ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿಯವರ ಸಾವು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಅವರ ಕುಟುಂಬದವರು ಈಗಾಗಲೇ ದೂರು ನೀಡಿದ್ದು ಇದೀಗ ಈ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ಸ್ನೇಹಿತರ ಒತ್ತಾಯ.
ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಮೇ 30): ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿಯವರ (H R Harish Halli) ಸಾವು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಅವರ ಕುಟುಂಬದವರು ಈಗಾಗಲೇ ದೂರು ನೀಡಿದ್ದು, ಸೂಕ್ತ ತನಿಖೆಯ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ಹರೀಶ್ ಹಳ್ಳಿ ಸ್ನೇಹಿತರ ಬಳಗದ ಪರವಾಗಿ ಗುರುಪಾದಯ್ಯ ಮಠದ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಪ್ಪಿತಸ್ಥ ಪೊಲೀಸರ ಮೇಲೆ ಕೇಸ್ ದಾಖಲಾಗಿ , ಅವರನ್ನು ಸಸ್ಪೆಂಡ್ ಮಾಡಿ , ಪ್ರಕರಣವನ್ನು ಸಿಐಡಿ ಗೆ ವಹಿಸಲಾಗಿದೆ ಎಂಬ ಮಾಹಿತಿ ದೊರೆತಿದೆ . ಪೊಲೀಸರ ಸುಪರ್ಧಿಯಲ್ಲಿರುವಾಗಲೇ ಸಾವನ್ನಪ್ಪಿದ ಹರೀಶ್ ಹಳ್ಳಿ ಸಾವಿನ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದರು.
ಇದೊಂದು ವ್ಯವಸ್ಥಿತ ಹತ್ಯೆ , ಇದರ ಹಿಂದೆ ದೊಡ್ಡ - ದೊಡ್ಡ ಕಾಣದ ಕೈಗಳಿವೆ ಎಂಬುದು ನಮ್ಮ ಅನುಮಾನ , ಸರ್ಕಾರ ಈ ಕೇಸನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕೆಂದು ಈ ಮೂಲಕ ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದರು.
ಸಾಮಾಜಿಕ ಕಾರ್ಯಕರ್ತನಾದ ಹರೀಶ್ ಹಳ್ಳಿ ಒಬ್ಬ ಧೈರ್ಯವಂತ , ಬುದ್ಧಿವಂತ ಹೋರಾಟಗಾರನಾಗಿದ್ದನು . ಸಣ್ಣ ಪುಟ್ಟ ಕೇಸ್‌ಗಳಿಗೆ ಹೆದರಿ ಓಡಿಹೋಗುವ , ಆತ್ಮಹತ್ಯೆ ಮಾಡಿಕೊಳ್ಳುವ ಜಾಯಮಾನದವನಾಗಿರಲಿಲ್ಲ . ಆತನ ವಿರುದ್ಧ ಕೊಲೆ , ದರೋಡೆ , ಅತ್ಯಾಚಾರದಂತಹ ತೀವ್ರ ಕ್ರಿಮಿನಲ್ ಕೇಸ್ ದಾಖಲಾಗಿರಲಿಲ್ಲ . ಆತನೇನು ಉಗ್ರಗಾಮಿಯಾಗಿರಲಿಲ್ಲ , ಕೇವಲ ಈತನ ವಿರುದ್ಧ ದಾಖಲಾಗಿದ್ದ ಖಾಸಗಿ ನಿವೇಶನಗಳ ನಕಲಿ ದಾಖಲೆ ಸೃಷ್ಟಿ ಕೇಸ್ ( 420 ಕೇಸ್ ) ಎಫ್.ಐ.ಆರ್ , ಆದ 3-4 ದಿನಗಳ ನಂತರ , ಅದೂ ಮಧ್ಯರಾತ್ರಿ ಹೋಗಿ ಮೊಲೀಸರು ಆತನನ್ನು ಆರೆಸ್ಟ್ ಮಾಡಿ ತರುವ ಅವಶ್ಯಕತೆ ಏನಿತ್ತು ? ಎಂದು ಅನುಮಾನ ಮೂಡುತ್ತದೆ ಎಂದರು.
ಕೇವಲ ಸಿವಿಲ್ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಎನ್ನುವುದು ಶುದ್ಧ ಸುಳ್ಳು , ಇಲ್ಲಿ ಹರೀಶ್‌ನನ್ನು ಮಧ್ಯರಾತ್ರಿ ಕರೆತಂದ ಪೊಲೀಸರ ಕಾರ್ಯವೈಖರಿ ತುಂಬಾ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ . ತನ್ನ ವಿರುದ್ಧ ಎಫ್.ಐ.ಆರ್ . ದಾಖಲಾಗಿದೆ ಎಂದು ತಿಳಿದಿದ್ದರೂ ಆತ ಎಲ್ಲಿಯೂ ಓಡಿಹೋಗಿರಲಿಲ್ಲ . ಫೋನ್ ಮಾಡಿದ್ದರೆ ಸ್ಟೇಷನ್‌ಗೆ ಬರುತ್ತಿದ್ದ ಅಥವಾ ಹಗಲು ಹೊತ್ತಲ್ಲಿ ಅರೆಸ್ಟ್ ಮಾಡಬಹುದಿತ್ತು . ಪೊಲೀಸರು ತಮ್ಮ ಜೀಪಿನ ಬದಲು ಆತನ ಕಾರಿನಲ್ಲಿಯೇ ಆತನನ್ನು ಕರೆದುಕೊಂಡು ಬಂದಿದ್ದಾರೂ ಏಕೆ ? ಇನ್ನು , ದೇಹದ ಮೇಲೆ ಆಗಿರುವ ಗಾಯಗಳನ್ನು ನೋಡಿದರೆ ಮತ್ತು ಡೆತ್ ಸ್ಪಾಟ್ ನೋಡಿದರೆ ಇದೊಂದು ವ್ಯವಸ್ಥಿತ ಕೊಲೆ ಎಂಬ ಅನುಮಾನ ಬರುತ್ತದೆ. ಡೆತ್‌ಸ್ಪಾಟ್ ನೋಡಿದರೆ ದೇಹವನ್ನು ಫೈಓವರ್ ಮೇಲಿಂದ ಎತ್ತಿ ಹಾಕಿದ ತರಹ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಹರೀಶ್ ಹಳ್ಳಿ ಪೊಲೀಸ್ ಇಲಾಖೆಯಲ್ಲಿನ ಕೆಲವು ಹಗರಣಗಳನ್ನು ವಿಶೇಷವಾಗಿ ರಾಜ್ಯದ್ಯಾಂತ ಸುದ್ದಿಯಾಗಿದ್ದ ಅನಾಥ ಶವಗಳ ಮಾರಾಟ ಮಾಫಿಯಾದ ಬಗ್ಗೆ , ಕೆಲವು ಅಧಿಕಾರಸ್ಥರು , ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಅಕ್ರಮ ಭೂಮಾಫಿ, ಅಕ್ರಮ ಗಣಿಗಾರಿಕೆ , ವಿವಿಧ ಇಲಾಖೆಗಳ ಭ್ರಷ್ಟಾಚಾರದ ವಿರುದ್ಧ ಹತ್ತು ಹಲವು ಹೋರಾಟಗಳನ್ನು ಮಾಡಿದ್ದಾರೆ. ಮತ್ತು ಘನ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನೂ ಸಹ ಹೂಡಿದ್ದಾರೆ. ಉನ್ನತ ಅಧಿಕಾರಿಗಳು ಮತ್ತು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳ ವಿರೋಧವನ್ನು ಎದುರಿಸುತ್ತಿದ್ದರು.
ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಫ್ಲೈ ಓವರ್ ಮೇಲಿಂದ ಬಿದ್ದು ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು
ಈ ಹಿಂದೆ ಹಲವಾರು ಪೊಲೀಸ್ ಅಧಿಕಾರಿಗಳು ವಿನಾಕಾರಣ ಈತನ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿ ಠಾಣೆಗೆ ಕರೆತಂದು ಹಿಂಸೆ ನೀಡಿದ ಉದಾಹರಣೆಗಳು ಸಾಕಷ್ಟಿವೆ . ಈ ಎಲ್ಲಾ ಕಾರಣಗಳಿಂದ ಈ ಸಾವಿನ ಹಿಂದೆ ಒಂದು ದೊಡ್ಡ ಷಡ್ಯಂತ್ರ ಅಡಗಿದೆ , ಕಾಣದ ಕೈಗಳು ಕೆಲಸ ಮಾಡಿವೆ ಎಂಬುದು ನಮ್ಮ ಅನುಮಾನ , ಹಾಗಾಗಿ ಈ ಕೂಡಲೇ ಘನ ಸರ್ಕಾರ ಈ ಪ್ರಕರಣವನ್ನು ಸಿಬಿಐ ಗೆ ವಹಿಸಿದರೆ ಮಾತ್ರ ಸತ್ಯ ಹೊರಬರುತ್ತದೆ ಎಂಬುದು ನಮ್ಮ ಆಗ್ರಹ ಎಂದು ಬಳಗದ ಸದಸ್ಯರು ಹೇಳಿದರು.
ಬ್ರಿಟಿಷರ ಜೊತೆಗೆ ಸಶಸ್ತ್ರವಾಗಿ ಹೋರಾಡಿದ್ದ ಇಂಚಗೇರಿ ಮಠದ ಕ್ರಾಂತಿಯೋಗಿಯ ಪುಣ್ಯಸ್ಮರಣೆ
ಸುದ್ದಿಗೋಷ್ಠಿಯಲ್ಲಿ ಬಳಗದ ಎಂ.ಜಿ ಶ್ರೀಕಾಂತ್, ಗಿರೀಶ್ ಎಸ್ ದೇವರಮನಿ,ಕೆ.ಟಿ ಗೋಪಾಲಗೌಡ,ನಾಗರಾಜ್ ಸುರ್ವೆ,ಮಲ್ಲಿಕಾರ್ಜುನ್ ಇಂಗಳೇಶ್ವರ್,ಚೇತನ್,ಬಲ್ಲೂರು ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.