ಶಹಾಪುರದಲ್ಲಿ ಸರಣಿ ಕಳ್ಳತನ: ಹಣ ದೋಚಿದ ಖದೀಮರು

By Kannadaprabha News  |  First Published Oct 15, 2022, 2:30 PM IST

10ಕ್ಕೂ ಹೆಚ್ಚು ಅಂಗಡಿಗಳು ಕಳ್ಳತನ, ಶಹಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು, ಕಳ್ಳರನ್ನು ಪತ್ತೆಹಚ್ಚುವಲ್ಲಿ ಪೊಲೀಸ್‌ ಇಲಾಖೆ ವಿಫಲ, ಸಾರ್ವಜನಿಕರ ಆರೋಪ


ಶಹಾಪುರ(ಅ.15):  ನಗರದ ಹೃದಯ ಭಾಗದ ರಾಜ್ಯ ಹೆದ್ದಾರಿಯಲ್ಲಿನ ಗ್ಯಾರೇಜ್‌ ಲೈನ್‌ನಲ್ಲಿರುವ 10ಕ್ಕೂ ಹೆಚ್ಚು ಅಂಗಡಿಗಳಲ್ಲಿ ಗುರುವಾರ ತಡರಾತ್ರಿ ಸರಣಿ ಕಳ್ಳತನ ನಡೆದಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಸೂಪರ್‌ ಕಾರ್‌ ಮ್ಯೂಸಿಕ್‌ ವಲ್ಡ್‌, ಸರ್ವಿಸ್‌ ಸೆಂಟರ್‌ನಲ್ಲಿದ್ದ 45 ಸಾವಿರ ರು.ಗಳು, ಐಸ್‌ ಕ್ರೀಮ್‌ ಅಂಗಡಿಯ 5 ಸಾವಿರ ರು.ಗಳು, ಶೆಟ್ಟರ್‌ ಮುರಿದು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಎರಡು ಅಂಗಡಿಯಲ್ಲಿ ಹಣ ಇತ್ತು ಎನ್ನಲಾಗಿದೆ. ಉಳಿದ ಅಂಗಡಿಯಲ್ಲಿ ಕಳ್ಳತನವಾಗಿರುವ ಸಾಮಾನುಗಳ ಮಾಹಿತಿಯಿಲ್ಲ. 10ಕ್ಕೂ ಹೆಚ್ಚು ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿದ್ದು, ಅಂಗಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದಾರೆ. ಇದರಿಂದ ಶಹಾಪುರ ಜನತೆ ಬೆಚ್ಚಿ ಬಿದ್ದಿದ್ದಾರೆ.

ಕಳ್ಳತನ ವಿಷಯ ತಿಳಿದ ತಕ್ಷಣ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಯಿತು. ಈ ಕುರಿತು ಶಹಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Latest Videos

undefined

ಡ್ರಗ್ಸ್, ಐಷಾರಾಮಿ ಜೀವನಕ್ಕೆ ಕಳ್ಳತನ: ಸೆಕೆಂಡ್ ಫ್ಲೋರ್ ಬಾಲ್ಕನಿ ಮನೆಗಳೇ ಟಾರ್ಗೆಟ್‌

ಪೊಲೀಸರು ಮನಸ್ಸು ಮಾಡಿದರೆ ಕಳ್ಳತನವಾದ 24 ಗಂಟೆಯೊಳಗೆ ಕಳ್ಳರನ್ನು ಬಂಧಿಸಬಹುದು. ಆದರೆ, ಕಳ್ಳರ ಜೊತೆ ಕೆಲ ಪೊಲೀಸರ ನಡುವೆ ನಿಕಟ ಸಂಬಂಧವಿದೆ. ಪೊಲೀಸರಿಂದ ಕಳ್ಳರಿಗೆ ಮಾಹಿತಿ ರವಾನೆ ಆಗುತ್ತದೆ. ಕಳ್ಳರು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಕೆಲವರು ಮಾಡಿದ ತಪ್ಪಿಗೆ ಪೊಲೀಸ್‌ ಇಲಾಖೆ ತಲೆತಗ್ಗಿಸುವ ಪರಿಸ್ಥಿತಿ ಬಂದಿದೆ. ಇದರ ಬಗ್ಗೆ ಮೇಲಾಧಿಕಾರಿಗಳಿಗೆ ಗೊತ್ತಿದ್ದರೂ ಅದನ್ನು ಮಟ್ಟಹಾಕಲು ಮುಂದಾಗುತ್ತಿಲ್ಲ ಎಂದು ಪೊಲೀಸ್‌ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಕಳ್ಳರ ಪತ್ತೆಗೆ ಪೊಲೀಸ್‌ ಇಲಾಖೆ ವಿಫಲ:

ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಫೆ.2ರಂದು ನಗರದ ಗೋಲಗೇರಿ ಹೋಲ್ಸೇಲ್‌ ತೆಂಗಿನಕಾಯಿ ವ್ಯಾಪಾರಿ ಅಂಗಡಿಯ ರೋಲಿಂಗ್‌ ಶೆಟರ್‌ ಬೀಗ ಮುರಿದು ಕಳ್ಳರು ಅಂಗಡಿಯಲ್ಲಿದ್ದ 5.85 ಲಕ್ಷ ರು.ಗಳು ದೋಚಿದ್ದರು. ಅಂಗಡಿಯಲ್ಲಿ ಕಳ್ಳತನ ಮಾಡುವ ವ್ಯಕ್ತಿಯ ಸ್ಪಷ್ಟಚಿತ್ರಣ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದರೂ ಪೊಲೀಸರು ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ. ಅಲ್ಲದೆ ಮೇ 30ರಂದು ಕೆಲ ಕಿರಾಣಿ ಅಂಗಡಿಗಳು ಸಹ ಕಳ್ಳತನವಾಗಿರುವ ಪ್ರಕರಣಗಳು ದಾಖಲಾಗಿದ್ದರೂ ಪೊಲೀಸ್‌ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಸಿಸಿಟಿವಿ ಅಳವಡಿಕೆಗೆ ಮನವಿ:

ಅಂಗಡಿ ಮಾಲೀಕರ ಹಿತ ದೃಷ್ಟಿಮತ್ತು ರಕ್ಷಣೆಯ ಉದ್ದೇಶದಿಂದ ಅಂಗಡಿಯ ಮಾಲೀಕರು ತಮ್ಮ ಅಂಗಡಿಗಳಿಗೆ ಸಿಸಿಟಿವಿ ಹಾಕಿಸಿಕೊಳ್ಳುವಂತೆ ಈಗಾಗಲೇ ಅಂಗಡಿ ಮಾಲೀಕರಿಗೆ ಸೂಚಿಸಲಾಗುತ್ತಿದೆ. ವ್ಯಾಪಾರಸ್ಥರು ಸಿಸಿಟಿವಿ ಹಾಕಿಸಿಕೊಳ್ಳದಿದ್ದರೆ ತಮ್ಮ ಅಂಗಡಿಯ ಲೈಸೆನ್ಸ್‌ ರದ್ದುಪಡಿಸಲಾಗುವುದು ಎಂದು ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಂಡ ಮನೆಗೆ ಕನ್ನ: ಅಮೇಜಾನ್ ಸೆಲ್ಲರ್ ಸರ್ವೀಸ್‌ನಲ್ಲಿ ಕಳ್ಳತನ

ಕಳೆದ 9 ತಿಂಗಳ ಹಿಂದೆ ತೆಂಗಿನ ಕಾಯಿ ಅಂಗಡಿಯಲ್ಲಿ ಕಳವಾದ ಪ್ರಕರಣ ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕಳ್ಳ ಉತ್ತರ ಭಾರತ ಕಡಿಯವನಾಗಿರುವುದರಿಂದ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಸ್ವಲ್ಪ ವಿಳಂಬವಾಗಿದೆ. ಕಳ್ಳನ ಸುಳಿವು ಸಿಕ್ಕಿದ್ದು ಆದಷ್ಟುಬೇಗ ಬಂಧಿಸಲಾಗುವುದು. ಇನ್ನು ಗುರುವಾರ ಮಧ್ಯರಾತ್ರಿಯಲ್ಲಿ ನಡೆದ ಸರಣಿ ಕಳ್ಳತನದ ಬಗ್ಗೆ ಪೊಲೀಸರು ಕಟ್ಟೆಚ್ಚರ ಕ್ರಮಗಳನ್ನು ಕೈಗೊಂಡಿದ್ದು, ಬೆರಳಚ್ಚು ತಜ್ಞರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವರದಿ ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತ ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಹೇಳಿದ್ದಾರೆ. 

ಇತ್ತೀಚೆಗೆ ನಗರದಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಹಾಡಹಗಲೇ ರೈತರ ಪಂಪ್‌ಸೆಟ್‌ಗಳು ಕಳುವಾಗುತ್ತಿವೆ. ಕಳ್ಳರನ್ನು ಬಂಧಿಸುವಲ್ಲಿ ಪೊಲೀಸ್‌ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪೊಲೀಸರು ಕಳ್ಳರನ್ನು ಬಂಧಿಸುವ ಬದಲು ಅವರ ಜೊತೆ ಶಾಮೀಲಾಗಿದ್ದಾರೆ ಎನ್ನುವ ಅನುಮಾನಗಳು ಬಲವಾಗಿ ಕಾಡುತ್ತಿವೆ. ತಕ್ಷಣ ಕಳ್ಳರನ್ನು ಬಂಧಿಸಿ ಕಳುವಾದ ವಸ್ತುಗಳು ವಾಪಸ್ಸು ಪಡೆದು ಮಾಲೀಕರಿಗೆ ಹಿಂತುರುಗಿಸಬೇಕು. ಇಲ್ಲದಿದ್ದರೆ ಐಜಿಪಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಅಂತ ಕರ್ನಾಟಕ ಪ್ರಾಂತ ರೈತ ಸಂಘ ಯಾದಗಿರಿ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ ತಿಳಿಸಿದ್ದಾರೆ.  
 

click me!