಕಿದೆ.
ಪುತ್ತೂರಿನ ರೀತಿ ರೇಪ್ ಮಾಡಿ ವಿಡಿಯೋ ಹರಿಬಿಟ್ಟ ಪಾಪಿಗಳು!
ಆ ಅನುಮಾನಗಳು :
* ಅತ್ಯಾಚಾರ ನಡೆದಿದೆ ಅಂಥ ಪ್ರಕರಣ ದಾಖಲಿಸಿಕೊಂಡಿರುವ ಯುಪಿ ಪೊಲೀಸರು ಇದೀಗ ಇಲ್ಲ ಎನ್ನುತ್ತಿರುವುದು ಯಾಕೆ?
*ದೆಹಲಿ ಸಫ್ತರ್ ಜಂಗ್ ಆಸ್ಪತ್ರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅನೇಕ ಬಾರಿ ಕತ್ತು ಹಿಸುಕಲಾಗಿದೆ ಅಂತ ಬಂದಿದೆ. ಪ್ರಕರಣ ವಿವಾದದಲ್ಲಿದ್ದ ಕಾರಣಕ್ಕೆ ಮತ್ತೊಮ್ಮೆ ಶವಪರೀಕ್ಷೆ ಗೂ ಅವಕಾಶ ಇಲ್ಲದಂತೆ ಶವ ಸುಟ್ಟು ಹಾಕಲಾಗಿದೆ.
* ಹಲವು ದಿನಗಳ ಕಾಲ ಚಿಕಿತ್ಸೆ ನೀಡಿದ್ದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ವೈದ್ಯರು ಏಮ್ಸ್ ಆಸ್ಪತ್ರೆ ಗೆ ದಾಖಲಿಸುವಂತೆ ಹೇಳಿದರೂ, ಸಫರ್ ಜಂಗ್ ಆಸ್ಪತ್ರೆ ಗೆ ಸೇರಿಸಿದ್ದು ಯಾಕೆ?
* ಗ್ಯಾಂಗ್ ರೇಪ್, ಇತರೆ ಅಮಾನವೀಯ ಕ್ರೌರ್ಯಕ್ಕೆ ತುತ್ತಾದ ಯುವತಿಯ ಶವವನ್ನುರಾತ್ರಿ ಪೊಲೀಸರು ಅಂತ್ಯ ಸಂಸ್ಕಾರ ಮಾಡಿದ್ದು ಯಾಕೆ?
* ಕುಟುಂಬ ಸದಸ್ಯರೇ ಇಲ್ಲದೇ ಪೊಲೀಸರು ಯುವತಿಯ ಅಂತ್ಯಸಂಸ್ಕಾರ ನಡೆಸಿದ್ದು ಯಾಕೆ?
ರಾಹುಲ್, ಪ್ರಿಯಾಂಕಾ ಎಂಟ್ರಿ : ಪೊಲೀಸರ ಯಡವಟ್ಟಿನಿಂದ ಯುವತಿ ಶವಸಂಸ್ಕಾರದ ಬಳಿಕ ಇದೀಗ ಉತ್ತರ ಪ್ರದೇಶ ಉರಿಯುತ್ತಿದೆ. ರಾಜಕಾರಣಿಗಳು ಅಖಾಡಕ್ಕೆ ಇಳಿದ್ದಾರೆ. ಮಾಜಿ ಸಿಎಂ ಮಾಯಾವತಿ, ಅಖಿಲೇಶ್ ಯಾದವ್ ತೀವ್ರ ವಾಗಿ ಇದನ್ನು ಖಂಡಿಸಿದ್ದಾರೆ. ರಾಹುಲ್ ಗಾಂಧಿ, ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಕೂಡ ಅಖಾಡಕ್ಕೆ ಇಳಿದಿದ್ದಾರೆ.
ಹತ್ರಾಸ್ ಪ್ರಕರಣದ ಹಿಂದೆ ಪೊಲೀಸರ ಕೈವಾಡವಿದೆಯಾ?
ಹತ್ರಾಸ್ ನಲ್ಲಿರುವ ಯುವತಿಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಹೊರಟಿದ್ದ ರಾಹುಲ್ ಗಾಂಧಿ ಅವರನ್ನು ರಸ್ತೆಯಲ್ಲೇ ಪೊಲೀಸರು ತಡೆಯಲು ಯತ್ನಿಸಿದ್ದು, ಪೊಲೀಸರು ಮತ್ತು ರಾಹುಲ್ ಗಾಂಧಿ ನಡುವೆ ತಳ್ಳಾಟ ದೊಡ್ಡ ಸುದ್ದಿಯಾಗಿದೆ.
ಈ ಘಟನೆಯನ್ನು ಖಂಡಿಸಲು ಬಹುಶಃ ಯಾರ ಬಳಿಯೂ ಪದಗಳು ಇಲ್ಲ. ಗಲಾಟೆ ನಡೆಯಬಹುದು ಎಂಬ ಕಾರಣಕ್ಕೆ ಪೋಲೀಸರ ನಿರ್ಧಾರ ಸಮರ್ಥಿಸಲು ಅಸಾಧ್ಯ. ಆದ್ರೆ ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಎಸ್ ಐ ಟಿ, ರಾಹುಲ್ ಗಾಂಧಿಯವರು ಮನೆಗೆ ಹೋಗಲು ಯತ್ನಿಸಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತನಿಖೆ ಇವೆಲ್ಲಾ ಒಟ್ಟಿಗೆ ಸೇರಿ ಆ ಯುವತಿಯ ಸಾವಿಗೆ ನ್ಯಾಯ ಒದಗಿಸಿ, ಆರೋಪಿಗಳಿಗೆ ಶಿಕ್ಷೆಯಾದರೇ ಸಾಕು.