ಬಾರಲ್ಲಿ 2 ರೌಡಿ ಗುಂಪುಗಳ ಮಾರಾಮಾರಿ. ಬಿಯರ್ ಬಾಟಲ್‌ಗಳಿಂದ ಪರಸ್ಪರ ಹೊಡೆದಾಡಿಕೊಂಡ ರೌಡಿಗಳು. ಐವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಪೊಲೀಸರು.
ಬೆಂಗಳೂರು (ಜು.18): ಬಾರ್‌ನ ಶೌಚಾಲಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ರೌಡಿ ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಇಬ್ಬರು ರೌಡಿ ಶೀಟರ್‌ಗಳು ಬಿಯರ್ ಬಾಟಲಿಯಲ್ಲಿ ಪರಸ್ಪರ ತಲೆಗೆ ಹೊಡೆದಾಡಿಕೊಂಡಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ರೌಡಿ ಶೀಟರ್ ರಾಘವೇಂದ್ರ(25) ಮತ್ತು ಶ್ರೀರಾಮಪುರ ಠಾಣೆ ರೌಡಿ ಶೀಟರ್ ಯಶವಂತ(24) ಗುಂಪುಗಳು ಹೊಡೆದಾಡಿಕೊಂಡಿವೆ. ಗಾಂಧಿನಗರ ಸೆವನ್ ಹಿಲ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಶನಿವಾರ ಮಧ್ಯರಾತ್ರಿ 12.15ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ಇಬ್ಬರು ರೌಡಿ ಶೀಟರ್‌ಗಳು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿ ಶೀಟರ್ ರಾಘವೇಂದ್ರ ತನ್ನ ಸ್ನೇಹಿತರಾದ ಅಕಾಶ್ ಮತ್ತು ನವೀನ್ ಜತೆಗೆ ಸೆವೆನ್ ಹಿಲ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಪಾರ್ಟಿ ಮಾಡಲು ತೆರಳಿದ್ದ. ಶನಿವಾರ ಮಧ್ಯರಾತ್ರಿ 12.15ರ ಸುಮಾರಿಗೆ ರಾಘವೇಂದ್ರ ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ಹೋಗಿದ್ದಾನೆ. ಈ ವೇಳೆ ಶೌಚಾಲಯದಲ್ಲೇ ಇದ್ದ ರೌಡಿ ಶೀಟರ್ ಯಶವಂತ್, ‘ನನ್ನೆ ಏಕೆ ಗುರಾಯಿಸುತ್ತಿಯಾ’ ಎಂದು ರಾಘವೇಂದ್ರನ ಜತೆಗೆ ಕಿರಿಕ್ ಮಾಡಿದ್ದಾನೆ.
ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಯಶವಂತ್ ಬಿಯರ್ ಬಾಟಲಿ ತೆಗೆದು ರಾಘವೇಂದ್ರನ ತಲೆಗೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಯಶವಂತ್‌ನ ಸಹಚರರು ರಾಘವೇಂದ್ರನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ರಾಘವೇಂದ್ರ ಹಾಗೂ ಆತನ ಸಹಚರರು ಯಶವಂತ್ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ. ಹೀಗೆ ಎರಡು ಗುಂಪುಗಳ ನಡುವೆ ಬಾರ್‌ನಲ್ಲಿ ಕೆಲ ಕಾಲ ಮಾರಾಮಾರಿ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಗೊಂಡಿದ್ದ ರೌಡಿಶೀಟರ್‌ಗಳಾದ ರಾಘವೇಂದ್ರ ಹಾಗೂ ಯಶವಂತ್‌ನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ದೂರು-ಪ್ರತಿದೂರು ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಠಾಣೆ ಪೊಲೀಸರು, ಐವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
BENGALURU CRIME NEWS; ಹುಟ್ಟುಹಬ್ಬಕ್ಕೆ ಕರೆದು ಬರ್ಬರವಾಗಿ ಯುವಕನ ಹತ್ಯೆ!
ಅನಧಿಕೃತ ಹುಕ್ಕಾ ಬಾರ್ ಮೇಲೆ ಸಿಸಿಬಿ ದಾಳಿ: ಅನಧಿಕೃತವಾಗಿ ತೆರೆಯಲಾಗಿದ್ದ ಹುಕ್ಕಾ ಬಾರ್ ಮೇಲೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ದಾಳಿ ನಡೆಸಿ ಸುಮಾರು .60 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ‘ಸಾಶ್ ಸ್ಕೈ’ ಹೆಸರಿನ ಹುಕ್ಕಾ ಬಾರ್ ತೆರೆದು ಯುವಕರನ್ನು ಮಾದಕ ಲೋಕದಲ್ಲಿ ತೇಲಿಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಹುಕ್ಕಾ ತಯಾರಿಸಲು ಬಳಸುತ್ತಿದ್ದ ಸುಮಾರು .60 ಸಾವಿರ ಮೌಲ್ಯದ ಪರಿಕರಗಳು, ಹುಕ್ಕಾ ಫ್ಲೇವರ್‌ಗಳು ಹಾಗೂ .11 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆ ಕೇಸ್‌ನಲ್ಲಿ ಸ್ಯಾಂಡಲ್‌ವುಡ್ ಖ್ಯಾತ ನಟಿ ಆಪ್ತ ಸೇರಿ ಇಬ್ಬರು ಅರೆಸ್ಟ್
ಆರೋಪಿಗಳು ನಿಯಮಬಾಹಿರವಾಗಿ ಹುಕ್ಕಾ ಬಾರ್ ತೆರೆದು ಯುವಕರಿಗೆ ಹುಕ್ಕಾ ಸರಬರಾಜು ಮಾಡಿ ಮಾದಕ ವ್ಯಸನಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಹುಕ್ಕಾ ಬಾರ್ ಮಾಲಿಕ ಮತ್ತು ಕ್ಯಾಶಿಯರ್ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.