ಕ್ಲೀನ್ ಚಿಟ್, ಸಂತೋಷ್ ಪಾಟೀಲ್ ಹುಟ್ಟೂರಿನಲ್ಲಿ ಈಶ್ವರಪ್ಪ, ಪೊಲೀಸರ ವಿರುದ್ಧ ಭುಗಿಲೆದ್ದ ಆಕ್ರೋಶ

By Ramesh BFirst Published Jul 20, 2022, 8:18 PM IST
Highlights

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅವರ ಅಭಿಮಾನಿಗಳು ಸಂಭ್ರಾಮಾಚರಣೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಈಶ್ವರಪ್ಪ ಹಾಗೂ ಪೊಲೀಸರ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಶಿವಮೊಗ್ಗ, (ಜುಲೈ.20): ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ.  ಉಡುಪಿ ನಗರ ಪೊಲೀಸರು ಬಿ ರಿಪೋರ್ಟ್ ಹಾಕಿದೆ.

 ಈಶ್ವರಪ್ಪ ಮೇಲಿನ ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ವರದಿಯನ್ನು ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್‌ಗೆ ಸಲ್ಲಿಸಿದೆ. ಇದರಿಂದ ಈಶ್ವರಪ್ಪಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.ಪ್ರಕರಣದಲ್ಲಿ ಖುಲಾಸೆಯಾಗುತ್ತಿದ್ದಂತೆ ಮಾಜಿ ಸಚಿವ ಈಶ್ವರಪ್ಪ ಅವರ ಶಿವಮೊಗ್ಗ ನಿವಾಸದಲ್ಲಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ.

Latest Videos

ಮತ್ತೊಂದೆಡೆ ಇದರ ವಿರುದ್ಧ ದಿ.ಸಂತೋಷ ಪಾಟೀಲ್ ಹುಟ್ಟೂರಿನಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಯುವಕರು ಪ್ರತಿಭಟನೆಗೆ ಇಳಿದಿದ್ದಾರೆ. ಅಲ್ಲದೇ ಸಂತೋಷ ಪಾಟೀಲ್ ಪತ್ನಿ ರೇಣುಕಾ ಕಣ್ಣೀರು ಹಾಕಿದ್ದಾರೆ.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್: ಈಶ್ವರಪ್ಪಗೆ ಬಿಗ್ ರಿಲೀಫ್

ಈಶ್ವರಪ್ಪ, ಪೊಲೀಸರ ವಿರುದ್ಧ ಪ್ರತಿಭಟನೆ
ಈಶ್ವರಪ್ಪಗೆ ಕ್ಲೀನ್ ಚಿಟ್ ಕೊಟ್ಟಿರುವ ಸುದ್ದಿ ಹರಡುತ್ತಿದ್ದಂತೆಯೇ ಇತ್ತ ಬೆಳಗಾವಿ ತಾಲೂಕಿನ ಬಡಸ ಗ್ರಾಮದ ದಿ.ಸಂತೋಷ ಪಾಟೀಲ್ ಮನೆ ಎದುರು ಪ್ರತಿಭಟನೆ ಮಾಡುತ್ತಿದ್ದು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಕೂಗಿದರು.

ಅಯ್ಯಯ್ಯೋ ಅನ್ಯಾಯ.. ಈಶ್ವರಪ್ಪಗೆ ಧಿಕ್ಕಾರ...ಪೊಲೀಸ್ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು,
ನ್ಯಾಯ ಸಿಗೋವರೆಗೂ ಹೋರಾಟ ಮಾಡ್ತೇವೆ ಎಂದಿದ್ದಾರೆ.

ಸಂತೋಷ ಪಾಟೀಲ್ ಪತ್ನಿ ರೇಣುಕಾ ಕಣ್ಣೀರು
ಬಿ ರಿಪೋರ್ಟ್‌ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂತೋಷ್ ಪಾಟೀಲ್ ಪತ್ನಿ ರೇಣಿಕಾ, ಪೊಲೀಸರು ಪ್ರಭಾವಕ್ಕೆ ಒಳಗಾಗಿ ತನಿಖೆ ಮಾಡಿದ್ದಾರೆ. ನನ್ನ ಗಂಡನ ಮೊಬೈಲ್‌ನಲ್ಲಿ ಎಲ್ಲಾ ಸಾಕ್ಷ್ಯಗಳು ಇದ್ದವು. ಈವರೆಗೂ ನನ್ನ ಗಂಡನ ಮೊಬೈಲ್ ನಮಗೆ ಕೊಟ್ಟಿಲ್ಲ. ನನ್ನ ಗಂಡನ ಸಹೋದರ ತನಖಾಧಿಕಾರಿ, ಎಸ್‌ಪಿಗೆ ಫೋನ್ ಮಾಡಿದ್ರೆ ರಿಸೀವ್ ಮಾಡಿಲ್ಲ ಎಂದು ಕಣ್ಣೀರು ಹಾಕಿದರು.

ರಾಜ್ಯಪಾಲರಿಗೆ ನಾನು ಪತ್ರ ಬರೆದು ಮನವಿ ಮಾಡಿದ್ದೆ. 15 ದಿನಗಳಲ್ಲಿ ನಾನು ಪ್ರಕರಣದಿಂದ ಹೊರ ಬರ್ತೀನಿ ಅಂತಾ ಈಶ್ವರಪ್ಪ ಹೇಳಿದ್ರು. ಈಗ ಬಿ ರಿಪೋರ್ಟ್ ಸಲ್ಲಿಕೆ ಆದ್ರೆ ಹಾಗೇ ಅನಿಸುತ್ತೆ ಅಲ್ವಾ? ಡೆತ್‌ನೋಟ್ ಬರೆದ್ರೆ ಮಾತ್ರ ಮಾನ್ಯ ಆಗುತ್ತಾ? ನಾವು ಡೆತ್‌ನೋಟ್ ಬರೆದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ್ರೆ ಮಾನ್ಯ ಆಗುತ್ತಾ? ಎಂದು ಆಕ್ರೊಶ ವ್ಯಕ್ತಪಡಿಸಿದರು.

ಸಂತೋಷ್ ಆತ್ಮಹತ್ಯೆ ಕೇಸ್, ಈಶ್ವರಪ್ಪಗೆ ಕ್ಲೀನ್ ಚಿಟ್, ಪೋಸ್ಟರ್ ವೈರಲ್

ನನ್ನ ಗಂಡ ಸಂತೋಷ ಪಾಟೀಲ್ ಸಾವಿಗೆ ನ್ಯಾಯ ಸಿಕ್ಕಿಲ್ಲ. ನ್ಯಾಯಾಲಯದಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇವೆ. ಪ್ರಕರಣವನ್ನು ಸಿಬಿಐ ತನಿಖೆಗೆ ನಾವು ಆಗ್ರಹಿಸುತ್ತೇವೆ. ಈ ಸಂಬಂಧ ಬೇಕಾದ್ರೆ ಸಿಎಂರನ್ನು ಭೇಟಿ ಆಗುತ್ತೇವೆ.  ಸಂತೋಷ ಪಾಟೀಲ್ ಸಾವಿನ ಸಂದರ್ಭದಲ್ಲಿ ಅನೇಕ ಭರವಸೆ ನೀಡಿದ್ರು. ಯಾವ ಭರವಸೆಯೂ ಇನ್ನೂ ಈಡೇರಿಲ್ಲ. ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಘಟನೆ ಹಿನ್ನೆಲೆ
ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ವಿರುದ್ದ ಶೇಕಡಾ 40ರಷ್ಟು ಕಮಿಷನ್‌ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಭಾರೀ ಸುದ್ದಿಯಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಏಪ್ರಿಲ್ 12 ರಂದು ಉಡುಪಿಯ ಖಾಸಗಿ ಹೋಟೆಲ್‌ನಲ್ಲಿ  ಆತ್ಮಹತ್ಯೆ ಮಾಡಿಕೊಂಡಿದ್ದರು.ಆದ್ರೆ, ಸಾವಿಗೆ ಮುನ್ನ ಸ್ನೇಹಿತರಿಗೆ ವಾಟ್ಸಪ್ ಸಂದೇಶ ಕಳಿಸಿದ್ದ ಸಂತೋಷ್, ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಈಶ್ವರಪ್ಪ ವಿರುದ್ಧ ಪ್ರತಿಭಟನೆ ಮಾಡಿದ್ದವು.  ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು.  ಪ್ರತಿಪಕ್ಷಗಳು ಈಶ್ವರಪ್ಪ ವಿರುದ್ಧ ಪ್ರತಿಭಟನೆ ಮಾಡಿದ್ದವು. ಕೊನೆಗೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಬೆಳಗಾವಿ ತಾಲೂಕಿನ ಬಡಸ ಗ್ರಾಮದ ನಿವಾಸಿ. ಬಡಸ ಗ್ರಾಮ ಬಿಟ್ಟು ಬೆಳಗಾವಿ ನಗರಕ್ಕೆ ಬಂದು ನೆಲೆಸಿದ್ದರು. ಬೆಳಗಾವಿ ಗ್ರಾಮಾಂತರ ಗ್ರಾಮ ಪಂಚಾಯಿತಿಯೊಂದರಲ್ಲಿ ವರ್ಕ್ ಆರ್ಡರ್ ಇಲ್ಲದೇ ಗ್ರಾಮದ ಅಭಿವೃದ್ಧಿ ಕೆಲಸ ಮಾಡಿದ್ದರು. ಕಾಮಗಾರಿ ಮಾಡಿದ ಹಣವನ್ನು ಬಿಡುಗಡೆ ಮಾಡುವಂತೆ ಸಂತೋಷ್ ಹಲವು ಬಾರಿ ಈಶ್ವರಪ್ಪ ಹಾಗೂ ಸಂಬಂಧಿಸಿದ ಅಧಿಕಾರಿಗಳ ಬಳಿ ಹೋಗಿ ಮನವಿ ಮಾಡಿಕೊಂಡಿದ್ದರು. ಆದ್ರೆ, ಹಣ ಮಾತ್ರ ಬಿಡುಗಡೆಯಾಗಿಲ್ಲ. ಇದರಿಂದ ಬೇರೆ ಕಡೆ ಸಾಲ ಮಾಡಿ ಕಾಮಗಾರಿ ಮಾಡಿದ್ದ ಸಂತೋಷ್‌ಗೆ ದಿಕ್ಕುತೋಚದಂತಾಗಿ ಕೊನೆಗೆ ಅವರು ಈಶ್ವರಪ್ಪನವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಉಡುಪಿ ಪೊಲೀಸರು ಬಿ ರಿಪೋರ್ಟ್ ಹಾಕಿದ್ದು, ಈಶ್ವರಪ್ಪ ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೇ ಅವರು ಮತ್ತೆ ಮಂತ್ರಿಯಾಗ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

click me!