ಯೂಟ್ಯೂಬ್‌ ನೋಡಿ ವೈನ್‌ ಮಾಡಿದ ಬಾಲಕ: ಕುಡಿದು ಆಸ್ಪತ್ರೆ ಸೇರಿದ ಜೀವದ ಗೆಳೆಯ

By Suvarna NewsFirst Published Jul 30, 2022, 6:20 PM IST
Highlights

ಹೋಮ್‌ ಮೇಡ್ ಅಲ್ಲ ಫ್ರೆಂಡ್ ಮೇಡ್ ವೈನ್ ಕತೆ ಇದು. 12 ವರ್ಷದ ಬಾಲಕನೋರ್ವ ಯೂಟ್ಯೂಬ್‌ ನೋಡಿ ವೈನ್‌ ಮಾಡಿದ್ದು, ಅದನ್ನು ಕುಡಿದ ಆತನ ಸ್ನೇಹಿತ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ದೇವರನಾಡು ಕೇರಳದಲ್ಲಿ ನಡೆದಿದೆ.

ತಿರುವನಂತಪುರ: ಹೋಮ್‌ ಮೇಡ್ ಅಲ್ಲ ಫ್ರೆಂಡ್ ಮೇಡ್ ವೈನ್ ಕತೆ ಇದು. 12 ವರ್ಷದ ಬಾಲಕನೋರ್ವ ಯೂಟ್ಯೂಬ್‌ ನೋಡಿ ವೈನ್‌ ಮಾಡಿದ್ದು, ಅದನ್ನು ಕುಡಿದ ಆತನ ಸ್ನೇಹಿತ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ದೇವರನಾಡು ಕೇರಳದಲ್ಲಿ ನಡೆದಿದೆ. ಪ್ರಸ್ತುತ ಬಾಲಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಬಾಲಕನ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಯೂಟ್ಯೂಬ್‌ ಅಥವಾ ಇಂಟರ್‌ನೆಟ್‌ಗೆ ಅರಿಯದೇ ಇರುವ ವಿಚಾರಗಳಿಲ್ಲ. ಪ್ರತಿಯೊಂದು ಸಣ್ಣ ಸಮಸ್ಯೆಯಿಂದ ಹಿಡಿದು ದೊಡ್ಡ ವಿಚಾರಗಳವರೆಗೆ ಹಲವು ಸಮಸ್ಯೆಗಳಿಗೆ ಪರಿಹಾರವಿದೆ. ಯೂಟ್ಯೂಬ್ ನೋಡಿ ಏನೇನೋ ಮೋಟಾರು ಸೇರಿ ಹಲವು ಹೊಸ ಆವಿಷ್ಕಾರಗಳನ್ನು ಕಂಡು ಹಿಡಿದ ಅನೇಕರನ್ನು ನಾವು ನೋಡಿದ್ದೇವೆ. ಬಹುಶಃ ಇದೆಲ್ಲದರಿಂದ ಪ್ರೇರಣೆ ಪಡೆದ 11 ವರ್ಷದ ಪುಟ್ಟ ಬಾಲಕನೋರ್ವ ಯೂಟ್ಯೂಬ್‌ ನೋಡಿ ವೈನ್‌ ಮಾಡಿದ್ದಾನೆ. ಬರೀ ವೈನ್‌ ಮಾಡಿದ್ದರೆ ಆತ ಸುದ್ದಿಯಾಗುತ್ತಿರಲಿಲ್ಲ. ಆದರೆ ಈ ವೈನ್ ಅನ್ನು ಸ್ನೇಹಿತನಿಗೆ ನೀಡಲು ಹೋಗಿ ಆತ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾನೆ. ವೈನ್ ಕುಡಿದ ಬಾಲಕನಿಗೆ ಅದರ ಅಮಲು ತಲೆಗೇರಿದ್ದು, ಆತ ತಲೆಸುತ್ತಿ ಬಿದ್ದಿದ್ದಲ್ಲದೇ ವಾಂತಿ ಮಾಡಿಕೊಂಡಿದ್ದಾನೆ. 

ವಿಷಯ ತಿಳಿದ ಮನೆಯವರು ಬಾಲಕನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಕೇರಳದ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಬಾಲಕ ತನ್ನ ಪೋಷಕರು ಮನೆಗೆ ತಂದ ದ್ರಾಕ್ಷಿ ಹಣ್ಣುಗಳನ್ನು ಬಳಸಿ ತಾನು ವೈನ್‌ ಮಾಡಿದ್ದಾಗಿ ಹೇಳಿದ್ದಾನೆ. ಆದರೆ ಇದರ ತಯಾರಿಗಾಗಿ ತಾನು ಯಾವುದೇ ಅಲ್ಕೋಹಾಲ್ ಅಂಶ ಅಥವಾ ಸ್ಪೀರಿಟ್ ಅನ್ನು ಬಳಸಿಲ್ಲ ಎಂದು ಬಾಲಕ ಹೇಳಿಕೊಂಡಿದ್ದಾನೆ. ಯೂಟ್ಯೂಬ್‌ನಲ್ಲಿ ತೋರಿಸಿದಂತೆ ವೈನ್‌ ತಯಾರಿಸಿದ ಬಾಲಕ ಅದನ್ನು ಬಾಟಲ್‌ನಲ್ಲಿ ತುಂಬಿಸಿ ಮಣ್ಣಿನೊಳಗೆ ಹೂತ್ತಿಟ್ಟಿದ್ದ ಎಂದು ಪೊಲೀಸರಿಗೆ ಹೇಳಿದ್ದಾನೆ. 

ನಂತರ ಪೊಲೀಸರು, ಬಾಲಕ ಶಾಲೆಗೆ ತಂದು ತನ್ನ ಸ್ನೇಹಿತನಿಗೆ ನೀಡಿದ ವೈನ್‌ನ ಸ್ಯಾಂಪಲ್ ಅನ್ನು ವಶಕ್ಕೆ ಪಡೆದಿದ್ದು, ತಿರುವನಂತಪುರದ ಸ್ಥಳೀಯ ನ್ಯಾಯಾಲಯದ ಅನುಮತಿಯ ಮೇರೆಗೆ ರಾಸಾಯನಿಕ ಪರೀಕ್ಷಾ ತಪಾಸಣೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಬಾಲಕ ತಯಾರಿಸಿದ ವೈನ್‌ಗೆ ಸ್ಪಿರೀಟ್ ಅಥವಾ ಇತರ ಮತ್ತು ಬರಿಸುವ ವಸ್ತುಗಳನ್ನು ಬಳಸಲಾಗಿದೆಯೇ ಎಂದು ತಪಾಸಣೆ ನಡೆಸುವ ಸಲುವಾಗಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಅಲ್ಕೋಹಾಲ್‌ನ ಅಂಶ ಕಂಡು ಬಂದಲ್ಲಿ ಬಾಲಾಪರಾಧ ಕಾಯ್ದೆಯಡಿ ನಾವು ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ಈ ಕಿತಾಪತಿಯಿಂದಾಗಿ ಈಗ ಶಾಲಾ ಆಡಳಿತ ಸಮಿತಿಯವರು ಹಾಗೂ ಪೋಷಕರು ಕೋರ್ಟ್‌ಗೆ ಅಲೆಯುವಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇತ್ತ ಗೆಳೆಯ ನೀಡಿದ ಹೋಮ್‌ ಮೇಡ್ ವೈನ್ ಕುಡಿದ ಅಸ್ವಸ್ಥಗೊಂಡಿದ್ದ ಬಾಲಕ ಸ್ವಲ್ಪ ಹೊತ್ತಿನಲ್ಲಿ ಹುಷಾರಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
 

click me!