
ಸಾತ್ನಾ: ಕಾರಿನಲ್ಲಿ ಬಂದು ಟೋಲ್ ಪಾವತಿಸದೇ ಗಲಾಟೆ ಮಾಡಿದ ಗುಂಪೊಂದು ಆ ಕ್ಷಣದಲ್ಲಿ ಟೋಲ್ ಪಾವತಿಸಿ ಬಳಿಕ ಬಂದು ಟೋಲ್ ಪ್ಲಾಜಾವನ್ನೇ ಧ್ವಂಸಗೊಳಿಸಿದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲಿಗೆ ಟೋಲ್ ಕಟ್ಟಲು ನಿರಾಕರಿಸಿ ಗಲಾಟೆ
ನಿನ್ನೆ ಸಂಜೆ 7.30ರ ಸುಮಾರಿಗೆ ರಾಂಪುರ ಬಘೇಲನ್ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ನಾ ಟೋಲ್ ಪ್ಲಾಜಾದಲ್ಲಿ ಘಟನೆ ನಡೆದಿದೆ. ಕೆಲ ಸ್ಥಳೀಯ ವರದಿಗಳ ಪ್ರಕಾರ, ಆರೋಪಿಗಳು ಮೊದಲಿಗೆ ಕಾರಿನಲ್ಲಿ ಬಂದು ಟೋಲ್ ಕಟ್ಟುವುದಕ್ಕೆ ನಿರಾಕರಿಸಿ ಗಲಾಟೆ ಮಾಡಿದ್ದಾರೆ. ಮಾತಿನ ಚಕಮಕಿಯ ನಂತರ ಅಂತಿಮವಾಗಿ ಅವರು ಅಲ್ಲಿ ಟೋಲ್ ಪಾವತಿ ಮಾಡಿ ಹೊರಟು ಹೋಗಿದ್ದಾರೆ. ಆದರೆ ಇದಾಗಿ ಒಂದು ಗಂಟೆಯ ನಂತರ ಅವರು ದಾಳಿ ಮಾಡಲೆಂದೇ ಪೂರ್ವ ನಿಯೋಜಿತವಾಗಿ ಮತ್ತೆ ಬಂದಿದ್ದು, ಟೋಲ್ ಫ್ಲಾಜಾದ ಗ್ಲಾಸ್‌ಗಳನ್ನು ಒಡೆದು ಧ್ವಂಸಗೊಳಿಸಿದ್ದಾರೆ.
ಒಂದು ಗಂಟೆಯ ನಂತರ ಮುಸುಕು ಧರಿಸಿ ಬಂದ ದುಷ್ಕರ್ಮಿಗಳು
ಆರೋಪಿಗಳೆಲ್ಲರೂ ಮುಸುಕುಧರಿಸಿ ಬಂದಿದ್ದು, ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದು ಟೋಲ್ ಪ್ಲಾಜಾದ ಕಿಟಕಿ ಗಾಜುಗಳನ್ನು ಒಡೆದು ಹಾಕುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇವರೆಲ್ಲರೂ 15ಕ್ಕೂ ಹೆಚ್ಚು ಬೈಕುಗಳಲ್ಲಿ ಆಗಮಿಸಿ ಈ ಕೃತ್ಯವೆಸಗಿದ್ದಾರೆ. ಟೋಲ್ ಕಚೇರಿಯನ್ನು ಧ್ವಂಸಗೊಳಿಸಿದ್ದಲ್ಲದೇ ಅಲ್ಲಿದ್ದ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಇದರಿಂದ ಅಲ್ಲಿದ್ದ ಕಂಪ್ಯೂಟರ್‌ಗಳು ಮತ್ತು ಇತರ ಉಪಕರಣಗಳು ಹಾನಿಗೊಳಗಾಗಿವೆ.
ಟೋಲ್ ಪ್ಲಾಜಾದ ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಘಟನೆಯಲ್ಲಿ ಆ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ ಡಜನ್‌ಗೂ ಹೆಚ್ಚು ಜನ ಗಾಯಗೊಂಡಿದ್ದಾರೆ. ದಾಳಿಕೋರರು ಓಡಿಹೋಗುವಾಗ ಕೆಲವು ಅಲ್ಲೇ ಇದ್ದ ವ್ಯಕ್ತಿಗಳು ಅವರನ್ನು ಬೆನ್ನಟ್ಟಲು ಪ್ರಯತ್ನಿಸಿರುವುದು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ಗಲಭೆ ಸುಮಾರು 30 ನಿಮಿಷಗಳ ಕಾಲ ನಡೆದಿದೆ. ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳಲ್ಲಿ ಬಂದು ಆರೋಪಿಗಳು ಈ ಕೃತ್ಯವೆಸಗಿದ್ದಾರೆ. ಈ ಸಂಪೂರ್ಣ ಕೃತ್ಯ ಟೋಲ್ ಪ್ಲಾಜಾದ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಟೋಲ್ ಪ್ಲಾಜಾ ವ್ಯವಸ್ಥಾಪಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ ಕೆಲವು ಈ ಕೃತ್ಯದಲ್ಲಿ ಭಾಗಿಯಾದವರನ್ನು ತ್ಯೋಂಧಾರಿ ಮತ್ತು ಅಹಿರ್ಗಾಂವ್ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೂ ಎಲ್ಲಾ ದಾಳಿಕೋರರು ಮಾಸ್ಕ್ ಧರಿಸಿದ್ದರಿಂದ, ಯಾರನ್ನೂ ಇನ್ನೂ ಅಧಿಕೃತವಾಗಿ ಗುರುತಿಸಲಾಗಿಲ್ಲ. ಈ ದಾಳಿಯಲ್ಲಿ ಟೋಲ್ ಪ್ಲಾಜಾದ 12ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಕೆಲವು ಸ್ಥಳೀಯ ಗ್ರಾಮಸ್ಥರು ಟೋಲ್ ಸಿಬ್ಬಂದಿ ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ ಮತ್ತು ಹತ್ತಿರದ ನಿವಾಸಿಗಳಿಂದ ಬಲವಂತವಾಗಿ ಟೋಲ್ ಸಂಗ್ರಹಿಸುತ್ತಾರೆ ಎಂದು ಹೇಳಿದ್ದಾರೆ. ಟೋಲ್ ಪ್ಲಾಜಾದಲ್ಲಿ ಇಂತಹ ವಿವಾದಗಳು ಸಾಮಾನ್ಯವಾಗಿದೆ ಎಂದು ಅವರು ಹೇಳಿದ್ದಾರೆ ಹೀಗಾಗಿ ದಾಳಿಕೋರರು ಸ್ಥಳೀಯ ಗ್ರಾಮಸ್ಥರೂ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದು ತನಿಖೆ ಮುಂದುವರೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ