
ವಿಜಯಪುರ (ಜ.20): ವಿಜಯಪುರ ಪಟ್ಟಣದಲ್ಲಿ ಇಂದು ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಹಲವಾರು ಗಾಯಗೊಂಡಿದ್ದು, ರಸ್ತೆಯಲ್ಲಿದ್ದ ಪ್ರಯಾಣಿಕರು ಹಾಗೂ ಸ್ಥಳೀಯರು ಆತಂಕಗೊಂಡ ಘಟನೆ ನಡೆದಿದೆ.
ವಿಜಯಪುರ ನಗರದ ಲಲಿತ ಮಹಲ್ ಹೋಟೆಲ್ ಎದುರು ಈ ಅಪಘಾತ ಸಂಭವಿಸಿದೆ. ವಿಜಯಪುರದಿಂದ ಮುಂಬೈಗೆ ಸಂಚರಿಸಲು ಸಿದ್ಧವಾಗಿ ನಿಂತಿದ್ದ ಸಾಲು ಸಾಲು ಖಾಸಗಿ ಬಸ್‌ಗಳ ನಡುವೆ ಈ ಡಿಕ್ಕಿ ನಡೆದಿದೆ.
ಬೆಂಗಳೂರು ಹಾಗೂ ಮುಂಬೈಗೆ ಪ್ರಯಾಣಿಕರನ್ನು ಹೊತ್ತೊಯ್ಯಲು ರಸ್ತೆ ಬದಿಯಲ್ಲಿ ನಾಲ್ಕು ಖಾಸಗಿ ಬಸ್‌ಗಳು ಸಾಲಾಗಿ ನಿಂತಿದ್ದವು. ಈ ವೇಳೆ ಅತಿ ವೇಗವಾಗಿ ಬಂದ ಮತ್ತೊಂದು ಖಾಸಗಿ ಬಸ್, ನಿಂತಿದ್ದ ಬಸ್‌ಗಳಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮುಂಭಾಗದಲ್ಲಿದ್ದ ನಾಲ್ಕೂ ಬಸ್‌ಗಳು ಒಂದಕ್ಕೊಂದು ಡಿಕ್ಕಿಯಾಗಿ ಜಖಂಗೊಂಡಿವೆ.
ಚಾಲಕನಿಗೆ ಗಂಭೀರ ಗಾಯ
ಈ ಘಟನೆಯಲ್ಲಿ ಓರ್ವ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಗಾಯಾಳು ಚಾಲಕನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟ್ರಾಫಿಕ್ ಜಾಮ್ ನಿವಾರಣೆಗೆ ಪೊಲೀಸರ ಹರಸಾಹಸ
ಅಪಘಾತದಿಂದಾಗಿ ವಿಜಯಪುರದ ಈ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆಯ ಮಧ್ಯೆ ಸಿಲುಕಿದ್ದ ಬಸ್‌ಗಳನ್ನು ತೆರವುಗೊಳಿಸಿ, ಕಿಲೋಮೀಟರ್‌ಗಟ್ಟಲೆ ಉಂಟಾಗಿದ್ದ ಟ್ರಾಫಿಕ್ ಜಾಮ್ ನಿವಾರಿಸಲು ಪೊಲೀಸರು ಹರಸಾಹಸ ಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ