
ಬೆಂಗಳೂರು(ಅ.16): ಡ್ರಗ್ಸ್ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಸೆ.28ರಂದು ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಗಿಣಿ ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅರ್ಜಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಹಾಗೂ ಪ್ರಕರಣ ದಾಖಲಿಸಿಕೊಂಡಿರುವ ಕಾಟನ್ ಪೇಟೆ ಠಾಣೆ ಪೊಲೀಸರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ರಾಗಿಣಿ ಜೊತೆ ನಂಟಿದ್ದ ಮತ್ತೊಬ್ಬ ಪೆಡ್ಲರ್ ಸಿಸಿಬಿ ವಶಕ್ಕೆ; ಡ್ರಗ್ಗಿಣಿಗೆ ಜೈಲು ಫಿಕ್ಸ್?
ಡ್ರಗ್ಸ್ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ತಾವು ಡ್ರಗ್ಸ್ ಸೇವಿಸಿಲ್ಲ ಅಥವಾ ಪೂರೈಕೆ ಅಥವಾ ಮಾರಾಟವೂ ಮಾಡಿಲ್ಲ. ಪೊಲೀಸರು ಮಾಡಿರುವ ಆರೋಪಗಳಿಗೆ ಸಾಕ್ಷ್ಯಧಾರ ಹಾಗೂ ದಾಖಲೆ ಇಲ್ಲ. ರವಿಶಂಕರ್ ಹೇಳಿಕೆ ಆಧರಿಸಿ ಹಾಗೂ ಕಾನೂನು ದುರ್ಬಳಕೆ ಮಾಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತಪಾಸಣೆ ವೇಳೆ ತಮ್ಮ ಮನೆಯಲ್ಲಿ ಯಾವುದೇ ಮಾದಕ ಪದಾರ್ಥಗಳು ಸಿಕ್ಕಿಲ್ಲ. ವಶಪಡಿಸಿ ಕೊಳ್ಳಲಾದ ವಸ್ತುಗಳಿಂದ ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾಗಿರುವ ಅಥವಾ ಡ್ರಗ್ಸ್ ಸೇವಿಸಿದ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ, ಆದರೂ ತಮ್ಮನ್ನು ಪೊಲೀಸರು ಬಂಧಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ರಾಗಿಣಿ ದೂರಿದ್ದಾರೆ.
ಪೊಲೀಸ್ ವಶದಲ್ಲಿದ್ದ ಅವಧಿಯಲ್ಲಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗಿದೆ. ಈಗಾಗಲೇ ಸಾಕಷ್ಟು ತನಿಖೆ ನಡೆಸಲಾಗಿದೆ. ಪೊಲೀಸ್ ವಿಚಾರಣೆ ಪೂರ್ಣಗೊಂಡಿದ್ದರೂ ತಮಗೆ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವಿಚಾರಣಾ ನ್ಯಾಯಾಲಯ ಕ್ರಮ ಸರಿಯಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ರಾಗಿಣಿ ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ