
ಹಾವೇರಿ(ಆ.20): ಪರಿಶಿಷ್ಟಜಾತಿ ಪ್ರಮಾಣಪತ್ರ ಪಡೆಯಲು ಸುಳ್ಳು ದಾಖಲಾತಿ ಸೃಷ್ಟಿಸಿ ಗ್ರಾಪಂ ಸದಸ್ಯೆಯಾಗಿ, ಅಧ್ಯಕ್ಷೆಯೂ ಆಗಿದ್ದ ಶಿಗ್ಗಾಂವಿ ತಾಲೂಕು ವನಹಳ್ಳಿ ಗ್ರಾಮದ ಲಕ್ಷ್ಮಿ ಮಾರುತಿ ಕಬ್ಬೇರ ಎಂಬವರಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 19 ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೇ ನಾರಾಯಣ ತೀರ್ಪು ನೀಡಿದ್ದಾರೆ.
ಶಿಗ್ಗಾಂವಿ ತಾಲೂಕು ವನಹಳ್ಳಿ ಗ್ರಾಮದ ಆರೋಪಿ ಲಕ್ಷ್ಮಿ ಕಬ್ಬೇರ ಹಿಂದೂ ಗಂಗಾಮತ (ಪ್ರ ವರ್ಗ-01)ಕ್ಕೆ ಸೇರಿದ್ದರೂ ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಸುಳ್ಳು ಘೋಷಣಾ ಪತ್ರ ಹಾಗೂ ಇತರ ದಾಖಲಾತಿಗಳನ್ನು ಸೃಷ್ಟಿಸಿ 2015ರ ಜೂ. 4ರಂದು ಶಿಗ್ಗಾಂವಿ ತಹಸೀಲ್ದಾರ್ ಕಚೇರಿಗೆ ಸಲ್ಲಿಸಿ, ಹಿಂದೂ ಗಂಟಿಚೋರ್ಸ್ ಪರಿಶಿಷ್ಟಜಾತಿಯ ಪ್ರಮಾಣಪತ್ರ ಪಡೆದು ಹನುಮರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಪರಿಶಿಷ್ಟಜಾತಿ ಮಹಿಳೆಗೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿ, ಆನಂತರ ಎಸ್‌ಸಿ ಸ್ಥಾನಕ್ಕೆ ಮೀಸಲಾಗಿದ್ದ ಗ್ರಾಪಂ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.
ಬೆಂಗಳೂರಲ್ಲಿ ಪೋಕ್ಸೋ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಸ್ವಗ್ರಾಮಕ್ಕೆ ಮೃತದೇಹ!
ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರ್ಕಾರ ಮತ್ತು ನೈಜ ಪರಿಶಿಷ್ಟಜಾತಿಯ ಅಭ್ಯರ್ಥಿಗೆ ಮೋಸ ಮಾಡಿದ ಕುರಿತಂತೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ದಾವಣಗೆರೆ ಡಿಸಿಆರ್‌ಒ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಜಿ. ಶ್ರೀಧರ ಶಾಸ್ತ್ರಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆರೋಪಿ ಮೇಲಿನ ಆಪಾದನೆಗಳು ರುಜುವಾತಾದ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಸರೋಜಾ ಕೂಲಗಿಮಠ ವಾದ ಮಂಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ