ನಟ ವಿವೇಕ್ ಒಬೆರಾಯ್ ಮನೆಗೆ ಬೆಂಗಳೂರು ಪೊಲೀಸ್‌ ದಾಳಿ..!

By Kannadaprabha News  |  First Published Oct 16, 2020, 7:50 AM IST

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮನೆಯ ಮೇಲೆ ದಾಳಿ ನಡೆಸಿ ಹುಡುಕಾಟ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಮುಂಬೈ(ಅ.16): ಮಾದಕ ವಸ್ತು ಮಾರಾಟ ಜಾಲ ನಂಟು ಪ್ರಕರಣದ ಆರೋಪಿ ಆಗಿರುವ ತಮ್ಮ ಬಾಮೈದನಿಗೆ ಆಶ್ರಯ ನೀಡಿದ ಶಂಕೆ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಬಾಲಿವುಡ್‌ ನಟ ಹಾಗೂ ಖ್ಯಾತ ನೃತ್ಯಗಾತಿ ನಂದಿನಿ ಆಳ್ವ ಅವರ ಅಳಿಯ ವಿವೇಕ್‌ ಒಬೆರಾಯ್‌ ಮನೆ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ಗುರುವಾರ ದಾಳಿ ನಡೆಸಿ ಶೋಧಿಸಿದ್ದಾರೆ.

ಈ ಕೃತ್ಯ ಬೆಳಕಿಗೆ ಬಂದ ದಿನದಿಂದಲೂ ನಾಪತ್ತೆಯಾಗಿರುವ ಒಬೆರಾಯ್‌ ಅವರ ಬಾಮೈದ (ಪತ್ನಿ ಪ್ರಿಯಾಂಕ ಅವರ ಸೋದರ) ಆದಿತ್ಯ ಆಳ್ವನಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಆತ ಮುಂಬೈನಲ್ಲಿರುವ ತನ್ನ ಭಾವನ ಮನೆಯಲ್ಲಿ ಆತ ಆಶ್ರಯ ಪಡೆದಿರುವ ಶಂಕೆ ಮೂಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್‌ ಪಡೆದು ಸಿಸಿಬಿ ಇನ್ಸ್‌ಪೆಕ್ಟರ್‌ಗಳಾದ ಮಹಾನಂದ ಹಾಗೂ ರವಿ ಪಾಟೀಲ್‌ ನೇತೃತ್ವದ ತಂಡ ವಿಮಾನದಲ್ಲಿ ಗುರುವಾರ ಮುಂಬೈಗೆ ತೆರಳಿ ಒಬೆರಾಯ್‌ಗೆ ತನಿಖೆ ಬಿಸಿ ಮುಟ್ಟಿಸಿದೆ. ಮುಂಬೈನ ಬಾಲಿವುಡ್‌ ಸ್ಟಾರ್‌ಗಳ ನೆಲೆವೀಡಾಗಿರುವ ಜುಹು ಪ್ರದೇಶದಲ್ಲಿ ತಮ್ಮ ಕುಟುಂಬದ ಜತೆ ಒಬೆರಾಯ್‌ ನೆಲೆಸಿದ್ದಾರೆ.

Latest Videos

undefined

ಮನೆಯಲ್ಲೇ ಇದ್ದ ಒಬೆರಾಯ್‌:

ಒಬೆರಾಯ್‌ ಅವರ ಮನೆಗೆ ಮಧ್ಯಾಹ್ನ ಸಿಸಿಬಿ ಅಧಿಕಾರಿಗಳ ತಂಡ ತೆರಳಿದೆ. ಆದರೆ ಗೇಟ್‌ನಲ್ಲೇ ಅಧಿಕಾರಿಗಳನ್ನು ತಡೆದ ಒಬೆರಾಯ್‌ ಮನೆಯ ಭದ್ರತಾ ಸಿಬ್ಬಂದಿ, ಮನೆಯೊಳಗೆ ಪ್ರವೇಶಕ್ಕೆ ನಿರ್ಬಂಧಿಸಿದ್ದಾರೆ. ಆಗ ತಾವು ಸಿಸಿಬಿ ಅಧಿಕಾರಿಗಳು. ಡ್ರಗ್ಸ್‌ ಕೇಸ್‌ ಪ್ರಕರಣದ ತನಿಖೆ ಸಲುವಾಗಿ ಬಂದಿದ್ದೇವೆ ಎಂದಿದ್ದಾರೆ. ಅಧಿಕಾರಿಗಳ ತಂಡದ ಆಗಮನ ವಿಚಾರವನ್ನು ಒಬೆರಾಯ್‌ ಗಮನಕ್ಕೆ ಭದ್ರತಾ ಸಿಬ್ಬಂದಿ ತಂದಿದ್ದಾರೆ. ಕೊನೆಗೆ ನ್ಯಾಯಾಲಯದ ಸರ್ಚ್ ವಾರಂಟ್‌ ತೋರಿಸಿದ ಬಳಿಕ ಅಧಿಕಾರಿಗಳ ಮನೆ ಪ್ರವೇಶಕ್ಕೆ ಒಬೆರಾಯ್‌ ಒಪ್ಪಿದ್ದಾರೆ.

ಐಪಾಡ್ ಕೊಡಿ: ಜೈಲಿನಲ್ಲಿರೋ ರಾಗಿಣಿಯ 3 ಡಿಮ್ಯಾಂಡ್

ಮೂರು ಗಂಟೆಗಳ ಕಾಲ ಮನೆಯಲ್ಲಿ ಹುಡುಕಾಟ ನಡೆಸಿದ ಸಿಸಿಬಿ ಅಧಿಕಾರಿಗಳು, ಆದಿತ್ಯ ಆಳ್ವನ ಬಗ್ಗೆ ವಿವೇಕ್‌ ಹಾಗೂ ಅವರ ಪತ್ನಿ ಪ್ರಿಯಾಂಕ ಆಳ್ವ ಅವರನ್ನು ಪ್ರಶ್ನಿಸಿ ಹೇಳಿಕೆ ಪಡೆದಿದ್ದಾರೆ. ಈ ವೇಳೆ ತಮಗೇನೂ ಗೊತ್ತಿಲ್ಲ. ಪ್ರಕರಣ ಬೆಳಕಿಗೆ ಬಂದ ನಂತರ ನಮ್ಮನ್ನು ಆತ ಸಂಪರ್ಕಿಸಿಲ್ಲ. ಅನಗತ್ಯವಾಗಿ ನಮಗೆ ತೊಂದರೆ ಕೊಡಬೇಡಿ ಎಂದು ಇಬ್ಬರೂ ಹೇಳಿದ್ದಾರೆ. ಕೊನೆಗೆ ಬೆಂಗಳೂರಿಗೆ ವಿಚಾರಣೆಗೆ ಹಾಜರಾಗುವಂತೆ ಪ್ರಿಯಾಂಕ ಅವರಿಗೆ ಸೂಚಿಸಿ ಪೊಲೀಸರು ಮರಳಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಆದಿತ್ಯ ಆಳ್ವನಿಗೆ ತಪ್ಪಿಸಿಕೊಳ್ಳಲು ನೆರವು ನೀಡಿದ ಆರೋಪದ ಮೇರೆಗೆ ಮಾಜಿ ಭೂಗತ ಲೋಕದ ಡಾನ್‌ ದಿ.ಮುತ್ತಪ್ಪ ರೈ ಪುತ್ರ ರಿಕ್ಕಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಅಲ್ಲದೆ, ಸದಾಶಿವನಗರ ಹಾಗೂ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ರೈ ಮನೆಗಳ ಮೇಲೂ ಸಿಸಿಬಿ ದಾಳಿ ನಡೆದಿತ್ತು. ಈಗ ಆಳ್ವನ ಭಾವನಿಗೆ ಸಿಸಿಬಿ ತನಿಖೆಯ ಬಿಸಿ ಮುಟ್ಟಿದೆ.

ಡ್ರಗ್ಸ್‌ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಆದಿತ್ಯ ಆಳ್ವ ಪತ್ತೆಗೆ ಹುಡುಕಾಟ ನಡೆದಿದೆ. ಇದರ ಭಾಗವಾಗಿ ಮುಂಬೈನಲ್ಲಿರುವ ಆತನ ಸೋದರಿಯ ಮನೆಯಲ್ಲೂ ಶೋಧ ನಡೆಸಲಾಗಿದೆ.

- ಸಂದೀಪ್‌ ಪಾಟೀಲ್‌, ಜಂಟಿ ಆಯುಕ್ತ (ಅಪರಾಧ)
 

click me!