
ಬೆಂಗಳೂರು (ಜ.29): ಸಿಲಿಕಾನ್ ಸಿಟಿಯ ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೋ ಆಸ್ಪತ್ರೆ ಸಿಗ್ನಲ್ ಬಳಿ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ತಮ್ಮ ಪಾರ್ಚೂನರ್ ಕಾರನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಸಾಲಾಗಿ ನಿಂತಿದ್ದ ಎರಡು ಸ್ವಿಫ್ಟ್ ಡಿಜೈರ್ ಹಾಗೂ ಒಂದು ಸರ್ಕಾರಿ ಕಾರು ಸೇರಿದಂತೆ ಒಟ್ಟು ನಾಲ್ಕು ವಾಹನಗಳು ಜಖಂಗೊಂಡಿವೆ.
ಘಟನಾ ಸ್ಥಳಕ್ಕೆ ಧಾವಿಸಿದ ಹಲಸೂರು ಸಂಚಾರ ಪೊಲೀಸರು ನಟ ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದು 'ಡ್ರಿಂಕ್ ಆಂಡ್ ಡ್ರೈವ್' (DD) ತಪಾಸಣೆ ನಡೆಸಿದಾಗ ನಟ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ (ಪಾಸಿಟಿವ್). ಅಚ್ಚರಿಯ ವಿಷಯವೆಂದರೆ, ಅಪಘಾತ ಎಸಗಿದ ನಟನ ಕಾರಿನ ಇನ್ಸೂರೆನ್ಸ್ (ವಿಮೆ) ಕೂಡ ಲ್ಯಾಪ್ಸ್ ಆಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಪಾರ್ಚೂನರ್ ಕಾರನ್ನು ಸೀಜ್ ಮಾಡಿದ್ದು, ಹಲಸೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಅಪಘಾತದಿಂದಾಗಿ ಕಾರ್ ಮಾಲೀಕ ಕಂ ಚಾಲಕ ಶ್ರೀನಿವಾಸ್ ಎಂಬುವವರ ಬದುಕು ಬೀದಿಗೆ ಬಂದಿದೆ. ಪೊಲೀಸ್ ಸ್ಟೇಷನ್ ಮುಂದೆಯೇ ಕಣ್ಣೀರಿಟ್ಟ ಶ್ರೀನಿವಾಸ್, 'ನನ್ನ ಹೆಂಡತಿಯ ಒಡವೆ ಅಡವಿಟ್ಟು ಕೇವಲ ಒಂದು ವಾರದ ಹಿಂದಷ್ಟೇ ಈ ಹೊಸ ಕಾರು ಖರೀದಿಸಿದ್ದೆ. ಕಂಪನಿಯೊಂದಕ್ಕೆ ಬಾಡಿಗೆಗೆ ಓಡಿಸುತ್ತಾ ಜೀವನ ಸಾಗಿಸುತ್ತಿದ್ದೆ. ಫೆಬ್ರವರಿ 5ಕ್ಕೆ ಮೊದಲ ಇಎಂಐ (EMI) ಕಟ್ಟಬೇಕಿದೆ. ಈಗ ಕಾರು ಜಖಂಗೊಂಡು ನಿಂತು ಹೋದರೆ ನಾನು ಸಾಲ ತೀರಿಸುವುದು ಹೇಗೆ?' ಎಂದು ಅಳಲು ತೋಡಿಕೊಂಡಿದ್ದಾರೆ.
'ನಾನು ಸಿನಿಮಾ ನಟ' ಎಂದು ಸೊಕ್ಕು ಪ್ರದರ್ಶನ?
ಅಪಘಾತವಾದ ತಕ್ಷಣ ಕಾರಿನಿಂದ ಇಳಿದು ಬಂದ ಮಯೂರ್ ಪಟೇಲ್, 'ನಾನು ಸಿನಿಮಾ ನಟ ಮಯೂರ್ ಪಟೇಲ್, ಬೆಳಿಗ್ಗೆ ಎಲ್ಲ ಸರಿ ಮಾಡಿಕೊಡ್ತೀನಿ' ಎಂದು ಹೇಳಿ ಜಾರಿಕೊಳ್ಳಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಚಾಲಕ, 'ಇಲ್ಲ, ಅದೇನ್ ಸೆಟ್ಲ್ಮೆಂಟ್ ಆಗುತ್ತೊ ಈಗಲೇ ಮಾಡ್ಲಿ ಅಂತಾ ಪಟ್ಟು ಹಿಡಿದಿದ್ದಾರೆ. ಅದೇ ವೇಳೆಗೆ ಪೊಲೀಸರು ಸ್ಥಳಕ್ಕೆ ಬಂದು ನಟನನ್ನು ಕರೆದೊಯ್ದಿದ್ದಾರೆ. 'ಸಿಗ್ನಲ್‌ನಲ್ಲಿ ನಾವು ಸುಮ್ಮನೆ ನಿಂತಿದ್ದೆವು, ಕುಡಿದ ಅಮಲಿನಲ್ಲಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದಾರೆ' ಎಂದು ಶ್ರೀನಿವಾಸ್ ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ